'ತಾರಕ್', 'ಐರಾವತ' ಚಿತ್ರಗಳಲ್ಲಿ ಕೆಲಸ ಮಾಡಿ ನಟನಾಗುವ ಕನಸು ಕಂಡಿದ್ದ ಪಾರ್ವತಮ್ಮ ಸಂಬಂಧಿ: ಬೆಂಬಲಕ್ಕೆ ನಿಂತ ದರ್ಶನ್
ಪಾರ್ವತಮ್ಮ ರಾಜ್‌ಕುಮಾರ್ ಸೋದರ ಸಂಬಂಧಿ ನಟ ಸೂರಜ್(ಧ್ರುವನ್) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಲೆಟ್ ಬೈಕ್‌ನಲ್ಲಿ ಒಂಟಿಯಾಗಿ ತಮಿಳುನಾಡು ಪ್ರವಾಸ ಮುಗಿಸಿಕೊಂಡು ವಾಪಸ್ ಬರುವಾಗ ಈ ಅಪಘಾತ ನಡೆದಿದೆ. ಸೂರಜ್ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಬೈಕ್‌ಗೆ ಟಿಪ್ಪರ್ ಲಾರಿ ಬಂದು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ನಟ ಸೂರಜ್(28) ತೀವ್ರವಾಗಿ ಗಾಯಗೊಂಡಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಿಂದ ಊಟಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪಾರ್ವತಮ್ಮ ಸಹೋದರ ಎಸ್. ಎ ಶ್ರೀನಿವಾಸ್ ಪುತ್ರ ಸೂರಜ್ 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಚಿತ್ರದ ಮೂಲಕ ಹೀರೊ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತಿತ್ತು. ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಬಳಗದಲ್ಲಿ ಸೂರಜ್ ಗುರ್ತಿಸಿಕೊಂಡಿದ್ದರು.

ನಿನ್ನೆ(ಜೂನ್ 24) ಸಂಜೆ 4 ಗಂಟೆ ಸುಮಾರಿಗೆ ಅಪಘಾತ ನಡೆದಿದ್ದು ಶಿವಣ್ಣ ಸೇರಿದಂತೆ ಆಪ್ತರು ಆಸ್ಪತ್ರೆಗೆ ಭೇಟಿ ನೀಡಿ ಸೂರಜ್ ಆರೋಗ್ಯ ವಿಚಾರಿಸಿದ್ದಾರೆ. ಚಾಮರಾಜನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ನು ನಜ್ಜುಗುಜ್ಜಾದ ಸೂರಜ್ ಬಲಗಾಲನ್ನು ಕತ್ತರಿಸಿ ತೆಗೆದಿರುವುದಾಗಿ ಹೇಳಲಾಗುತ್ತಿದೆ.
ಚಿಕ್ಕಂದಿನಿಂದಲೂ ನಟನಾಗುವ ಕನಸು
'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಸಿನಿಮಾ ಆರಂಭವಾದಾಗ ಸೂರಜ್ ತಮ್ಮ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಚಿಕ್ಕಂದಿನಿಂದಲೂ ಅವರಿಗೆ ನಟನಾಗುವ ಹಂಬಲವಿತ್ತು. ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮನೆಯಲ್ಲಿ ನಟನಾಗುವ ಬಗ್ಗೆ ಹೇಳಿದಾಗ ಮೊದಲು ತರಬೇತಿ ಪಡೆಯಲು ಹೇಳಿದರು. ಅದರಂತೆ ನೀನಾಸಂನಲ್ಲಿ ನಟನೆ ತರಬೇತಿ, ಚೆನ್ನೈನಲ್ಲಿ ಡ್ಯಾನ್ಸ್ ಹಾಗೂ ಫೈಟಿಂಗ್ ಟ್ರೈನಿಂಗ್ ಪಡೆದುಕೊಂಡಿದ್ದಾರೆ.
ನಟ ದರ್ಶನ್ ನನ್ನ ಗಾಡ್‌ಫಾದರ್
ಈ ಹಿಂದೆ ಸಂದರ್ಶನವೊಂದರಲ್ಲಿ ದರ್ಶನ್ ಸರ್ ನನ್ನ ಗಾಡ್ ಫಾದರ್ ಎಂದು ಸ್ವತಃ ಸೂರಜ್ ಹೇಳಿಕೊಂಡಿದ್ದರು. "ನನಗೆ ಬುದ್ದಿ ಬಂದಾಗಲಿಂದಲೂ ದರ್ಶನ್ ಅವರನ್ನ ನೋಡುಕೊಂಡೇ ಬೆಳೆದೆ. ಮೊದಲಿನಿಂದಲೂ ನನಗೆ ಅವರು ಪರಿಚಯ. ನಾನು ಮೈಸೂರು, ಅವರು ಮೈಸೂರು. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ದರ್ಶನ್ ಅವರ ಸಲಹೆ ಇದ್ದೇ ಇರುತ್ತೆ. ಅವರ ಜೊತೆ ಎರಡು ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದು ನನ್ನ ಪುಣ್ಯ. ಅವರನ್ನ ನೋಡಿ ಕಲಿತಿದ್ದು ಹೆಚ್ಚಿದೆ"

ತಾರಕ್, ಐರಾವತ ಚಿತ್ರಗಳಲ್ಲಿ ಕೆಲಸ
ನಟನಾಗುವ ಮುನ್ನ ತೆರೆ ಹಿಂದಿನ ವಿಚಾರಗಳು ಗೊತ್ತಿರಬೇಕು. ಇದೇ ಕಾರಣಕ್ಕೆ ದರ್ಶನ್ ನಟನೆಯ 'ತಾರಕ್' ಹಾಗೂ 'ಐರಾವತ' ಚಿತ್ರಗಳಲ್ಲಿ ಸೂರಜ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇನ್ನು ದರ್ಶನ್ ಅವರ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದರು. ಸೂರಜ್ ನಟನೆಯ 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನ ದರ್ಶನ್ ರಿಲೀಸ್ ಮಾಡಿದ್ದರು.
ಡಾ. ರಾಜ್ ಅಂದ್ರೆ ಪಂಚಪ್ರಾಣ
ಅಣ್ಣಾವ್ರು ನನ್ನ ಅಚ್ಚುಮೆಚ್ಚಿನ ನಟ. ಅಚ್ಚುಮೆಚ್ಚು ಎನ್ನುವುದಕ್ಕಿಂತ ಪಂಚಪ್ರಾಣ. ಅವರ ಪ್ರತಿಭೆ ಮತ್ತು ನಟನೆಗೆ ಸಾಟಿಯಿಲ್ಲ. ಅವ್ರೇ ನನಗೆ ರೋಲ್ ಮಾಡೆಲ್. ಶಿವಣ್ಣ ನನ್ನ ಫೇವರೆಟ್ ನಟ. ರಾಘಣ್ಣನೂ ಅಷ್ಟೇ." ಎಂದು ಸೂರಜ್ ಹೇಳಿಕೊಂಡಿದ್ದರು. ರಘು ಕೋವಿ ನಿರ್ದೇಶನದಲ್ಲಿ ಸೂರಜ್ ನಟನೆಯ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ದರ್ಶನ್ ಹಾಗೂ ಶಿವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.


Click it and Unblock the Notifications











