ಆದೇಶ ಕಾಯ್ದಿರಿಸಿದ ಸುಪ್ರೀಂ; ದರ್ಶನ್ ಎದೆಯಲ್ಲಿ ನಡುಕ ಶುರು
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಏಳು ಮಂದಿಯ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‍ನಲ್ಲಿ ಜರುಗಿತು. ನಟ ದರ್ಶನ್ ಸೇರಿ ಜನ ಆರೋಪಿಗಳ ಪರ ವಾದ ಮಂಡನೆಯಾಯಿತು. ಕೊನೆಗೆ ಕೋರ್ಟ್ ಆದೇಶ ಕಾಯ್ದಿರಿಸಿದೆ. 10 ದಿನಗಳ ಬಳಿಕ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ.
ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೂತ್ರಾ ವಾದ ಮಂಡಿಸಿದರು. ದರ್ಶನ್ ಸೇರಿ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಬೇಲ್ ಕ್ಯಾನ್ಸಲ್ ಮಾಡುವಂತೆ ಆಗ್ರಹಿಸಿದರು. ಆರೋಪಿಗಳು ಬಹಳ ಪ್ರಭಾವಿಗಳು. ಹಾಗಾಗಿ ಅವರು ಜೈಲಿನ ಒಳಗೆ ಇರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು. ಬಳಿಕ ದರ್ಶನ್ ಪರ ವಕೀಲರಾದ ಸಿದ್ದಾರ್ಥ್ ದವೆ ತಮ್ಮ ವಾದ ಮುಂದಿಟ್ಟರು.

ವಾದ, ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಲಿಖಿತ ವಾದಾಂಶ ಸಲ್ಲಿಕೆಗೆ ಕೋರ್ಟ್ ಒಂದು ವಾರ ಕಾಲಾವಕಾಶ ನೀಡಿದೆ. 3 ಪುಟದೊಳಗೆ ವಾದಾಂಶ ಸಲ್ಲಿಸುವಂತೆ ಸೂಚಿಸಿದೆ. ಸದ್ಯ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ನಟ ದರ್ಶನ್ ಥಾಯ್ಲೆಂಡ್ ಪ್ರವಾಸದಲ್ಲಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ.
ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನು ಎನ್ನುವುದನ್ನು ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೂತ್ರಾ ಎಳೆ ಎಳೆಯಾಗಿ ಕೋರ್ಟ್ ಮುಂದೆ ಬಿಚ್ಚಿಟ್ಟರು. ಎಫ್‌ಎಸ್‌ಎಲ್ ವರದಿ, ಪೋಸ್ಟ್ ಮಾರ್ಟಂ ವರದಿಯನ್ನು ಕೂಡ ಅವರು ಉಲ್ಲೇಖಿಸಿದರು. ಕಳೆದ ವರ್ಷ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬಯಲಿಗೆ ಬಂದಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿ ದರ್ಶನ್ ಸೇರಿ ಹಲವರು ಜೈಲು ಸೇರಿದ್ದರು.
ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ಇದ್ದವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಆದರೆ ಅವರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ನೀಡಿರುವ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಇಂದಿನ ವಿಚಾರಣೆ ವೇಳೆ ದರ್ಶನ್ ಪರ ವಕೀಲರಿಗೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳು ಆರೋಪಿಗಳಿಗೆ ಆತಂಕ ಹುಟ್ಟಿಸುವಂತಿದೆ.
ಇನ್ನು 10 ದಿನಗಳ ಕಾಲ ದರ್ಶನ್ & ಗ್ಯಾಂಗ್ ರಿಲ್ಯಾಕ್ಸ್ ಆಗಬಹುದು. ಆದರೆ ಮುಂದೆ ಸುಪ್ರೀಂ ಕೋರ್ಟ್ ಯಾವಾಗ ಆದೇಶ ನೀಡುತ್ತದೆ. ಆದೇಶದಲ್ಲಿ ಏನಿರಲಿದೆ? ಎನ್ನುವ ಭಯ ದರ್ಶನ್ ಸೇರಿ ಆರೋಪಿಗಳಿಗೆ ಶುರುವಾಗಿದೆ. ಒಂದು ವೇಳೆ ಜಾಮೀನು ರದ್ದಾದರೆ ದರ್ಶನ್ ಸೇರಿ ಆರೋಪಿಗಳೆಲ್ಲಾ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಹೈಕೋರ್ಟ್ ಜಾಮೀನು ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸುತ್ತಾ ಬರ್ತಿದೆ. 6 ತಿಂಗಳ ಒಳಗೆ ಪ್ರಕರಣದ ಟ್ರಯಲ್ ಮುಗಿಸುತ್ತೇವೆ, 65 ಸಾಕ್ಷಿಗಳ ವಿಚಾರಣೆ ನಡೆಸುತ್ತೇವೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ. ಇದನ್ನೆಲ್ಲಾ ಸುಪ್ರೀಂ ಕೋರ್ಟ್ ಪರಿಗಣಿಸಿ ಆದೇಶ ನೀಡಲು ಮುಂದಾಗಿದೆ. ವಾರದ ಒಳಗೆ ಲಿಖಿತ ವಾದಾಂಶ ಸಲ್ಲಿಸಿದ ಬಳಿಕ ತೀರ್ಪು ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಆಧಾರದಲ್ಲಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಸದ್ಯ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್‌ನಲ್ಲಿರುವ ದರ್ಶನ್ ಇನ್ನೆರಡು ದಿನಗಳಲ್ಲಿ ಭಾರತಕ್ಕೆ ವಾಪಸ್ ಬರಲಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ಅಲ್ಲಿಗೆ ತೆರಳಿದ್ದಾರೆ. ನಿರ್ದೇಶಕ ಪ್ರಕಾಶ್, ನಾಯಕಿ ರಚನಾ ರೈ ಸೇರಿದಂತೆ ಹಲವರು ಜೊತೆಗಿದ್ದಾರೆ.


Click it and Unblock the Notifications











