ಥಿಯೇಟರ್‌ಗೆ ಸಿಕ್ತು 100%: 'ನಿನ್ನ ಸನಿಹಕೆ' ರಿಲೀಸ್ ದಿನಾಂಕ ಘೋಷಣೆ
ಅಕ್ಟೋಬರ್ 1 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ 100% ಅನುಮತಿ ಸಿಕ್ಕಿದೆ. ಇಷ್ಟು ದಿನ ಶೇಕಡಾ 100ರಷ್ಟು ಅವಕಾಶ ಕೊಡಿ ಎಂದು ಕೇಳುತ್ತಿದ್ದ ಚಿತ್ರರಂಗ ಈ ಸುದ್ದಿ ಖುಷಿಯಾಗಿದೆ. ಈಗ ಚಿತ್ರಮಂದಿರಗಳಿಗೆ ಪೂರ್ಣ ಪ್ರಮಾಣದ ಅವಕಾಶ ಸಿಕ್ಕಾಗಿದೆ. ಈ ಹಿನ್ನೆಲೆ ಸ್ಟಾರ್ ನಟರ ಚಿತ್ರಗಳು ರಿಲೀಸ್ ದಿನಾಂಕವನ್ನು ಲಾಕ್ ಮಾಡಿಕೊಳ್ಳಬೇಕಿದೆ.
ಥಿಯೇಟರ್‌ಗೆ 100% ಸಿಕ್ಕ ಬೆನ್ನಲ್ಲೆ ಧನ್ಯ ರಾಮ್ ಕುಮಾರ್ ಮತ್ತು ಸೂರಜ್ ಗೌಡ ನಟನೆಯ ನಿನ್ನ ಸನಿಹಕೆ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿದೆ. ಸ್ವತಃ ಚಿತ್ರತಂಡವೇ ಪ್ರಕಟಿಸಿರುವ ಪ್ರಕಾರ ಅಕ್ಟೋಬರ್ 8 ರಂದು ನಿನ್ನ ಸನಿಹಕೆ ಚಿತ್ರ ಥಿಯೇಟರ್‌ಗೆ ಬರ್ತಿದೆ. ಈ ಮೂಲಕ ಚಿತ್ರಮಂದಿರದಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುವ ಮೊದಲ ಚಿತ್ರ ಇದಾಗಿದೆ.
ಈ ಹಿಂದೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 20 ರಂದು ನಿನ್ನ ಸನಿಹಕೆ ಚಿತ್ರ ಚಿತ್ರಮಂದಿರಕ್ಕೆ ಬರಬೇಕಿತ್ತು. ಆದರೆ, ಆಗಿನ ಸಂದರ್ಭದಲ್ಲಿ 100% ಅವಕಾಶ ಸಿಕ್ಕಿಲ್ಲ. ಹಾಗಾಗಿ, ಕೊನೆ ಘಳಿಗೆಯಲ್ಲಿ ರಿಲೀಸ್ ದಿನಾಂಕ ಪೋಸ್ಟ್ ಪೋನ್ ಮಾಡಿತ್ತು. ಈಗ ಅಧಿಕೃತವಾಗಿ ಹೇಳಿಕೆ ನೀಡಿದ್ದರು.

