»   » 1993ರಲ್ಲಿ ಮಿಸ್‌ ಕೇರಳ ಆಗಿ ಮೆರೆದ ಸ್ವರ್ಣ ‘ಛೂಬಾಣ’ದಲ್ಲಿ ನೆನೆಸಿಕೊಂಡ ಈಜುಡುಗೆ ‘ಕಳ್ಳ ಪೊಲೀಸ್‌’ ತೆರೆ ಕಂಡರೂ ಒಣಗಿಲ್ಲ . ಕಷ್ಟದಲ್ಲೂ ಆಕೆ ಸುಖ ಹುಡುಕುತ್ತಿದ್ದಾರೆ.

1993ರಲ್ಲಿ ಮಿಸ್‌ ಕೇರಳ ಆಗಿ ಮೆರೆದ ಸ್ವರ್ಣ ‘ಛೂಬಾಣ’ದಲ್ಲಿ ನೆನೆಸಿಕೊಂಡ ಈಜುಡುಗೆ ‘ಕಳ್ಳ ಪೊಲೀಸ್‌’ ತೆರೆ ಕಂಡರೂ ಒಣಗಿಲ್ಲ . ಕಷ್ಟದಲ್ಲೂ ಆಕೆ ಸುಖ ಹುಡುಕುತ್ತಿದ್ದಾರೆ.

Subscribe to Filmibeat Kannada

*ಸುಂದರ್‌

ನಾಯಕಿಯರನ್ನು ಸೆಟ್‌ ಪ್ರಾಪರ್ಟಿ ಥರಾ ಬಳಸಿಕೊಳ್ಳುವ ಕನ್ನಡ ಸಿನಿಮಾದ ಈಚೆಗಿನ ಜಾಯಮಾನದ ಬಗ್ಗೆ ಮಾತುಗಳಿನ್ನೂ ತಣ್ಣಗಾಗುವ ಹಾಗಿಲ್ಲ. ರೂಪು ಇದೆ. ಪ್ರತಿಭೆ ಇದೆ. ಅವಶ್ಯಕತೆಗೆ ತಕ್ಕಂತೆ ಬಿಚ್ಚಮ್ಮನೂ ಹೌದು. ನಾಟ್ಯರಾಣಿ ಕೂಡ. ಈ ಎಲ್ಲಾ ಕ್ವಾಲಿಫಿಕೇಷನ್ನು ಇರುವ ನಟಿಯರಿಗೆ ಕಾಸು ಜಾಸ್ತಿ ಸ್ವಾಮಿ. ಆ್ಯಕ್ಷನ್‌ ಸಿನಿಮಾದಲ್ಲಿ ನಾಯಕಿಗೆಷ್ಟು ಕೆಲಸ? ತೋರೋದು, ಕುಣಿಯೋದು ಬಲು ಮುಖ್ಯ. ಮಸಾಲೆ ಸಿನಿಮಾಗೆ ಇದೇ ಪಥ್ಯ. ಹೀಗಾಗಿ ಕೊಟ್ಟರೂ ಕಡಿಮೆ ಕಾಸು ಸಿಗಬೇಕು ಹುಡುಗಿ ಬಿಂದಾಸು !

