ಡೆವಿಲ್‌ಗೆ ಡವಡವ, ಸುಪ್ರೀಂ ಕೋರ್ಟ್‌ನಲ್ಲಿ ಇಂದು ರದ್ದಾಗುತ್ತಾ ದರ್ಶನ್ ಜಾಮೀನು...?
ದರ್ಶನ್ ಹೊರಗಡೆ ಸದ್ಯ ನೆಮ್ಮದಿಯಿಂದ ಇದ್ದಾರೆ. ಕಳೆದ ವರ್ಷ ನಡೆದ ಕಹಿಯನ್ನೆಲ್ಲ ಮರೆತು ಮನೆ-ಮಗ-ಸಂಸಾರ-ಸಿನಿಮಾ ಎಂದು ಓಡಾಡಿಕೊಂಡು ಇದ್ದಾರೆ. ಆದರೆ, ಈ ಭಾಗ್ಯ ಮುಂದೆಯೂ ಮುಂದುವರೆಯಲಿದೆಯಾ ಎನ್ನುವ ಪ್ರಶ್ನೆ ಕೂಡ ದರ್ಶನ್ ಮನದಲ್ಲಿ ಇದೆ. ಯಾಕೆಂದರೆ ದರ್ಶನ್ ಮುಂದಿನ ಭವಿಷ್ಯ ಇಂದು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ.
ಹೌದು, ರೇಣುಕಾಸ್ವಾಮಿ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಆದೇಶವನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜಾಮೀನು ರದ್ದತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.

ಇನ್ನು ಈ ಪ್ರಕರಣದಲ್ಲಿ ಎಲ್ಲ 17 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಈ 17ರ ಪೈಕಿ 10ಜನರ ವಿರುದ್ಧ ಅರ್ಜಿಯನ್ನು ಸಲ್ಲಿಸದ ಪೊಲೀಸರು ಕೃತ್ಯದಲ್ಲಿ ನೇರವಾಗಿ ಭಾಗಿಯಾದ 7 ಪ್ರಮುಖ ಆರೋಪಿಗಳ ಜಾಮೀನು ರದ್ದು ಕೋರಿ 1492 ಪುಟಗಳ ಕಡತವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ. ವಕೀಲ ಅನಿಲ್ ನಿಶಾನಿ ಅವರ ಮುಖಾಂತರ ರಾಜ್ಯ ಪ್ರಾಸಿಕ್ಯೂಷನ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದು ಹದಿನೈದು ಪ್ರಮುಖ ಅಂಶಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ಆದೇಶದ ಪ್ರತಿ, ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರತಿ, ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಹೈಕೋರ್ಟ್‌ನಲ್ಲಿ ಚರ್ಚೆಗೆ ಕಾರಣವಾಗಿದ್ದ ಗ್ರೌಂಡ್ಸ್ ಆಫ್ ಅರೆಸ್ಟ್‌ನ ಪ್ರತಿಯ ಜೊತೆ ಪೋಸ್ಟ್ ಮಾರ್ಟಂ ಸಂಬಂಧ ವೈದ್ಯರಿಂದ ಪಡೆದ ಅಭಿಪ್ರಾಯದ ವರದಿ, ಎಫ್ ಎಸ್ ಎಲ್ ವರದಿಗಳ ಮೂಲ ಪ್ರತಿ, ಸಿಡಿಆರ್ ವರದಿಯ ಮೂಲ ಪ್ರತಿಗಳು, ಪಂಚನಾಮೆ ವರದಿಗಳು, ಡಿಜಿಟಲ್ ವಸ್ತುಗಳ ವಿಶ್ಲೇಷಣೆ ವರದಿ, ಜಾಮೀನು ಅರ್ಜಿ ವಜಾಗೊಳಿಸಿದ್ದ ಸೆಷನ್ಸ್ ಕೋರ್ಟ್ ಆದೇಶದ ಪ್ರತಿಯನ್ನು ಮೇಲ್ಮನವಿಯಲ್ಲಿ ಪೊಲೀಸರು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಮಧ್ಯಂತರ ಜಾಮೀನು ಆದೇಶ ಪ್ರತಿ, ಜೈಲಿಂದ ಸಲ್ಲಿಕೆಯಾದ ವೈದ್ಯಕೀಯ ವರದಿ, ಬಿಜಿಎಸ್ ಆಸ್ಪತ್ರೆ ವೈದ್ಯರ ವರದಿಯನ್ನು ಕೂಡ ಸುಪ್ರೀಂ ಕೋರ್ಟ್ ಮುಂದಿವೆ ಎಂದು ವರದಿಯಾಗಿವೆ.
ಒಟ್ನಲ್ಲಿ ಜೈಲಿಂದ ಹೊರ ಬಂದು ನೆಮ್ಮದಿಯ ಬದುಕನ್ನು ಬದುಕಲು ಶುರು ಮಾಡಿದ್ದ ದರ್ಶನ್‌ಗೆ ಈಗ ಜಾಮೀನು ರದ್ದಾಗುವ ಆತಂಕ ಶುರುವಾಗಿದೆ. ನ್ಯಾಯಮೂರ್ತಿಗಳಾದ ಜೆ.ಬಿ.ಪರಿದಿವಾಲಾ ಮತ್ತು ಆರ್ ಮಹದೇವನ್ ಅವರ ದ್ವಿಸದಸ್ಯ ಪೀಠ ಇಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದತಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ದರ್ಶನ್‌ಗೆ ರಿಲೀಫ್ ಸಿಗುತ್ತಾ ? ಅಥವಾ ಡೆವಿಲ್ ಮತ್ತೆ ಜೈಲಿಗೆ ಹೋಗಬೇಕಾಗುತ್ತಾ ? ಉತ್ತರ ಕೆಲವೇ ಕ್ಷಣಗಳಲ್ಲಿ ಸಿಗಲಿದೆ.


Click it and Unblock the Notifications











