Exclusive: ಜಯಣ್ಣ ಕಂಬೈನ್ಸ್ ಮೂಲಕ ಸೂರಿ-ಅಭಿ 'ಬ್ಯಾಡ್ ಮ್ಯಾನರ್ಸ್' ತೆರೆಗೆ: ಕೊನೆಗೂ ಮುಹೂರ್ತ ಫಿಕ್ಸ್
ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ರಿಲೀಸ್ ತಡವಾಗುತ್ತಲೇ ಬರ್ತಿದೆ. ಈ ವರ್ಷ ಅಭಿಷೇಕ್ ಅಂಬರೀಷ್ ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಎನ್ನಲಾಗಿತ್ತು. ಆದರೆ ಸಾಧ್ಯವಾಗಲಿಲ್ಲ. ಸೂರಿ 3 ವರ್ಷಗಳಿಂದ ಇದೊಂದೇ ಸಿನಿಮಾದಲ್ಲಿ ಕಳೆದು ಹೋಗಿದ್ದಾರೆ. ಇದೀಗ ಸಿನಿಮಾ ರಿಲೀಸ್ ಮಾಡಿ ಆ ಗುಂಗಿನಿಂದ ಹೊರಬರುವ ಲೆಕ್ಕಾಚಾರದಲ್ಲಿದ್ದಾರೆ.
ಟೈಟಲ್‌ನಿಂದಲೇ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಬ್ಯಾಡ್ ಮ್ಯಾನರ್ಸ್'. ಕೆ. ಎಂ ಸುಧೀರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಭಿಷೇಕ್ ಅಂಬರೀಶ್ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಪ್ರಿಯಾಂಕ ಕುಮಾರ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕಾಪ್ ಆಕ್ಷನ್ ಸಿನಿಮಾ ಆಗಿದ್ದು ರುದ್ರ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿ ಅಬ್ಬರಿಸಿದ್ದಾರೆ. ಸುರೇಂದ್ರನಾಥ್ ಮತ್ತು ಅಮ್ರಿ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಮಾಡಿದ್ದು, ಮಾಸ್ತಿ ಹಾಗೂ ಅಮ್ರಿ ಸಂಭಾಷಣೆ ಬರೆದಿದ್ದಾರೆ.

'ಅಮರ್' ಸಿನಿಮಾ ಬಳಿಕ ಅಭಿಷೇಕ್ ಅಂಬರೀಶ್ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುವ ಕಥೆ ಚಿತ್ರದಲ್ಲಿದೆ. ಪಕ್ಕಾ ಸೂರಿ ಸ್ಟೈಲ್ ರಾ ಮೇಕಿಂಗ್, ಕ್ಯಾರೆಕ್ಟರೈಸೇಷನ್ ಚಿತ್ರದಲ್ಲಿದೆ ಅನ್ನೋದು ಸಣ್ಣ ಟೀಸರ್‌ನಲ್ಲೇ ಗೊತ್ತಾಗುತ್ತಿದೆ. ಇನ್ನು ಬಹಳ ಅದ್ಧೂರಿಯಾಗಿ ಚಿತ್ರದ ಹೀರೊ ಇಂಟ್ರಡಕ್ಷನ್ ಸಾಂಗ್ ಶೂಟ್ ಮಾಡಲಾಗಿದೆ.
ಚರಣ್ ರಾಜ್ ಸಂಗೀತ, ಶೇಖರ್ ಎಸ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ 'ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕಿದೆ. ಎರಡು ಲಿರಿಕಲ್ ವಿಡಿಯೋ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡಿವೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸೇರಿದಂತೆ ಸಾಕಷ್ಟು ಅನುಭವಿ ಕಲಾವಿದರು ತಾರಾಗಣದಲ್ಲಿದ್ದಾರೆ.
