ಮಹಾ ಮೋಸಗಾರ, ನಂಬಿಕೆ ದ್ರೋಹಿ ; ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ವಿರುದ್ಧ ದಿನಕರ್ ತೂಗುದೀಪ ಕೆಂಡ..ಕೆಂಡ
ಈ ಪ್ರಪಂಚದಲ್ಲಿ ಯಾರು ಒಳ್ಳೆಯವರು.. ಯಾರು ಕೆಟ್ಟವರು ಎಂದು ಒಮ್ಮೆಲೆ ಹೇಳಿ ಬಿಡಲು ಸಾಧ್ಯ ಇಲ್ಲ. ಯಾಕೆಂದರೆ ಇಲ್ಲಿ ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ನಂಬಿಕೆ ಅನ್ನೋದು ಈ ಜಗತ್ತಿನ ಅತಿ ದೊಡ್ಡ ಬಂಡವಾಳ. ಕೊಡು-ಕೊಳ್ಳುವ ನಿಯಮ ನಿಂತಿರುವುದೇ ಈ ನಂಬಿಕೆಯ ಸಿದ್ದಾಂತದ ಮೇಲೆ.
ಆದರೆ ಈಗೀಗ ಬದಲಾದ ಕಾಲದಲ್ಲಿ ಈ ನಂಬಿಕೆಯನ್ನು ಯಾರು ಹೇಗೆ ಬೇಕಾದರು ಬಳಸಿಕೊಳ್ಳಬಹುದು ಎನ್ನುವಂತಾಗಿದೆ. ಹೊಂಚು ಹಾಕಿ ಸಂಚು ಮಾಡಿ ಗಂಟು ಹೊಡೆಯಲು ಇಲ್ಲಿ ಹಲವರು ದಿನನಿತ್ಯ ಹಲವು ಬಗೆಯ ಸರ್ಕಸ್ ಮಾಡುತ್ತಲಿರುತ್ತಾರೆ. ನಮ್ಮ ಪ್ರತಿಯೊಂದು ಕ್ರಿಯೆಗೆ ಅದರದ್ದೇ ಆದ ಪ್ರತಿಫಲ ಇರುತ್ತೆ ಎನ್ನುವುದನ್ನು ಕೂಡ ಮರೆಯುವ ಇವರು ನಂಬಿಕೆ ಮತ್ತು ದ್ರೋಹದ ನಡುವೆ ಇರುವ ಅತ್ಯಂತ ತೆಳ್ಳಗಿರುವ ಗೆರೆಯನ್ನು ಕೂಡ ದಾಟುತ್ತಾರೆ.

ಆ ಪೈಕಿ ಒಂದ್ಕಾಲದಲ್ಲಿ ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ ಸಂಕನಗೌಡರ್ ಕೂಡ ಒಬ್ಬರು ಎಂದೇ ಹಲವರು ಮೊನ್ನೆ ಮೊನ್ನೆಯವರೆಗೆ ನಂಬಿದ್ದರು.
ಆದರೆ ಅಜ್ಞಾತವಾಸದಿಂದ ಮರಳಿ ಬಂದ ಮಲ್ಲಿ ಮಾತ್ರ ಹೇಳುತ್ತಿರುವುದೇ ಬೇರೆ. ಎಲ್ಲರ ಪೈಸಾ.. ಪೈಸಾ.. ಚುಕ್ತಾ ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿ ಮಾಡಿ ಮಲ್ಲಿಕಾರ್ಜುನ್ ಹೇಳಿದ್ದಾರೆ. ಹಠಾತ್ತನೇ ನಾಪತ್ತೆ ಆಗಿದ್ದೇಕೆ ಎಂದು ವಿವರಿಸಿದ್ದಾರೆ. ತಮ್ಮ ಮೇಲಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಾಕಷ್ಟು ತಪ್ಪುಗಳನ್ನ ಮಾಡಿದ್ದೇನೆ, ಸ್ವಯಂ ಕೃತ ಅಪರಾಧಗಳು ಇವೆ,ಸೋತಿದ್ದೇನೆ ಸತ್ತಿಲ್ಲ, ಎಂದೆಲ್ಲಾ ಮಾತನಾಡಿದ್ದಾರೆ.
ಇಷ್ಟೇ ಅಲ್ಲ ದರ್ಶನ್ ಮತ್ತು ದಿನಕರ್ ತೂಗುದೀಪ ಅವರನ್ನು ಕೂಡ ಮಲ್ಲಿಕಾರ್ಜುನ್ ಬಾಯ್ತುಂಬ ಹೊಗಳಿದ್ದಾರೆ. ಆದರೆ ಈ ಹೊಗಳಿಕೆ ದಿನಕರ್ ತೂಗುದೀಪ ಅವರಿಗೆ ಇಷ್ಟವಾದಂತೆ ಇಲ್ಲ. ಮಲ್ಲಿ ಮೇಲೀಗ ದಿನಕರ್ ಗೆ ಈಗ ನಂಬಿಕೆಯೂ ಇದ್ದಂತೆ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಮಲ್ಲಿ ಮಹಾ ಮೋಸಗಾರ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ. ಮತ್ತೆ ಯಾರು ಮೋಸ ಹೋಗಬೇಡಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಮಲ್ಲಿಯ ಕುರಿತು ದಿನಕರ್ ತೂಗುದೀಪ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ಓವರ್ ಟು ದಿನಕರ್ ತೂಗುದೀಪ
ಮಲ್ಲಿಕಾರ್ಜುನ ಗದಗ ಅಲಿಯಾಸ್ ಚೀಟರ್ ಮಲ್ಲು ಎಂಬ ಫ್ರಾಡ್ ಎಂಟು ವರ್ಷಗಳ ಹಿಂದೆ ನಮಗೂ ಹಣಕಾಸಿನಲ್ಲಿ ಮೋಸ ಮಾಡಿ, ನನ್ನ ಹೆಸರನ್ನು, ದರ್ಶನ್ ರವರ ಹೆಸರನ್ನು ಮತ್ತು ನಮ್ಮ ತೂಗುದೀಪ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿ, ನಮ್ಮ ಪರಿಚಯದವರ, ಸ್ನೇಹಿತರ ಹಾಗೂ ನಮ್ಮ ಸಂಪರ್ಕದಲ್ಲಿದ್ದ ಅನೇಕ ವ್ಯಕ್ತಿಗಳ ಬಳಿ ಸುಳ್ಳು ಹೇಳಿ, ಹಣ ಪಡೆದು ವಂಚಿಸಿ ಪರಾರಿಯಾಗಿದ್ದವನು ಈಗ ದಿಢೀರನೆ ಪ್ರತ್ಯಕ್ಷನಾಗಿ 16-04-2026 ರಂದು ಪತ್ರಿಕಾಗೋಷ್ಠಿ ನಡೆಸಿರುತ್ತಾನೆ. ಅದರಲ್ಲಿ ಜನರನ್ನು ನಂಬಿಸಲು ತನಗೆ ಬೇಕಾದಂತೆ ಹೇಳಿಕೆ ಕೊಟ್ಟಿರುತ್ತಾನೆ.

