ಕೇರಳ ನಂತರ ನಾಗಾಲ್ಯಾಂಡ್ ಗೆ 'ಕೋಟಿ' ನೀಡಿದ ನಟ ಸುಶಾಂತ್ ಸಿಂಗ್
ದೇವರನಾಡು ಕೇರಳ, ಕರ್ನಾಟಕದ ಕೊಡಗು ನಂತರ ಈಗ ನಾಗಾಲ್ಯಾಂಡ್ನಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಅನೇಕ ಸಾವು ಸಂಭವಿಸಿದೆ. ಮನೆ, ಆಸ್ತಿಗಳನ್ನ ಕಳೆದುಕೊಂಡು ಜನರು ಬೀದಿಗೆ ಬಂದಿದ್ದಾರೆ.
ಇಂತಹ ಸಮಯದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಾಗಲ್ಯಾಂಡ್ ಜನತೆಗೆ ನೆರವಾಗಿದ್ದಾರೆ. ನಾಗಾಲ್ಯಾಂಡ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1.25 ಕೋಟಿ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ವಿಷ್ಯವನ್ನ ಸ್ವತಃ ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸುಶಾಂತ್ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ದಯವಿಟ್ಟು ನಾಗಾಲ್ಯಾಂಡ್ ಗೆ ನಿಮ್ಮ ಸಹಾಯ ಅಗತ್ಯವಿದೆ. ಯಾರಾದರೂ ನೆರವು ನೀಡುವವರು ಮುಂದೆ ಬನ್ನಿ ಎಂದು ಕೇಳಿಕೊಂಡಿದ್ದಾರೆ.
ನಾಗಾಲ್ಯಾಂಡ್ ಮುಖ್ಯಮಂತ್ರಿಯನ್ನ ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿರುವ ಸುಶಾಂತ್ ಸಿಂಗ್ ''ನಿಮ್ಮ ಅಮೂಲ್ಯವಾದ ಸಮಯವನ್ನ ನಮಗೆ ನೀಡಿದ್ದಕ್ಕೆ ಧನ್ಯವಾದಗಳು ಸರ್ . ನಾಗಾಲ್ಯಾಂಡ್ ಸಂಪೂರ್ಣವಾಗಿ ಪುನರ್ ಸ್ಥಾಪನೆಯಾಗುವವರೆಗೆ ನಾವು ನಿರಂತರವಾಗಿ ನಿಮ್ಮ ಜೊತೆ ಕೆಲಸ ಮಾಡುತ್ತಿವೆ. ನಮ್ಮ ಸಂಪೂರ್ಣ ಬೆಂಬಲಿ ನಿಮಗಿದೆ '' ಎಂದಿದ್ದಾರೆ.
ಇದಕ್ಕು ಮುಂಚೆ ನಟ ಸುಶಾಂತ್ ಸಿಂಗ್ ರಜಪೂತ್ ಕೇರಳ ಪ್ರವಾಹ ಪೀಡಿತರ ನಿಧಿಗೆ 1 ಕೋಟಿ ರೂಪಾಯಿ ನೀಡಿದ್ದರು. ಬಾಲಿವುಡ್ ಮಟ್ಟಿಗೆ ಯುವ ನಟ ಎನಿಸಿಕೊಂಡಿರುವ ಸುಶಾಂತ್ ಮಾಡಿರೋದು ಕೆಲವೇ ಸಿನಿಮಾಗಳು ಆದ್ರು, ತಾವು ಮಾಡಿದ ಸಹಾಯ ತುಂಬಾ ದೊಡ್ಡದು ಎನಿಸಿಕೊಂಡಿದೆ.

ಯಾಕಂದ್ರೆ, ಬಾಲಿವುಡ್ ನ ಖಾನ್, ಕಪೂರ್ ಗಳೇ ಕೇರಳ ಹಾಗೂ ನಾಗಾಲ್ಯಾಂಡ್ ಗೆ ನಿರೀಕ್ಷೆ ಮಟ್ಟದ ಸಹಾಯ ಮಾಡಿಲ್ಲ. ಹೀಗಿರುವಾಗ, ಸುಶಾಂತ್ ಅವರ ಸಹಾಯದ ಗುಣಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
'ಎಂ.ಎಸ್ ಧೋನಿ' ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡ ಸುಶಾಂತ್ ಸಿಂಗ್ ಸದ್ಯ ನಾಲ್ಕೈದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾರಾ ಅಲಿ ಖಾನ್ ಜೊತೆ 'ಕೇದರ್ ನಾಥ್' ಸಿನಿಮಾ ಮಾಡ್ತಿದ್ದಾರೆ. 2019ರಲ್ಲಿ ಈ ಸಿನಿಮಾ ತೆರೆಕಾಣಲಿದೆ.


Click it and Unblock the Notifications











