'ಥಗ್ ಲೈಫ್'ಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್, ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಾ ?
ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಮಾತು ಕಮಲ್ ಹಾಸನ್‌ಗೆ ಸದ್ಯ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಕರುನಾಡಿನಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಮಕಾಡೆ ಮಲಗಿದೆ. ಆದರೂ ಕೂಡ ಕಮಲ್ ಗೆ ಕನ್ನಡಿಗರ ಮೇಲೆ ವಿಶ್ವಾಸ ಇದೆ. ಬಿಡುಗಡೆಯಾದರೆ ಕನ್ನಡಿಗರು ತಮ್ಮ ಚಿತ್ರವನ್ನು ಮುಗಿ ಬಿದ್ದು ನೋಡುತ್ತಾರೆ ಎನ್ನುವ ನಂಬಿಕೆ ಇದೆ.
ಹೀಗಾಗಿಯೇ ಕನ್ನಡಿಗರ ಕ್ಷಮೆ ಕೇಳಲು ಒಪ್ಪದ ಕಮಲ್ ಹಾಸನ್ ಶತಾಯು ಗತಾಯು ತಮ್ಮ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲೇಬೇಕೆಂದು ಶಪಥ ಮಾಡಿದ್ದಾರೆ. ಕನ್ನಡಿಗರನ್ನು ಕೆಣಕಿ ಚಿತ್ರದ ಬಿಡುಗಡೆಗೆ ಅನುವು ಮಾಡಿಕೊಡಿ ಎಂದು ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ಆದರೆ .. ಹೈಕೋರ್ಟ್ ಕಮಲ್ ಹಾಸನ್‌ಗೆ ತಪರಾಕಿ ಹಾಕಿ ಕಳುಹಿಸಿದೆ. ಮೊದಲು ಕ್ಷಮೆ ಕೇಳಿ ಆಮೇಲೆ ನೋಡೋಣ ಎಂದಿದೆ. ಆದರೆ ಕಮಲ್ ಹಾಸನ್ ಹಠಮಾರಿ. ಹೈಕೋರ್ಟ್ ಸೂಚನೆಯನ್ನು ನೀಡಿದರು ಕೂಡ ಕ್ಷಮೆ ಕೇಳದ ಕಮಲ್ ಈಗ ಹೈಕೋರ್ಟ್‌ಗೆ ಸೆಡ್ಡು ಹೊಡೆದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಆದರೆ, ಕಮಲ್ ದುರಾದೃಷ್ಟ. ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಕಮಲ್ ಹಾಸನ್‌ಗೆ ಹಿನ್ನಡೆ ಆಗಿದೆ. ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಾಡಿದ ಸುಪ್ರೀ ಕೋರ್ಟ್‌ನ ನ್ಯಾಯಮೂರ್ತಿ ಪಿಕೆ ಮಿಶ್ರಾ ತುರ್ತು ಅರ್ಜಿ ವಿಚಾರಣೆಯನ್ನು ನಡೆಸಲು ನಿರಾಕರಿಸಿದ್ಧಾರೆ. ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಹೈಕೋರ್ಟ್‌ಗೆ ಹೋಗುವಂತೆ ನಿರ್ದೇಶಿಸಿದ್ದಾರೆ. ಈ ಹಿನ್ನೆಲೆ ಈಗ ಕಮಲ್ ಹಾಸನ್ ಅನಿವಾರ್ಯವಾಗಿ ಹೈಕೋರ್ಟ್ ಆದೇಶ ಬರುವವರೆಗೆ ಕಾಯಲೇಬೇಕಿದೆ.