ತನಗೆ ಏನೇನೆಲ್ಲಾ ಆಯಿತು ಎಂದು ಹೇಳುತ್ತಿರುವ ಈತ ತನ್ನಿಂದ ಯಾರಿಗೆಲ್ಲ ಏನು ಅನಾಹುತ ಆಯಿತು ಎಂದು ಹೇಳಿರುವುದಿಲ್ಲ. ಈತ ಮಹಾ ಮೋಸಗಾರ. ಆ ಪತ್ರಿಕಾಗೋಷ್ಠಿಯಲ್ಲಿ ತನ್ನ ಲಾಭಕ್ಕೆ ತಕ್ಕಂತೆ ಪದೇ ಪದೇ ನಮ್ಮ ತೂಗುದೀಪ ಸಂಸ್ಥೆಯ ಹೆಸರು, ದರ್ಶನ್ ರವರ ಹೆಸರು ಮತ್ತು ನನ್ನ ಹೆಸರನ್ನು ದುರ್ಬಳಕೆ ಮಾಡಿರುತ್ತಾನೆ. ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಮೋಸಗಾರ ಇವನು. ಮೋಸ ಮಾಡುವ ಮುನ್ನ ಈತ ಬಳಸುವ ದಾಳವೇ ಸಿಂಪತಿ.
ಅದನ್ನು ಪಡೆಯಲು ಈತ ಹೇಳುವುದೇ ಕಟ್ಟು ಕತೆಗಳು ಇವನನ್ನು ಯಾರು ನಂಬಬೇಡಿ. ನಾನಾಗಲಿ, ನಮ್ಮ ತೂಗುದೀಪ ಸಂಸ್ಥೆ, ದರ್ಶನ್ ರವರು ಯಾರು ಈತನನ್ನು ಸೇರಿಸುವುದಿಲ್ಲ. ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ. ಈತ ಎಲ್ಲಾದರೂ ನಮ್ಮಗಳ ಒಡನಾಟದ ಬಗ್ಗೆ ಹೇಳಿಕೊಂಡು ಲಾಭ ಮಾಡಲು ಬಂದರೆ ಯಾಮಾರಬೇಡಿ... ದರ್ಶನ್ ರವರ ಹೆಸರನ್ನು ಬಳಸಿ ದುಡ್ಡು ಮಾಡುವ ಇನ್ನೊಂದು ಹುನ್ನಾರ ಅಷ್ಟೇ. ದಯವಿಟ್ಟು ಯಾರೂ ಇವನ ಮಾತನ್ನು ನಂಬಿ ಮೋಸ ಹೋಗ ಬೇಡಿ. ಇಂತಿ ನಿಮ್ಮ ದಿನಕರ್ ತೂಗುದೀಪ
ಹೀಗೆ ದಿನಕರ್ ತೂಗುದೀಪ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಲ್ಲಿ ವಿರುದ್ಧ ಕಿಡಿ ಕಾರಿದ್ದಾರೆ. ಅಂದ್ಹಾಗೇ ಅಜ್ಞಾತವಾಸದಿಂದ ಮರಳಿರುವ ಮಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಆರಂಭ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಚಿತಾ ರಾಮ್, ರಮೇಶ್ ಅರವಿಂದ್ ಸೇರಿ ಚಿತ್ರರಂಗದಲ್ಲಿನ ಹಲವರನ್ನು ಮಲ್ಲಿ ಸಂಪರ್ಕ ಮಾಡಿದ್ದಾರೆ ಎನ್ನುವ ಸುದ್ದಿಯ ಕೂಡ ನಾಗರಭಾವಿ ಸುತ್ತ ಮುತ್ತ ಕೇಳಿ ಬರುತ್ತಿದೆ. ಹೀಗಾಗಿಯೇ ದಿನಕರ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಪ್ರಕಟಣೆಯನ್ನು ಹೊರಡಿಸಿರುವ ಸಾಧ್ಯತೆ ಇದೆ.


Click it and Unblock the Notifications