'ಪಾಪ್ ಕಾರ್ನ್ ಮಂಕಿಟೈಗರ್' ಬಳಿಕ ಸೂರಿ ನಿರ್ದೇಶನದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅಭಿಮಾನಿಗಳು 'ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕಾಗಿ ಕಾಯುವಂತಾಗಿದೆ. 'ಟಗರು'-2, 'ಕಾಗೆ ಬಂಗಾರ' ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ಸೂರಿ ಘೋಷಣೆ ಮಾಡಿದ್ದಾರೆ. ಆದರೆ 'ಬ್ಯಾಡ್ ಮ್ಯಾನರ್ಸ್' ಸಿನಿಮಾದೊಳಗೆ ಕಳೆದು ಹೋಗಿರುವ ಸೂರಿ ಯಾವಾಗ ಈ ಸಿನಿಮಾಗಳನ್ನು ಮಾಡುತ್ತಾರೆ ಎಂದು ಸಿನಿರಸಿಕರು ಕಾಯುವಂತಾಗಿದೆ.
ಇತ್ತ ಅಭಿಷೇಕ್ ಅಂಬರೀಶ್ ಕೂಡ 'ಬ್ಯಾಡ್ ಮ್ಯಾನರ್ಸ್' ರಿಲೀಸ್ ಮಾಡಿ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಹೆಬ್ಬುಲಿ ಕೃಷ್ಣ ನಿರ್ದೇಶನದಲ್ಲಿ 'ಕಾಳಿ' ಹಾಗೂ 'ಅಯೋಗ್ಯ' ಮಹೇಶ್ ನಿರ್ದೇಶನದ ಇನ್ನು ಹೆಸರಿಡದ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜಯಣ್ಣ ಕಂಬೈನ್ಸ್ ಮೂಲಕ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಿಡುಗಡೆ ಆಗಲಿದೆ.
ಸದ್ಯ ಚಿತ್ರದ ಡಿಜಿಟಲ್ ರೈಟ್ಸ್ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟದ ಬಗ್ಗೆ ಚರ್ಚೆ ನಡೀತಿದೆ. ಈ ಮಾತುಕತೆ ಮುಗಿದ ಬಳಿಕ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಲಿದೆ. ಸೆಪ್ಟೆಂಬರ್ 28ಕ್ಕೆ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ರಿಲೀಸ್ ತಯಾರಿ ನಡೀತಿದೆ. ಸೆಪ್ಟೆಂಬರ್ 28ಕ್ಕೆ ತಪ್ಪಿದರೆ ಅಕ್ಟೋಬರ್ 6ಕ್ಕೆ ಸಿನಿಮಾ ರಿಲೀಸ್ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸೆಪ್ಟೆಂಬರ್ 28ಕ್ಕೆ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಮುಂದೂಡಲಾಗುತ್ತಿದೆ. ಸೆಪ್ಟೆಂಬರ್ 28 ಗುರುವಾರ ಸಿನಿಮಾ ರಿಲೀಸ್ ಮಾಡಿ ಸೋಮವಾರ ಗಾಂಧಿ ಜಯಂತಿ ರಜೆ ಸೇರಿ ಲಾಂಗ್ ವೀಕೆಂಡ್‌ನಲ್ಲಿ ಬಾಕ್ಸಾಫೀಸ್ ಶೇಕ್ ಮಾಡುವ ಲೆಕ್ಕಾಚಾರ ನಡೆದಿತ್ತು. ಆದರೆ ಇದೀಗ 'ಸಲಾರ್' ಮುಂದಕ್ಕೆ ಹೋಗಿರುವುದರಿಂದ ಅದೇ ದಿನ ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಸಿನಿಮಾ ಬರ್ತಿದೆ. ಅದೇ ಸಿನ ಸೂರಿ 'ಬ್ಯಾಡ್ ಮ್ಯಾನರ್ಸ್' ಶುರುವಾಗುತ್ತಾ ಕಾದು ನೋಡಬೇಕಿದೆ.


Click it and Unblock the Notifications