ಇದಕ್ಕೂ ಮೊದಲು ಹೈಕೋರ್ಟ್‌ನಲ್ಲಿ ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕಮಲ್ ಹಾಸನ್ ಅವರೇನು ಭಾಷಾ ತಜ್ಞರೇ.. ಇತಿಹಾಸಕಾರರೇ.. ಎಂದು ಪ್ರಶ್ನೆ ಮಾಡಿದ್ದರು. ಒಂದು ಕ್ಷಮೆಯಿಂದ ಎಲ್ಲಾ ಸಮಸ್ಯೆ ಮುಗಿದು ಹೋಗುತ್ತಿತ್ತು, ಯಾವುದೇ ನಾಗರೀಕರಿಗೆ ಭಾವನೆಗಳಿಗೆ ನೋವುಂಟು ಮಾಡುವ ಹಕ್ಕು ಇಲ್ಲ ಎಂದು ಹೇಳಿದ್ದರು. ಜಲ, ನೆಲ, ಭಾಷೆ ಈ ಮೂರು ವಿಷಯಗಳು ಪ್ರತಿಯೊಬ್ಬ ನಾಗರೀಕನಿಗೂ ಮುಖ್ಯ. ಪಬ್ಲಿಕ್ ಫಿಗರ್ ಆಗಿದ್ದವರು ಇಂತಹ ಹೇಳಿಕೆ ಕೊಟ್ಟರೆ ಹೇಗೆ. ಯಾವುದೇ ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಿಲ್ಲ. ಅದಕ್ಕೆ ಸಾಕ್ಷಿ ಎಲ್ಲಿದೆ ? ಎಂದು ಪ್ರಶ್ನೆ ಕೇಳಿದ್ದರು.
ಇದರಿಂದಲೇ ಸಾಮರಸ್ಯ ಹಾಳಾಗಿದೆ. ಕರ್ನಾಟಕದ ಜನತೆ ಏನು ಕೇಳಿದ್ದಾರೆ? ಕೇವಲ ಕ್ಷಮೆ ಅಲ್ಲವೇ? ಎಂದಿದ್ದ ನ್ಯಾಯಮೂರ್ತಿ ನಾಗಪ್ರಸನ್ನ 'ಕನ್ನಡಿಗರ ಬಳಿ ಕ್ಷಮೆ ಕೇಳಿದರೆ ಮಾತ್ರ ಸಮಸ್ಯೆಗೆ ಪರಿಹಾರ' ಎಂದು ಪರೋಕ್ಷವಾಗಿ ಹೇಳಿದ್ದರು. ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದ್ದರು. ಆದರೆ ಅದಕ್ಕೂ ಮೊದಲೇ ಕಮಲ್ ಹಾಸನ್ ಸುಪ್ರೀಂ ಕೋರ್ಟ್ ಬಳಿ ಹೋಗಿದ್ದಾರೆ. ಆದರೆ ಅಲ್ಲಿಯೂ ಕೂಡ ಹಿನ್ನೆಡೆ ಆಗಿದೆ.
ಇನ್ನುಳಿದಂತೆ ಥಗ್ ಲೈಫ್ ಚಿತ್ರಕ್ಕೆ ಎಲ್ಲೆಡೆ ನಿರಸ ಪ್ರತಿಕ್ರಿಯೆ ಸಿಕ್ಕಿದೆ. ತಮಿಳು ಪ್ರೇಕ್ಷಕರೇ ಕಮಲ್ ಹಾಸನ್ ಅವರ ಚಿತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ. ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಥಗ್ ಲೈಫ್ ಸಿನಿಮಾ ವಿಶ್ವದಾದ್ಯಂತ 73 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 43 ಕೋಟಿ ರೂ. ಗ್ರಾಸ್ ಹಾಗೂ 36.9 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ.
ಸದ್ಯ ಥಗ್ ಲೈಫ್ ಕರ್ನಾಟಕದಲ್ಲಿ ಬಿಡುಗಡೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನಾಳೆ ಅರ್ಜಿ ವಿಚಾರಣೆ ನಡೆಯಲಿದೆ. ಕಮಲ್ ಹಾಸನ್ ಕ್ಷಮೆ ಕೇಳ್ತಾರಾ ? ಥಗ್ ಲೈಫ್ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











