ದರ್ಶನ್ ಜಾಮೀನು ರದ್ದು; ಮತ್ತೆ ಜೈಲಿಗೆ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ 7 ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಆದೇಶ ಹೊರಬಿದ್ದಿದೆ. ನಟ ದರ್ಶನ್ ಜಾಮೀನು ರದ್ದಾಗಿದೆ. ಜುಲೈ 24ರಂದು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು.
ಜಾಮೀನು ರದ್ದು ಮಾಡದಂತೆ ದರ್ಶನ್ ಪರ ವಕೀಲರು ಲಿಖಿತ ಕಾರಣಗಳನ್ನು ಸುಪ್ರೀಂಗೆ ಸಲ್ಲಿಸಿದ್ದರು. ದರ್ಶನ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಯಾಕೆ ಮಾಡಬೇಕು ಎಂದು ಕರ್ನಾಟಕದ ಸರ್ಕಾರದ ಪರ ವಕೀಲರು ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಲಿಖಿತ ಕಾರಣಗಳನ್ನು ನೀಡಿ ಮನವಿ ಮಾಡಿದ್ದರು.

ಅಂತಿಮವಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದಿದ್ದು ದರ್ಶನ್ ಮತ್ತೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದರ್ಶನ್ ಸೇರಿ ಪ್ರಕರಣದ 7 ಮಂದಿ ಆರೋಪಿಗಳ ಜಾಮೀನು ರದ್ದಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಹಿನ್ನೆಲೆ ತಕ್ಷಣವೇ ದರ್ಶನ್ ಪೊಲೀಸರಿಗೆ ಶರಣಾಗಬೇಕಿದೆ. ಮತ್ತೆ ಬಳ್ಳಾರಿ ಜೈಲಿಗೆ ದರ್ಶನ್ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಮಗಳು ಇದ್ದಾಳೆ ಹಾಗಾಗಿ ತಮ್ಮ ಜಾಮೀನು ರದ್ದು ಮಾಡಬಾರದು ಎಂದು ನಟಿ ಪವಿತ್ರಾ ಗೌಡ ಸುಪ್ರೀಂ ಕೋರ್ಟ್ ಬಳಿ ಮನವಿ ಮಾಡಿದ್ದರು. ಆದರೆ ಎಲ್ಲವೂ ವಿಫಲವಾಗಿದೆ. ಇದೀಗ ಜಾಮೀನು ರದ್ದಾಗಿದ್ದು ಪವಿತ್ರಾ ಪರಪ್ಪನ ಅಗ್ರಹಾರ ಜೈಲಿಗೆ ತೆರಳಬೇಕಿದೆ. ಬೆಂಗಳೂರು ಸೆಷನ್ ಕೋರ್ಟ್‌ಗೆ ಎದುರು ಆರೋಪಿಗಳು ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ಬಗ್ಗೆ ಕೂಡ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾ.ಜೆ.ಬಿ.ಪರ್ದಿವಾಲಾ, ಆರ್. ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ ಹೊರಬಿದ್ದಿದೆ. ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ತೀರ್ಪು ಲ್ಯಾಂಡ್ ಮಾರ್ಕ್ ತೀರ್ಪು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. "ಕಾನೂನಿನ ಮುಂದೆ ಎಲ್ಲರೂ ಒಂದೇ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಕಾನೂನು ಆಡಳಿತ ಎತ್ತಿ ಹಿಡಿಯಲಾಗಿದೆ. ಜೈಲಿನಲ್ಲಿ ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿದೆ. ಈ ವಿಚಾರದಲ್ಲಿ ಜೈಲು ಸೂಪರಿಂಟೆಂಡ್‌ನನ್ನು ಸಸ್ಪೆಂಡ್ ಮಾಡಬೇಕಿತ್ತು" ಎಂದು ಕೋರ್ಟ್ ಹೇಳಿದೆ.
ತನ್ನ ಪ್ರೇಯಸಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೆಟ್ಟಾಗಿ ಮೆಸೇಜ್ ಕಳುಹಿಸಿದ್ದಕ್ಕೆ ದರ್ಶನ್ ಕೋಪಗೊಂಡಿದ್ದರು. ತಮ್ಮ ಆಪ್ತರ ಮೂಲಕ ಆತನನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಕೂಡಿ ಹಾಕಿ ಥಳಿಸಿ ಬುದ್ದಿ ಕಲಿಸು ಪ್ರಯತ್ನ ಮಾಡಿದ್ದು ಈ ವೇಳೆ ಆತನ ಜೀವ ಹೋಗಿದೆ ಎನ್ನುವ ಆರೋಪ ಇದೆ. ಪ್ರಕರಣ ಸಂಬಂಧ ಕಳೆದ ವರ್ಷ ಜೂನ್ 11ರಂದು ದರ್ಶನ್ ಬಂಧನವಾಗಿತ್ತು.
131 ದಿನಗಳ ಬಳಿಕ ಮಧ್ಯಂತರ ಜಾಮೀನು ಪಡೆದು ನಟ ದರ್ಶನ್ ಹೊರ ಬಂದಿದ್ದರು. ಒಂದು ತಿಂಗಳ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಂದ ಹೈಕೋರ್ಟ್ ಜಾಮೀನು ನೀಡಿತ್ತು. ಬಳಿಕ ದರ್ಶನ್ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. 'ಡೆವಿಲ್' ಸಿನಿಮಾ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಇದೀಗ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಹ ಸಂಕಷ್ಟ ಎದುರಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮೃತ ರೇಣುಕಾಸ್ವಾಮಿ ಕುಟುಂಬ ಸದಸ್ಯರು ಪ್ರತಿಕ್ರಿಯಿಸಿದ್ದಾರೆ. ತಂದೆ ಮಾತನಾಡಿ ಸುಪ್ರೀಂ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications











