ನನಸಾಗಲಿಲ್ಲ ದೊಡ್ಮನೆ ಅಭಿಮಾನಿಗಳ ಕನಸು: ನಿಂತೇ ಹೋಯ್ತು ಆ ಸಿನಿಮಾ
ದೊಡ್ಮನೆಯ ಮೂವರು ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎಂಬುದು ದೊಡ್ಮನೆ ಕುಟುಂಬದ ಅಭಿಮಾನಿಗಳ ಬಹುದೊಡ್ಡ ಕನಸು. ಅದೇಕೋ ಏನೋ ಯಾವ ನಿರ್ದೇಶಕನೂ ಈ ಸಾಹಸಕ್ಕೆ ಕೈ ಹಾಕಿರಲೇ ಇಲ್ಲ.
ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಯಾವುದಾದರೂ ಸಂದರ್ಶನಗಳಲ್ಲಿ ಭಾಗವಹಿಸಿದಾಗ ಈ ಪ್ರಶ್ನೆ ಅವರನ್ನು ಎದುರಾಗುತ್ತಿತ್ತು. ಇಬ್ಬರೂ ಸಹ ತಾವು ನಟಿಸಲು ತಯಾರೆಂದು ಹೇಳುತ್ತಿದ್ದರು. ಆದರೆ ಯಾರೂ ಸಿನಿಮಾ ಮಾಡಲು ಮುಂದೆ ಬಂದಿರಲಿಲ್ಲ. ಆದರೆ ಶಿವಣ್ಣ-ಅಪ್ಪು ಅವರನ್ನು ಒಂದು ಗೂಡಿಸುವ ಸಿನಿಮಾದ ಮಾತುಕತೆ ಚಾಲ್ತಿಯಲ್ಲಿತ್ತು ಎಂಬ ಮಾಹಿತಿ ಇದೀಗ ಹೊರಗೆ ಬಿದ್ದಿದೆ.
ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಆತ್ಮೀಯ ಸಂಬಂಧ ಹೊಂದಿದ್ದ ನಿರ್ದೇಶಕ ಸುಕ್ಕ ಸೂರಿ ಈ ವಿಷಯವನ್ನು ಹೊರಹಾಕಿದ್ದಾರೆ. ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಇಬ್ಬರನ್ನೂ ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡಲು ನಿರ್ಮಾಪಕರು ತಯಾರಾಗಿದ್ದರು. ಈ ಬಗ್ಗೆ ಮಾತುಕತೆ ಸಹ ಚಾಲ್ತಿಯಲ್ಲಿತ್ತು ಎಂದಿದ್ದಾರೆ ಸೂರಿ.

'ಟಗರು', 'ದನ ಕಾಯೋನು', 'ಸಲಗ' ಇನ್ನೂ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆಪಿ ಶ್ರೀಕಾಂತ್ ಹಾಗೂ ನಾಗಿ ಬಳಿ ಅಪ್ಪು ಹಾಗೂ ಶಿವರಾಜ್ ಕುಮಾರ್ ಅವರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದೆವು ಎಂದಿದ್ದಾರೆ ಸೂರಿ. ಎಲ್ಲ ಸರಿಯಾಗಿ ನಡೆದಿದ್ದರೆ ಸೂರಿ ಅವರೇ ಆ ಸಿನಿಮಾವನ್ನು ನಿರ್ದೇಶನ ಮಾಡಿರುತ್ತಿದ್ದರು.
ಇದು ಮಾತ್ರವೇ ಅಲ್ಲ, ಪುನೀತ್ ನಿಧನರಾಗುವ ಕೆಲವು ದಿನಗಳ ಮುನ್ನವಷ್ಟೆ ತಾವು ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಶಿವರಾಜ್ ಕುಮಾರ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ದೇಶನ ಮಾಡಬೇಕು, ಖಂಡಿತ ನಿರ್ದೇಶನ ಮಾಡುತ್ತೇನೆ. ನಿರ್ದೇಶನ ಮಾಡುವುದು ನನ್ನ ಬಹುದಿನಗಳ ಕನಸು ಅದನ್ನು ಆದಷ್ಟು ಬೇಗ ಈಡೇರಿಸಿಕೊಳ್ಳುತ್ತೇನೆ ಎಂದಿದ್ದರು. ಆದರೆ ಆ ಕನಸೂ ಸಹ ನನಸಾಗಲಿಲ್ಲ.
ಪುನೀತ್ ಬಗ್ಗೆ ಹಲವು ವಿಷಯಗಳನ್ನು ನೆನಪು ಮಾಡಿಕೊಂಡಿರುವ ನಿರ್ದೇಶಕ ಸೂರಿ, 'ಅವರೊಟ್ಟಿಗೆ ಮಾಡಿದ 'ಜಾಕಿ' ಸಿನಿಮಾ ಸೂಪರ್ ಹಿಟ್ ಆಯಿತು. ಅವರಿಗೆ 'ಜಾಕಿ' ಅಲಿಯಾಸ್ ಜಾನಕಿರಾಮನ ಪಾತ್ರ ಬಹಳ ಇಷ್ಟವಾಗಿತ್ತು. ಸಿಕ್ಕಾಗೆಲ್ಲ ಆ ಪಾತ್ರವನ್ನು ಬಿಡಬಾರದು ಮುಂದುವರೆಸ ಬೇಕು ಎನ್ನುತ್ತಿದ್ದರು. ನನಗೂ ಆಸೆಯಿತ್ತು, ಆ ಪಾತ್ರವನ್ನು ಹೇಗೆ ಮುಂದುವರೆಸಬಹುದು ಎಂದು ಯೋಚಿಸುತ್ತಿದ್ದೆ. ಆದರೆ ಈಗ ಪುನೀತ್ ಅವರೇ ಇಲ್ಲ ಎಂದಿದ್ದಾರೆ ಸೂರಿ.
ಸೂರಿ, ಪುನೀತ್ ರಾಜ್‌ಕುಮಾರ್ ಜೊತೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಜಾಕಿ', 'ದೊಡ್ಮನೆ ಹುಡ್ಗ' ಹಾಗೂ 'ಅಣ್ಣಾ ಬಾಂಡ್' ಸಿನಿಮಾಗಳನ್ನು ಸೂರಿ ನಿರ್ದೇಶನ ಮಾಡಿದ್ದಾರೆ. 'ಜಾಕಿ' ಮತ್ತು 'ಅಣ್ಣಾ ಬಾಂಡ್' ಸೂಪರ್ ಡೂಪರ್ ಹಿಟ್ ಸಿನಿಮಾಗಳಾದರೆ 'ದೊಡ್ಮನೆ ಹುಡ್ಗ' ಸಹ ಚೆನ್ನಾಗಿಯೇ ಪ್ರದರ್ಶನ ಕಂಡಿತು.


Click it and Unblock the Notifications