ರಕ್ಷಾ, ರುಚಿತಾರಿಂದ ಹಿಡಿದು ಬೆಂಗಳೂರಿನ ಎಚ್‌ಕೆಇಎಸ್‌ ಕಾಲೇಜಿನಲ್ಲಿ ತಾನು ಬರೆದ ಅಂತಿಮ ಪದವಿ ಪರೀಕ್ಷೆ ಫಲಿತಾಂಶ ಬರುವ ಮುನ್ನವೇ ಥ್ರಿಲ್ಲರ್‌ ಮಂಜು ಜೊತೆ ಬೀಚ್‌ನಲ್ಲಿ ತೊಡೆ ತೋರುತ್ತಾ ಕುಣಿದ ಹಂಸವರೆಗೆ ಉದಾಹರಣೆಗಳು ವಿಪುಲ. ಟೈಗರ್‌ ಪ್ರಭಾಕರ್‌ ಚಂಗೂಲಿ ಗೀತೆಗಳಲ್ಲಿ ಲಕಲಕಿಸಿದ ಅಖಿಲಾ, ಕಾಶೀನಾಥ್‌ ಶರ್ಟು ಕಳಚುವ ಭಾಗ್ಯಹೊತ್ತ ಅಸಂಖ್ಯ ಹೆಣ್ಣು ಮಕ್ಕಳ ಒನಪು ಇವತ್ತಿಗೂ ಟಿವಿ ಚಾನೆಲ್‌ಗಳಲ್ಲಿ ಹಸುರು. ವಿಷ್ಣುವರ್ಧನ್‌ಗೆ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸ್ವರ್ಣ ಎಂಬ ನಟಿ ಕೂಡ ಇದೇ ಕೆಟಗರಿಗೆ ಸೇರಿ ವರ್ಷಗಳೇ ಕಳೆದಿವೆ. ಕಿಲಾಡಿಗಳು ಚಿತ್ರದಲ್ಲಿ ಅಷ್ಟೇನೂ ಬಿಚ್ಚಮ್ಮನಾಗಿ ಅನಾವರಣಗೊಳ್ಳದ ಈಕೆ ‘ಛೂಬಾಣ’ದಲ್ಲಿ ನೆನೆಸಿಕೊಂಡ ಈಜುಡುಗೆ ಕಳ್ಳ ಪೊಲೀಸ್‌ ಎಂಬ ಹೊಸ ಚಿತ್ರ ತೆರೆ ಕಂಡರೂ ಒಣಗಿಲ್ಲ !


1993ರ ಮಿಸ್‌ ಕೇರಳ ದಕ್ಷಿಣ ಭಾರತದ ಯಾವ ಭಾಷೆಯ ಸಿನಿಮಾಗಳಲ್ಲೂ ನೆಲೆ ಕಂಡುಕೊಳ್ಳಲಾರದೆ, ಯೌವನ ಕಳಕೊಳ್ಳುತ್ತಿರುವ ಈ ಹೊತ್ತಲ್ಲೂ ಬಿಚ್ಚಮ್ಮನಾಗೇ ಇರಬೇಕಾದ ಪರಿಸ್ಥಿತಿ. ಸ್ವರ್ಣ ಜೀವನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಿಲ್ಲದಿದ್ದರೂ, ಅವರ ಅಂತರಂಗ ಅರಿಯಬಹುದಲ್ಲವೇ?

ಸಿನಿಮಾದಲ್ಲಿ ನಟಿಸುವುದಕ್ಕೂ ಮುಂಚೆ ನೀವು ಏನು ಮಾಡುತ್ತಿದ್ದಿರಿ?
ಕೊಟ್ಟಾಯಂನ ಆಲ್ಫೋನ್ಸೋ ಕಾಲೇಜಿನಲ್ಲಿ ಓದು ಮುಗಿಸಿದೆ. ನನ್ನ ಆಂ್ಯಟಿಯ ಈವ್ಸ್‌ ಪಾರ್ಲರ್‌ನಲ್ಲಿ ಕೆಲಸ ಮಾಡಿದೆ. ನಾನೊಬ್ಬ ತರಪೇತಿ ಪಡೆದ ಬ್ಯೂಟಿಶಿಯನ್‌. 1993ರಲ್ಲಿ ತ್ರಿವೇಂಡ್ರಂನಲ್ಲಿ ಮಿಸ್‌ ಕೇರಳ ಗೌರವ ಸಿಕ್ಕಿತು. ಆಮೇಲೆ ಚೆನ್ನೈನ ಕಲಾ ಮಾಸ್ಟರ್ಸ್‌ ನಟನಾ ಶಾಲೆಗೆ ಸೇರಿದೆ.

ಹಾಗಾದರೆ ನೀವು ಸಿನಿಮಾಗೆ ಸುಲಭವಾಗಿ ಬಂದಿರಬೇಕು. ಅಲ್ಲವೇ?
ಅನುಮಾನವೇ ಬೇಡ. ಮಿಸ್‌ ಕೇರಳ ಆದದ್ದೇ ತಡ, ಸಿಬಿ ಮಲಯಾಳಿ ಅವರ ವಲಯಂ ಸಿನಿಮಾದ ಪ್ರಮುಖ ಪಾತ್ರದ ಅವಕಾಶ ಸಿಕ್ಕಿತು. ಆಮೇಲೆ ಸಾಕಷ್ಟು ಮಲೆಯಾಳಿ ಸಿನಿಮಾಗಳಲ್ಲಿ ನಟಿಸಿದೆ.

