Siri Ravikumar: 'ಸ್ವಾತಿ ಮುತ್ತಿನ ಮಳೆ ಹನಿಯೇ' ನಟಿ ಸಿರಿ ರವಿಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು?
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಟ್ರೈಲರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ 'ಸ್ವಾತಿ ಮುತ್ತಿನ ಮಳೆ ಹನಿಯೇ'. ಮೆಲ್ಲನೆ ಧ್ಯಾನಿಸು ಎನ್ನುತ್ತಾ ರಾಜ್ ಬಿ ಶೆಟ್ಟಿ ಜೊತೆಗೆ ಹೆಜ್ಜೆ ಹಾಕುತ್ತಾ ಕನ್ನಡಿಗರ ಮನಕ್ಕೆ ಲಗ್ಗೆ ಇಡುತ್ತಿರುವ ನಟಿ ಸಿರಿ ರವಿಕುಮಾರ್. ರೇಡಿಯೋ ಜಾಕಿ, ರಿಯಾಲಿಟಿ ಶೋ ಹೋಸ್ಟ್, ಸ್ಟೇಜ್ ಆಕ್ಟರ್, ಮಾಡೆಲ್ ಆಗಿ ಕನ್ನಡಿಗರಿಗೆ ಪರಿಚಯವಿರುವ ಸಿರಿ ಬಗ್ಗೆ ಮತ್ತಷ್ಟು ವಿಷಯಗಳು ಇಲ್ಲಿವೆ.
ರಕ್ಷಿತ್ ಶೆಟ್ಟಿ ನಿರ್ಮಾಣದ 'ಸಕುಟುಂಬ ಸಮೇತ', 'ಹೋಪ್' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ ನಟಿ, ಈಗ ಮೋಹಕ ತಾರೆ ರಮ್ಯಾ ಬಂಡವಾಳ ಹಾಕಿರುವ, ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಸಿರಿ ರವಿಕುಮಾರ್
ಕನ್ನಡದ ಪ್ರಸಿದ್ದ ಆರ್‌ಜೆ ಆಗಿದ್ದ ಸಿರಿ ರವಿಕುಮಾರ್ 'ಕನ್ನಡದ ಕೋಗಿಲೆ ಸೀಸನ್ 2' ನಿರೂಪಣೆ ಮಾಡುವ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದವರು. ಹಲವು ಕ್ಷೇತ್ರಗಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ನಟಿ, ನಿರೂಪಕಿ, ಮಾಡೆಲ್ ಸಿರಿ ಮನರಂಜನಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವವರಿಗೆ ಸ್ಫೂರ್ತಿಯಾಗಬಲ್ಲರು.
ಸಿರಿ ರವಿಕುಮಾರ್ 1997 ರ ಅಕ್ಟೋಬರ್ 14 ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಳೆದ್ದದು ಬೆಂಗಳೂರಿನಲ್ಲಿಯೇ. ತುಲಾ ರಾಶಿಯ ನಟಿಯ ಪೂರ್ಣ ಹೆಸರು ರಮ್ಯಾ ಸಿರಿ ರವಿಕುಮಾರ್. ಸಿರಿ ಎಂಬುದು ಅವರ ಅಡ್ಡಹೆಸರು. ನೃತ್ಯ, ಗಾಯನ, ಮಾಡೆಲಿಂಗ್ ಸೇರಿ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದ ಅವರಿಗೆ ಪೋಷಕರು ಕೂಡ ಪ್ರೋತ್ಸಾಹ ನೀಡಿದ್ದರು.

ಶಾಸ್ತ್ರೀಯ ನೃತ್ಯ ಪ್ರಕಾರಗಳು ಮತ್ತು ಗಾಯನದಲ್ಲಿ ತರಬೇತಿ ಪಡೆದ ಸಿರಿ, ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ತಮ್ಮ ನೃತ್ಯ, ನಟನೆ ಮತ್ತು ಗಾಯನದ ಮೂಲಕ ಮನರಂಜನಾ ಉದ್ಯಮಕ್ಕೆ ಕಾಲಿಟ್ಟ ನಟಿ ಸ್ಯಾಂಡಲ್‌ವುಡ್‌ನ ಭರವಸೆಯ ನಟಿಯಾಗಿದ್ದಾರೆ.
ಫೇಮಸ್ ರೇಡಿಯೋ ಜಾಕಿ ಮತ್ತು ಸಿನಿಮಾ
ರೇಡಿಯೋ ಮಿರ್ಚಿ ಬೆಂಗಳೂರಿನಲ್ಲಿ ಆರ್‌ಜೆ ಸಿರಿ ಎಂದೇ ಗುರುತಿಸಿಕೊಂಡಿದ್ದ ಅವರು, ಸ್ಯಾಂಡಲ್‌ವುಡ್‌ಗೆ ಬರುವ ಮೊದಲು, 2014 ರಲ್ಲಿ ಮಿಸ್ಟರ್ ಜೋ ಬಿ ಕರ್ವಾಲೋ ಎಂಬ ಹಿಂದಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಸಿರಿ ರವಿಕುಮಾರ್ ಅವರು 2019 ರಲ್ಲಿ ಕಲರ್ಸ್ ಸೂಪರ್‌ನಲ್ಲಿ ರಿಯಾಲಿಟಿ ಟಿವಿ ಶೋ ಕೋಗಿಲೆ ಸೀಸನ್ 2 ಅನ್ನು ಹೋಸ್ಟ್ ಮಾಡಿದ್ದರು.
2019 ರಲ್ಲಿ ಕವಲುದಾರಿ ಸಿನಿಮಾದಲ್ಲಿ ಗೀತಾ ಮುತ್ತಣ್ಣನ ಪಾತ್ರದಲ್ಲಿ ನಟಿಸಿದ್ದರು. ಇದು ಅವರ ಚೊಚ್ಚಲ ಚಿತ್ರ. ಚಂದನವನಕ್ಕೆ ಕಾಲಿಟ್ಟ ಬೆಡಗಿ ಅದೇ ವರ್ಷದಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ 'ಸಕುಟುಂಬ ಸಮೇತ'ದಲ್ಲಿ ಕಾಣಿಸಿಕೊಂಡರು, ರಾಹುಲ್ ಪಿಕೆ ನಿರ್ದೇಶನದ ಕೌಟುಂಬಿಕ ಚಲನಚಿತ್ರವಾಗಿದೆ.
2022 ರಲ್ಲಿ ಅಂಬರೀಷ್ ಬಿ.ಎಂ ನಿರ್ದೇಶನದ ಹೋಪ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ 'ಬೈ ಮಿಸ್ಟೇಕ್' ಎಂಬ ವೆಬ್ ಸರಣಿಯಲ್ಲಿ ಮೈತ್ರಿ ಪಾತ್ರದಲ್ಲಿ ನಟಿಸಿದರು. ಈಗ ರಾಜ್ ಬಿ ಶೆಟ್ಟಿ ಅವರ ಸ್ವಾತಿ ಮುತ್ತಿನ ಹನಿಯೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಟ್ರೈಲರ್ ಮತ್ತು ಹಾಡನ್ನು ನೋಡಿದ ಕನ್ನಡ ಸಿನಿ ಪ್ರೇಮಿಗಳು ಅವರ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











