For Quick Alerts
  ALLOW NOTIFICATIONS  
  For Daily Alerts

  ಬರುತ್ತಿದೆ 'ಬಂಧನ' ಸಿನಿಮಾದ ಮುಂದುವರೆದ ಭಾಗ: ನಾಯಕ ಯಾರು?

  By ಫಿಲ್ಮಿಬೀಟ್ ಕನ್ನಡ
  |

  ಕನ್ನಡ ಸಿನಿಮಾ ಪ್ರೇಮಿಗಳು 'ಬಂಧನ' ಸಿನಿಮಾವನ್ನು ಮರೆಯುವುದುಂಟೆ? ಆಕ್ಷನ್ ಹೀರೋ ಆಗಿದ್ದ ವಿಷ್ಣುವರ್ಧನ್ ಅವರನ್ನು ಭಗ್ನ ಪ್ರೇಮಿಯ ರೂಪದಲ್ಲಿ ಕಟ್ಟಿಕೊಟ್ಟ ಈ ಸಿನಿಮಾ ವರ್ಷಾನುಗಟ್ಟಲೆ ಚಿತ್ರಮಂದಿರಗಳಲ್ಲಿ ಓಡಿತ್ತು.

  ಬರ್ತಾ ಇದೆ 'ಬಂಧನ' ಚಿತ್ರದ ಮುಂದುವರೆದ ಭಾಗ

  ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಸೂಪರ್-ಡೂಪರ್ ಹಿಟ್ ಸಿನಿಮಾಗಳಲ್ಲಿ 'ಬಂಧನ' ಸಹ ಒಂದು. 'ಬಂಧನ' ಸೃಷ್ಟಿಸಿದ್ದ ಎಷ್ಟೋ ದಾಖಲೆಗಳು ಈಗಲೂ ಜೀವಂತವಿವೆ. ಆ ಸಿನಿಮಾದ ಹಾಡುಗಳಿಗಂತೂ ಸಾವೇ ಇಲ್ಲ.

  ವಿಷ್ಣುವರ್ಧನ್ ಮಾಡಿದ್ದ ಡಾಕ್ಟರ್ ಹರೀಶ್, ಸುಹಾಸಿನಿ ಮಾಡಿದ್ದ ನಂದಿನಿ ಜೈಜಗದೀಶ್ ಮಾಡಿದ್ದ ಬಾಲು ಪಾತ್ರಗಳು ಈಗಲೂ ಜನಮಾನಸದಲ್ಲಿವೆ. ಈಗಲೂ ಹಲವು ಕನ್ನಡ ಸಿನಿಮಾಗಳಲ್ಲಿ 'ಬಂಧನ' ಸಿನಿಮಾದ ರೆಫರೆನ್ಸ್‌ಗಳನ್ನು ಬಳಸುವುದುಂಟು. ವಿಷ್ಣುವರ್ಧನ್, ಸುಹಾಸಿನಿಗೆ ಪ್ರೇಮ ನಿವೇದನೆ ಮಾಡಲು ತಾಲೀಮು ಮಾಡುವ ಸೀನ್‌ ಅಂತೂ ಈಗಲೂ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇಂತಿಪ್ಪ 'ಬಂಧನ' ಸಿನಿಮಾದ ಮುಂದುವರೆದ ಭಾಗ ಈಗ ಬರಲಿದೆ.

  ಹೌದು, ಕನ್ನಡದ ಕ್ಲಾಸಿಕ್ ಸಿನಿಮಾ 'ಬಂಧನ'ದ ಮುಂದುವರೆದ ಭಾಗ ನಿರ್ಮಾಣವಾಗಲಿದೆ. 'ಬಂಧನ' ಸಿನಿಮಾವು 1984ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾ ಬಿಡುಗಡೆ ಆಗಿ 37 ವರ್ಷಗಳ ಬಳಿಕ ಇದೀಗ ಸಿನಿಮಾದ ಮುಂದುವರೆದ ಭಾಗ ಬರುತ್ತಿದ್ದು ಪ್ರಸ್ತುತ ಕಾಲಘಟ್ಟದ ಕತೆಯನ್ನೇ 'ಬಂಧನ' ಸಿನಿಮಾದ ಮುಂದುವರೆದ ಭಾಗ ಹೊಂದಿರಲಿದೆ.

  ಇದೀಗ ಬರಲಿರುವ 'ಬಂಧನ 2' ಸಿನಿಮಾವನ್ನು 1984ರ 'ಬಂಧನ' ನಿರ್ದೇಶೀಸಿದ್ದ ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ಅವರೇ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್‌ ನಿನ್ನೆ (ಸೆಪ್ಟೆಂಬರ್ 18) ವಿಷ್ಣುವರ್ಧನ್ ಹುಟ್ಟುಹಬ್ಬದ ದಿನದಂದು ಬಿಡುಗಡೆ ಆಗಿದೆ. ಪೋಸ್ಟರ್‌ನಲ್ಲಿ ವಿಷ್ಣುವರ್ಧನ್‌ರ ಚಿತ್ರಗಳಿದ್ದು, ಹೆಸರು 'ಬಂಧನ 2' ಎಂದಿದೆ.