ಗ್ಲ್ಯಾಮರಸ್‌ ಪಾತ್ರಗಳನ್ನ ಮಾಡೋದು ಸಲೀಸು ಅನಿಸುತ್ತಾ?
ಮೊದಲು ಕಷ್ಟ ಅನ್ನಿಸುತ್ತಿತ್ತು. ಈಗ ರೂಢಿಯಾಗಿದೆ. ಭಾಷೆ ನನಗೆ ತೊಡಕೇ ಆಗೋಲ್ಲ. ಕಲೆಗೆ ಯಾವ ಭಾಷೆ, ಅಲ್ಲವೇ?

ಈಚಿನ ದಕ್ಷಿಣ ಭಾರತದ ನಟಿಯರು ಬಾಲಿವುಡ್‌ನಲ್ಲಿ ಬುಲಾವು ಬಂದರೆ ಸಾಕು ಓಡಿಹೋಗುತ್ತಾರಲ್ಲಾ?
ಯಾಕೆ ಹೋಗಬಾರದು. ಅಲ್ಲಿ ಕಲಾವಂತಿಕೆ ಹೆಚ್ಚು ಜನರನ್ನು ತಲುಪುತ್ತದೆ. ನಾನು ಯಾಕೆ ಹಿಂದಿ ಚಿತ್ರಗಳಿಗೆ ಹೋದೆ ಅಂದರೆ, ದುಡ್ಡು ಮಾಡಬೇಕಿತ್ತು. ಜೊತೆಗೆ ಛೇಂಜ್‌ ಬೇಕಿತ್ತು. ಮಿಥುನ್‌ ಚಕ್ರವರ್ತಿ ಇನ್ಸ್‌ಪೆಕ್ಟರ್‌ ಪಾತ್ರ ಮಾಡುತ್ತಿದ್ದರು. ಆ ಪಾತ್ರಕ್ಕೆ ಸರಿಹೊಂದುವ ಜೋಡಿ ಬೇಕಿತ್ತು. ಆ ಅವಕಾಶ ನನಗೆ ಸಿಕ್ಕಿತು.

ಮಿಥುನ್‌ ಚಕ್ರವರ್ತಿ ಜೊತೆ ನಟಿಸಿ ಬಂದವರೆಲ್ಲಾ ಬಿದ್ದುಹೋದರಲ್ವೆ. ಮತ್ತೆ ನೀವೂನೂ...
ಅವಕಾಶ ಎಂಥದೇ ಆಗಲಿ ಅದು ಅವಕಾಶ ಅಷ್ಟೆ. ಬೆಳೆಯೋಕೆ ದಾರಿ ಮುಖ್ಯ. ಎಣ್ಣೆ ಬಂದಾಗ ಕಣ್ಮುಚ್ಚಿಕೋ ಅಂತೀರಾ?

ಸಿನಿಮಾಗೂ, ಮಾಡೆಲಿಂಗ್‌ಗೂ ಇರುವ ಅಂತರವೆಷ್ಟು?
ಸಿಕ್ಕಾಪಟ್ಟೆ. ಮಾಡೆಲಿಂಗ್‌ ಮಾಡ್ತಿದ್ದಾಗ ನನ್ನ ಫೀಸು ದಿನಕ್ಕೆ 75 ಸಾವಿರ ರುಪಾಯಿ. ಸಿನಿಮಾದಲ್ಲಿ ಅಷ್ಟು ದುಡ್ಡು ಸಿಗೋದಿಲ್ಲ. ಇಷ್ಟು ವರ್ಷದ ಅನುಭವದ ನಂತರವೂ ನಾವು ಕೇಳೋ ಪಾತ್ರ ಸಿಗೋದಿಲ್ಲ . ದುಡ್ಡಿನ ವಿಷಯದಲ್ಲೂ ಚೌಕಾಸಿ ಮಾಡ್ತಾರೆ.