''ನಮ್ಮ 'ನಿನ್ನ ಸನಿಹಕೆ' ಚಿತ್ರದ ಎಲ್ಲಾ ಹಾಡು ಮತ್ತು ಟ್ರೈಲರ್‌ನ್ನು ನೀವೆಲ್ಲರೂ ನೋಡಿ ಇಷ್ಟಪಟ್ಟು ಹರಸಿ ಹಾರೈಸಿದ್ದೀರಿ, ನಿಮ್ಮೆಲ್ಲರ ನಿರಂತರ ಬೆಂಬಲ ಹಾಗೂ ಚಿತ್ರದ ಮೇಲಿನ ನಿಮ್ಮ ಪ್ರೀತಿಗೆ ತಂಡದ ಪರವಾಗಿ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ಕೋವಿಡ್ 19ರ ಅಸಹಜ ಸ್ಥಿತಿಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಎಂಬ ನಿರ್ಬಂಧ ಇರುವ ಕಾರಣ, ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಬರುವ ನಮ್ಮ ಪ್ರೇಕ್ಷಕರ ಕಾಳಜಿಯನ್ನು ಪರಿಗಣಿಸಿ ಚಿತ್ರದ ಬಿಡುಗಡೆಯನ್ನು ಕೆಲ ದಿನಗಳ ಕಾಲ ಮುಂದೆ ಹಾಕಬೇಕಾದ ಕಠಿಣ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸುತ್ತಿರುವುದು ವಿಷಾದದ ಸಂಗತಿಯೇ ಸರಿ. ಆದರೆ ನಿಮ್ಮೆಲ್ಲರ ಸುರಕ್ಷೆ ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ಹೆಚ್ಚು ದಿನ ತಡ ಮಾಡದೇ ಸದ್ಯದಲ್ಲೇ ಸುರಕ್ಷಿತವಾದ ದಿನಾಂಕದೊಂದಿಗೆ ಚಿತ್ರಮಂದಿರಕ್ಕೆ ಬರುತ್ತೇವೆ ಎಂದು ಈ ಮೂಲಕ ತಿಳಿಸುತ್ತೇವೆ- ಇಂತಿ ನಿನ್ನ ಸನಿಹಕೆ ಚಿತ್ರತಂಡ'' ಎಂದಿದ್ದರು. ಈಗ ಹೊಸ ದಿನಾಂಕ ಘೋಷಣೆ ಮಾಡಿದೆ.
ಅಂದ್ಹಾಗೆ, ಧನ್ಯಾ ನಟಿಸಿರುವ 'ನಿನ್ನ ಸನಿಹಕೆ' ಚಿತ್ರದಲ್ಲಿ ಸೂರಜ್ ಗೌಡ ನಾಯಕನಾಗಿ ನಟಿಸಿ ಸ್ವತಃ ಅವರೇ ನಿರ್ದೇಶಿಸಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಒದಗಿಸಿದ್ದಾರೆ.

'ನಿನ್ನ ಸನಿಹಕೆ' ಚಿತ್ರದ ಬೆನ್ನಲ್ಲೆ ಇನ್ನು ಹಲವು ಚಿತ್ರಗಳು ಬಿಡುಗಡೆಗಾಗಿ ಸಜ್ಜಾಗಿವೆ. ದುನಿಯಾ ವಿಜಯ್ ಮೊದಲ ಸಲ ನಟನೆಯ ಜೊತೆ ನಿರ್ದೇಶನ ಮಾಡಿರುವ ಸಲಗ ಚಿತ್ರವೂ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 20ಕ್ಕೆ ಬರಬೇಕಿತ್ತು. ಈಗ ಥಿಯೇಟರ್‌ಗೆ ಅನುಮತಿ ಸಿಕ್ಕಿರುವ ಹಿನ್ನೆಲೆ ಶೀಘ್ರದಲ್ಲಿ ಅಧಿಕೃತ ದಿನಾಂಕ ಪ್ರಕಟಿಸಲಿದೆ. ವಿಜಯ್ ಜೊತೆ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದು, ಕೆಪಿ ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ.
ಸದ್ಯದ ವರದಿ ಪ್ರಕಾರ ಕೋಟಿಗೊಬ್ಬ 3 ದಸರಾ ಹಬ್ಬಕ್ಕೆ ತೆರೆಗೆ ಬರಲು ತಯಾರಿಯಲ್ಲಿದೆ. ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ಸುದೀಪ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೋಟಿಗೊಬ್ಬ 3 ಚಿತ್ರ ಬಂದ ಎರಡು ವಾರದ ಬಳಿಕ ಶಿವಣ್ಣನ ಸಿನಿಮಾ ಪ್ರೇಕ್ಷಕರೆದುರು ಬರಲಿದೆ.


Click it and Unblock the Notifications











