ಒಂದೇ ವಿಷಯಕ್ಕೆ ಪುನೀತ್ ರಾಜ್‌ಕುಮಾರ್ ಅನ್ನು ಹೊಗಳಿ ಡಿಕೆಶಿಯನ್ನು ತೆಗಳಿದ ಸಚಿವ
ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಟ್ಟಿದೆ. ರಾಜ್ಯದೆಲ್ಲೆಡೆ ಕಟ್ಟೆಚ್ಚರಿಕೆವಹಿಸಲಾಗಿದೆ. ಬೆಂಗಳೂರಿನಲ್ಲಿಯಂತೂ ಭಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.
Recommended Video
ಸಭೆ ಸಮಾರಂಭಗಳು, ಮದುವೆಗಳು, ಸಿನಿಮಾ ಮಂದಿರ, ಮಾಲ್ ಎಲ್ಲವನ್ನೂ ಬಂದ್ ಮಾಡಲಾಗಿದೆ. ಈ ತುರ್ತು ಸಂದರ್ಭದಲ್ಲಿ ಸರ್ಕಾರದ ಜೊತೆಗಿರಬೇಕೆಂದು ಹಲವು ಸ್ವಯಂಪ್ರೇರಿತವಾಗಿ ಯೋಜಿಸಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಹ ತಮ್ಮ ಹುಟ್ಟುಹಬ್ಬ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ. ಮಾರ್ಚ್ 17 ರಂದು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಇತ್ತು. ಕೊರೊನಾ ಭೀತಿಯ ಕಾರಣದಿಂದ ಪುನೀತ್ ರಾಜ್‌ಕುಮಾರ್ ಅವರು ಅದನ್ನು ರದ್ದು ಮಾಡಿದರು. ಈ ಬಗ್ಗೆ ವಿಡಿಯೋ ಸಂದೇಶವನ್ನು ಪುನೀತ್ ಹಂಚಿಕೊಂಡಿದ್ದಾರೆ.

ಇಬ್ಬರು ನಾಯಕರ ಕಾರ್ಯವನ್ನು ಹೋಲಿಸಿ ನೋಡಿರುವ ಸಚಿವ
ಇದೇ ವಿಷಯವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೊಂದು ಪ್ರಭಾವಿ ರಾಜಕೀಯ ನಾಯಕನೊಂದಿಗೆ ಹೋಲಿಸಿ, ಪುನೀತ್ ರಾಜ್‌ಕುಮಾರ್ ಅವರನ್ನು ಹೊಗಳಿದರೆ ರಾಜಕೀಯ ನಾಯಕರನ್ನು ಟೀಕಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಮನೆ ಮುಂದೆ ಜನವೋ ಜನ
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಅವರ ಮನೆಯ ಮುಂದೆ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಸೇರಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕಾರ್ಯಕ್ರಮವನ್ನು ಇಂದು ನಡೆಸಿದ್ದಾರೆ. ಇದನ್ನು ಸುರೇಶ್ ಕುಮಾರ್ ಪರೋಕ್ಷವಾಗಿ ಟೀಕಿಸಿದ್ದಾರೆ.

ಒಬ್ಬರ ಸೂಕ್ಷ್ಮತೆ ಮತ್ತೊಬ್ಬರ ಅಸೂಕ್ಷ್ಮತೆ: ಸುರೇಶ್ ಕುಮಾರ್
ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ಸುರೇಶ್ ಕುಮಾರ್, ''ಸದಾಶಿವನಗರದ ಆ ಒಂದೇ ರಸ್ತೆಯಲ್ಲಿದ್ದಾರೆ ಇಬ್ಬರು ಮಹನೀಯರು. ಕೋರೊನಾವೈರಸ್ ನ ಈ ದಿನಗಳಲ್ಲಿ ಒಬ್ಬರು ತನ್ನ ಜನ್ಮದಿನದಂದು ತೋರಿರುವ ಸೂಕ್ಷ್ಮತೆ ಮತ್ತು ಇನ್ನೊಬ್ಬರು ತನ್ನ "ಅಭಿನಂದನಾ ದಿನ" ದಂದು ತೋರಿಸದ ಸೂಕ್ಷ್ಮತೆ. ಎಷ್ಟು ವ್ಯತ್ಯಾಸ'' ಎಂದು ಪುನೀತ್ ರಾಜ್‌ಕುಮಾರ್ ಆಗಲಿ ಡಿ.ಕೆ.ಶಿವಕುಮಾರ್ ಹೆಸರು ಹೇಳದೆ ಒಬ್ಬರನ್ನು ಹೊಗಳಿ ಮತ್ತೊಬ್ಬರನ್ನು ತೆಗಳಿದ್ದಾರೆ.

ಪುನೀತ್ ರಾಜ್‌ಕುಮಾರ್, ಡಿಕೆಶಿ ಇಬ್ಬರೂ ಸದಾಶಿವನಗರದಲ್ಲಿಯೇ ಇದ್ದಾರೆ
ಪುನೀತ್ ರಾಜ್‌ಕುಮಾರ್ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಸಹ ಸದಾಶಿವನಗರದಲ್ಲಿಯೇ ವಾಸವಿದ್ದಾರೆ. ಇಬ್ಬರ ಮನೆಗಳೂ ಪರಸ್ಪರ ಹತ್ತಿರವೇ ಇವೆ. ಇಂದು ಡಿ.ಕೆ.ಶಿವಕುಮಾರ್ ಮನೆಯ ಮುಂದೆ ಜನವೋ ಜನ. ಕೊರೊನಾ ಭೀತಿಯಿಂದ ಜನರು ಗುಂಪಾಗಿ ಸೇರುವುದು ಬೇಡವೆಂದು ಸರ್ಕಾರ ಹೇಳಿದ್ದರೆ, ಇಂದೇ ಡಿ.ಕೆ.ಶಿವಕುಮಾರ್ ಮನೆಯ ಮುಂದೆ ಜನಜಾತ್ರೆ ಆಗಿದೆ. ಇದನ್ನೇ ಸಚಿವ ಸುರೇಶ್ ಕುಮಾರ್ ಟೀಕಿಸಿರುವುದು.

ಚಾಮರಾಜನಗರ ಅಭಿವೃದ್ಧಿ ರಾಯಭಾರಿ ಪುನೀತ್
ಚಾಮರಾಜನಗರ ಉಸ್ತುವಾರಿ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರು ಕೆಲ ದಿನಗಳ ಹಿಂದಷ್ಟೆ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದರು. ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ರಾಯಭಾರಿ ಆಗಲು ಮನವಿ ಮಾಡಿದ್ದರು. ಅದರಂತೆ ಪುನೀತ್ ಅವರು ಸಚಿವರ ಮನವಿಯನ್ನು ವಿನಯಪೂರ್ವಕವಾಗಿ ಒಪ್ಪಿಕೊಂಡಿದ್ದರು.


Click it and Unblock the Notifications