  'ಬಂಧನ 2' ಸಿನಿಮಾಕ್ಕೆ ಚಂದನವನದ ಹಿಡಿಯ ನಿರ್ದೇಶಕ, ಛಾಯಾಗ್ರಾಹಕ ಅಣಜಿ ನಾಗರಾಜ್ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾದ ನಾಯಕ ನಟನಾಗಿ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್ ಬಾಬುರ ಪುತ್ರ ಆದಿತ್ಯ ಅವರೇ ನಟಿಸಲಿದ್ದಾರೆ. 'ಬಂಧನ 2' ಸಿನಿಮಾವನ್ನು ಪ್ರಸ್ತುತ ಕಾಲಘಟಕ್ಕೆ ಅನುಗುಣವಾಗಿ ನಿರ್ದೇಶನ, ನಿರ್ಮಾಣ ಮಾಡಲಾಗುತ್ತದೆ. ಕತೆಯೂ ಸಹ 2021ರ ಕತೆಯನ್ನೇ ಸಿನಿಮಾ ಹೊಂದಿರಲಿದೆ.

  1984ರಲ್ಲಿ ಬಿಡುಗಡೆ ಆಗಿದ್ದ 'ಬಂಧನ' ಸಿನಿಮಾ ಕನ್ನಡದ ಕ್ಲಾಸಿಕ್ ಸಿನಿಮಾ ಆಗಿತ್ತು. ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿ, ನಿರ್ಮಾಣವನ್ನೂ ಮಾಡಿದ್ದ ಈ ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆದಿತ್ತು. 'ಬಂಧನ'ದಂಥಹಾ ಆಲ್ ಟೈಮ್ ಹಿಟ್ ಸಿನಿಮಾದ ಮುಂದುವರೆದ ಭಾಗ ಅಥವಾ ಮರುಸೃಷ್ಟಿ ಮಾಡುವುದೇ ಬಹುದೊಡ್ಡ ಸವಾಲಿನ ಕೆಲಸ. ಹೊಸ ಸಿನಿಮಾವನ್ನು ಎಷ್ಟೇ ಶ್ರಮಪಟ್ಟು ಮಾಡಿದರು 'ಬಂಧನ' ಸಿನಿಮಾ ಜೊತೆ ಹೋಲಿಸಿ ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಪ್ರೇಕ್ಷಕರು. ಈ ಸವಾಲನ್ನು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಗೆ ದಾಟುತ್ತಾರೆ ನೋಡಬೇಕಿದೆ.

  ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು, ದರ್ಶನ್ ನಟನೆಯ 'ರಾಜ ವೀರ ಮದಕರಿ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಸಿನಿಮಾದ ಕೆಲ ಭಾಗದ ಚಿತ್ರೀಕರಣ ಸಹ ಆಗಿತ್ತು. ಆದರೆ ಅಚಾನಕ್ಕಾಗಿ ದರ್ಶನ್, 'ರಾಜ ವೀರ ಮದಕರಿ' ಸಿನಿಮಾದ ಚಿತ್ರೀಕರಣ ನಿಲ್ಲಿಸಿದರು. ಇದೀಗ 'ಬಂಧನ 2' ಸಿನಿಮಾದ ಬಳಿಕವೇ 'ರಾಜ ವೀರ ಮದಕರಿ' ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

  ಇನ್ನು ಆದಿತ್ಯ ನಟನೆಯ 'ಮುಂದುವರೆದ ಅಧ್ಯಾಯ' ಸಿನಿಮಾ ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾ ಅಷ್ಟೇನೂ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಸಿನಿಮಾದ ಬಗ್ಗೆ ಋಣಾತ್ಮಕ ವಿಮರ್ಶೆಗಳು ಹೆಚ್ಚಿಗೆ ಕೇಳಿ ಬಂದವು. ಸಿನಿಮಾ ಬಿಡುಗಡೆ ಆದ ಮೇಲೆ ಯೂಟ್ಯೂಬ್ ಸಿನಿಮಾ ವಿಮರ್ಶಕರ ಮೇಲೆ ಆದಿತ್ಯ ಗರಂ ಆಗಿ ಮಾತನಾಡಿ, ಸಿನಿಮಾ ಸೋಲಲು ಯೂಟ್ಯೂಬ್ ವಿಮರ್ಶಕರೇ ಕಾರಣ ಎಂಬರ್ಥದಲ್ಲಿ ಮಾತನಾಡಿದ್ದರು. ಅದನ್ನು ಹೊರತುಪಡಿಸಿದರೆ ಎಸ್.ನಾರಾಯಣ್ ಮುಂದಿನ ಸಿನಿಮಾದಲ್ಲಿ ಆದಿತ್ಯ ನಟಿಸಲಿದ್ದಾರೆ.

  English summary
  SV Rajendra Singh Babu directing Kannada classic movie Bandhana's sequel. Hero will be Adithya. Producer is Anaji Nagaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X