ನೀವು ಅವಕಾಶಗಳನ್ನ ಹಿಂದೂಮುಂದೂ ನೋಡದೆ ಒಪ್ಪಿಕೊಳ್ಳುತ್ತೀರಾ?
ಮೋಸ್ಟ್‌ ಆಫ್‌ ದಿ ಟೈಮ್ಸ್‌ ಹೌದು. ರಾಷ್ಟ್ರಗೀತೆ ಚಿತ್ರದ ಆಫರ್‌ ಫೋನಿನಲ್ಲೇ ಬಂತು. ಕತೆ ಬಗ್ಗೆ ಏನೂ ಕೇಳದೆ ಒಪ್ಪಿಕೊಂಡುಬಿಟ್ಟೆ. ಆಮೇಲೆ ಸಾಕಷ್ಟು ದುಡ್ಡೂ ಸಿಕ್ಕಿತು.

ಅಂದರೆ ನೀವು ಸಿನಿಮಾಗೆ ಪಾತ್ರ ಆರಿಸೋದು ಸುಖಾ ಸುಮ್ಮನೆಯಾ?
ಅಯ್ಯೋ ಹಾಗೇನೂ ಇಲ್ಲಪ್ಪಾ. ಒಳ್ಳೆ ಹೀರೋ, ಚೆನ್ನಾದ ಬ್ಯಾನರ್‌ ಇದ್ದರೆ ಪಾತ್ರವನ್ನ ಏಕಾಏಕಿ ಒಪ್ಪಿಕೊಳ್ಳುತ್ತೇನೆ. ಕತೆ ಬಹಳ ಬಲವಾಗಿದ್ದರೆ ಹೀರೋ, ಬ್ಯಾನರ್‌ ಕೂಡ ನಗಣ್ಯ.

ಒಳ್ಳೆ ಕತೆಯ ಸಿನಿಮಾದಲ್ಲಿ ಒಂದು ಆಫರ್‌ ಇದೆ. ಸಂಭಾವನೆ ಮಾತ್ರ ಕಡಿಮೆ. ಈ ಪಾತ್ರವನ್ನ ನೀವು ಒಪ್ಪಿಕೊಳ್ಳುತ್ತೀರಾ?
ತುಂಬಾ ಒಳ್ಳೆ ಕತೆಯಾದರೆ ನನ್ನ ರೇಟು ಇಳಿಸಲು ಸಿದ್ಧ. ಪಾತ್ರ ತುಂಬಾ ತೂಕವಾದದ್ದು ಅಂತ ನನಗನ್ನಿಸಬೇಕು.

ನಿಮ್ಮ ದೃಷ್ಟಿಯಲ್ಲಿ ಯಶಸ್ಸು ಅಂದರೇನು?
ಉತ್ತುಂಗಕ್ಕೇರಬೇಕು. ಅವಕಾಶಗಳ ಮಹಾಪೂರ ನನ್ನೆಡೆಗೆ ಹರಿದು ಬರುತ್ತಿರಬೇಕು. ನನ್ನ ಮಟ್ಟಿಗೆ ಅದೇ ಯಶಸ್ಸು.

ನಿಮ್ಮ ಮುಂದಿನ ಪಯಣ ಎಲ್ಲಿಗೆ?
ನನ್ನ ತವರಿಗೆ (ನಗು). ಎಲ್ಲೆಲ್ಲಿ ಸುತ್ತಿ ಬಂದರೂ ನನ್ನೂರೇ ನನಗೆ ಚೆನ್ನು. ಜನರ ಮನಸ್ಸಿನಲ್ಲಿ ಚಿರಕಾಲ ಉಳಿಯುವಂಥಾ ಪಾತ್ರ ಮಾಡಬೇಕು ಅನ್ನೋದು ನನ್ನ ಹೆಬ್ಬಯಕೆ. ಅಂಥಾ ಅವಕಾಶದ ನಿರೀಕ್ಷೆಯಲ್ಲೇ ಇದ್ದೇನೆ.

What do you think about this article ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada