54 ವರ್ಷದ ಮಾಜಿ ಮುಖ್ಯಮಂತ್ರಿ ಜೊತೆ ಮದುವೆ; ಹೇಗಿತ್ತು 'ಟಗರು' ತ್ರಿವೇಣಿ ಆರತಕ್ಷತೆ ? ಕಾನ್‌ಸ್ಟೇಬಲ್ ಸರೋಜಾ ಹೊಸ ಹೆಸರೇನು?
ಪ್ರೀತಿಗೆ ವಯಸ್ಸಿಲ್ಲ ಅನ್ನೋದು ಲೋಕಾರೂಢಿ ಮಾತು. ಯಾವ ವಯಸ್ಸಿನಲ್ಲಾದರೂ ಕೂಡ ಈ ಪ್ರೀತಿ ಮೊಳಕೆಯೊಡೆಯಬಹುದು. ಮುಂದುವರೆಯಬಹುದು. ಮನದ ಮೂಲೆಯಲ್ಲೆಲ್ಲೋ ಗಟ್ಟಿಯಾಗಿ ಬೇರೂರಬಹುದು. ಹೀಗೆ ಬೇರೂರಿದ ಪ್ರೀತಿ ಆ ನಂತರ ದಾಂಪತ್ಯ ಜೀವನಕ್ಕೆ ಮುನ್ನುಡಿಯನ್ನು ಕೂಡ ಬರೆಯಬಹುದು.
ಇನ್ನೂ.. ಹಿಂದೆ ಆದರೆ ಮದುವೆಯಲ್ಲಿ ವಯಸ್ಸು ಬಹುಮುಖ್ಯವಾದ ಪಾತ್ರ ಕೂಡ ವಹಿಸುತ್ತಿತ್ತು. ಆದರೆ ಈಗ ಹಾಗಿಲ್ಲ. ಬದಲಾದ ಈ ಕಾಲದಲ್ಲಿ ಬದುಕಿನ ಲವಲವಿಕೆಗೆ, ಪತಿ- ಪತ್ನಿ ನಡುವಿನ ಅನ್ಯೋನ್ಯತೆಗೆ, ಅವರ ನಡುವಿನ ಆತ್ಮೀಯತೆಗೆ ಯಾವ ಕೋನದಲ್ಲೂ ಕೂಡ ವಯಸ್ಸಿನ ಹಂಗಿಲ್ಲ. ಒಂದೊಳ್ಳೆ ಮನಸ್ಸು ಮತ್ತು ದಾಂಪತ್ಯದ ಕಲೆಯನ್ನು ಅರಿತಿರುವ ನೈಪುಣ್ಯತೆಯನ್ನು ಹೊಂದಿದ್ದರೆ ಯಾವಾಗ ಮದುವೆಯಾದರೂ ಕೂಡ ಸುಖವಾಗಿ ಸಂಸಾರ ನಡೆಸಬಹುದು. ಬದುಕಿ ಬಾಳಬಹುದು ಎನ್ನುವ ವಾದವನ್ನು ಹಲವರು ಮಾಡುತ್ತಾರೆ. ಮದುವೆಯ ಬಂಧನಕ್ಕೊಳಗಾಗುತ್ತಾರೆ. ಉದಾಹರಣೆಗೆ ತ್ರಿವೇಣಿ ರಾವ್ ಅಲಿಯಾಸ್ ರುಷಿಕಾ ರಾಜ್.

ಹೌದು, ತ್ರಿವೇಣಿ ರಾವ್ .. ಆಗಲೇ ಹೇಳಿದಂತೆ ''ಟಗರು'' ಚೆಲುವೆ. ಈ ಚಿತ್ರದಲ್ಲಿ ''ಕಾನ್ಸ್‌ಟೇಬಲ್ ಸರೋಜಾ'' ಪಾತ್ರವನ್ನು ಮಾಡುವ ಮೂಲಕ ಬೆಳಗಿನ ಪ್ರದರ್ಶನ ಮುಗಿದು ಮ್ಯಾಟ್ನಿ ಶೋ ಆರಂಭವಾಗುವ ಹೊತ್ತಿಗೆ ಕರುನಾಡಿನಲ್ಲಿ ಮನೆ ಮಾತಾದವರು ಇವರು.
''ಟಗರು'' ಬಂದ ನಂತರ ಇವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತು ಅಂದರೆ ''ಟಗರು''ದಲ್ಲಿನ ಚಿಟ್ಟೆ, ಅಂಕಲ್ ಪಾತ್ರವನ್ನು ದ್ವೇಷಿಸಿದರು ಡಾಲಿ ಸುಮ್ಮನೆ ಇರುತ್ತಾನೆ. ಆದರೆ 'ಕಾನ್ಸ್ ಟೇಬಲ್ ಸರೋಜ'ಗೆ ಏನಾದರೂ ಹೇಳಿದರೆ ಡಾಲಿ ಲಾಂಗ್ ಹಿಡಿದು ಬರುತ್ತಾನೆ ಎಂದೆಲ್ಲಾ ಜನ ಇವರನ್ನು ಕೊಂಡಾಡಿದರು. ಡಾಲಿ ಹೇಳುವ ಡೈಲಾಗ್ ಶೈಲಿಯಲ್ಲಿ ಹೊಡಿತಿನಿ.. ಕಾನ್ಸ್ ಟೇಬಲ್ ಸರೋಜ ಮೇಲೆ ಕಣ್ಣು ಹಾಕಿದರೆ ಹೊಡಿತಿನಿ ಎಂದು ಡೈಲಾಗ್ ಎಲ್ಲ ಹೇಳಿ ಹಲವಾರು ಪಡ್ಡೆ ಹೈಕ್ಳು ಸಂಭ್ರಮ ಪಟ್ಟಿದ್ದರು.
ಆದರೆ, ದುರಾದೃಷ್ಟವಶಾತ್ ಸಿಕ್ಕ ಈ ನೇಮ್-ಫೇಮ್‌ದಿಂದ ಮುಂದೆ ಅವಕಾಶಗಳ ಹೆಬ್ಬಾಗಿಲು ತೆರೆಯಿತಾದರೂ ಅದೃಷ್ಟ ಖುಲಾಯಿಸಲಿಲ್ಲ. ಇದಕ್ಕೆ ಪುರಾವೆ ಎಂಬಂತೆ '' ಅಲ್ಲೇ ಡ್ರಾ ಅಲ್ಲೇ ಬಹುಮಾನ''.. ''Once Upon a Time In ಜಮಾಲಿಗುಡ್ಡ''.. ''ರಾಜ ಮಾರ್ತಾಂಡ''.. ಸೇರಿ ಹಲವು ಚಿತ್ರಗಳನ್ನು ಮಾಡಿದರು ಕೂಡ ಇವರಿಗೆ ಸಿಗಬೇಕಾದ ಗೆಲುವು ಸಿಗಲಿಲ್ಲ. ಕೊನೆಗೆ ತಮ್ಮ ಹೆಸರನ್ನು ರುಷಿಕಾ ರಾಜ್ ಎಂದು ಕೂಡ ಇವರು ಬದಲಿಸಿಕೊಂಡರು. ಆದರೆ, ವ್ಯತ್ಯಾಸವೇನು ಆಗಲಿಲ್ಲ.
ಇಂಥಾ ತ್ರಿವೇಣಿ ರಾವ್ ಅಲಿಯಾಸ್ ರುಷಿಕಾ ರಾಜ್ ಮೊನ್ನೆ..ಮೊನ್ನೆ.. ಸದ್ದಿಲ್ಲದೇ ಮದುವೆಯಾಗುವ ಮೂಲಕ ಸರ್ಪ್ರೈಸ್ ನೀಡಿದ್ದರು. 54 ವರ್ಷದ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇವ್ ಜೊತೆ ಸಪ್ತಪದಿ ತುಳಿಯುವ ಮೂಲಕ ಕೇವಲ ಚಿತ್ರರಂಗದವರನ್ನು ಮಾತ್ರವಲ್ಲ ರಾಜಕೀಯದವರನ್ನು ಕೂಡ ಅಚ್ಚರಿಗೆ ದೂಡಿದ್ದರು.

ಸದ್ಯ ಇವರ ಲವ್ & ಮ್ಯಾರೇಜ್ ಸ್ಟೋರಿ ಇನ್ನು ಜಗಜ್ಜಾಹೀರಾಗಬೇಕಿದೆಯಾದರೂ ಇಬ್ಬರ ಆರತಕ್ಷತೆ ಸಮಾರಂಭ ಜೂನ್ 24ರಂದು ಅದ್ದೂರಿಯಾಗಿ ನಡೆದಿದೆ. ತ್ರಿಪುರಾದ ರಾಜಧಾನಿ ಅಗರ್ತಲಾ ಇವರ ಈ ಆರತಕ್ಷತೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.
ಅಗರ್ತಲಾದಲ್ಲಿನ ಖಾಸಗಿ ಹೋಟೆಲ್ ''ಪೋಲೋ ಟವರ್ಸ್''ನಲ್ಲಿ ನಡೆದ ಈ ರಿಸೆಪ್ಷನ್ ಕಾರ್ಯಕ್ರಮ ಕಂಡು ಹಲವರಿಗೆ ರಾಜಮನೆತನದ ವೈಭೋಗ ನೆನಪಾಗಿದೆ. ತ್ರಿಪುರಾದ ಮುಖ್ಯಮಂತ್ರಿ ಡಾ ಮಾಣಿಕ್ ಸಹಾ, ಸಹಕಾರ ಮತ್ತು ಬುಡಕಟ್ಟು ಕಲ್ಯಾಣ ಸಚಿವ ಶುಕ್ಲಾ ಚರಣ್ ನೋಟಿಯಾ, ತ್ರಿಪುರಾ ಮಹಿಳಾ ಆಯೋಗದ ಅಧ್ಯಕ್ಷೆ ಝರ್ನಾ ದೆಬ್ಬರ್ಮಾ ಸೇರಿ ರಾಜ್ಯದ ಹಲವಾರು ಪ್ರಮುಖ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ನವ ಜೋಡಿಗೆ ಶುಭ ಕೋರಿದ್ದಾರೆ.
ಇನ್ನು ಆರತಕ್ಷತೆ ಮುನ್ನ ದೆಹಲಿಯಿಂದ ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಅವರ ಜೊತೆ ತ್ರಿವೇಣಿ ಬಂದಾಗ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನವ ದಂಪತಿಗಳಿಗೆ ಸ್ವಾಗತ ಕೋರಿದರು. ಆ ನಂತರ ಬಿಪ್ಲಬ್ ಕುಮಾರ್ ತಮ್ಮ ಪತ್ನಿ ತ್ರಿವೇಣಿ ಜೊತೆ ಉದಯಪುರದ ಪ್ರಸಿದ್ದ ಮತ್ತು ಐತಿಹಾಸಿಕ ದೇವಸ್ಥಾನ ಮಾತಾ ತ್ರಿಪುರ ಸುಂದರಿಗೆ (ಮಾತಾಬಾರಿ) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸದ್ಯ ಇವರ ಆರತಕ್ಷತೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.ನವ ಜೋಡಿಗೆ ಹಲವರು ಶುಭಾಶಯ ಕೋರುತ್ತಿದ್ದಾರೆ. ಇನ್ನು ಆರಂಭದಲ್ಲಿಯೇ ಹೇಳಿದಂತೆ ತ್ರಿವೇಣಿ ರಾವ್ ತಮ್ಮ ಹೆಸರನ್ನು ಈ ಹಿಂದೆ ರುಷಿಕಾ ರಾಜ್ ಎಂದು ಬದಲಿಸಿಕೊಂಡಿದ್ದರು. ಈಗ ಮದುವೆಯ ನಂತರ ಮತ್ತೆ ತಮ್ಮ ಹೆಸರನ್ನು ಕಾನ್ಸ್‌ಟೇಬಲ್ ಸರೋಜಾ ಬದಲಿಸಿಕೊಂಡಿದ್ದು ಇನ್ಮುಂದೆ ಸೋಶಿಯಲ್ ಮೀಡಿಯಾದಲ್ಲಿ ನೀವು ಇವರನ್ನು ತ್ರಿವೇಣಿ ದೇವ್ (ದೇಬ್) ಎಂಬ ಹೆಸರಿನಲ್ಲಿ ಹುಡುಕಬಹುದು.
ಇನ್ನುಳಿದಂತೆ ಬಿಪ್ಲಬ್ ದೇವ್ ಈ ಹಿಂದೆ ನೀತಿ ದೇವ್ ಜೊತೆ ಮದುವೆಯಾಗಿದ್ದರು. ಇವರು ಹುಟ್ಟಿನಿಂದಲೇ ಆಗರ್ಭ ಶ್ರೀಮಂತರು. ನೀತಿ ಮತ್ತು ಬಿಪ್ಲಬ್ ಸಾಂಸಾರಿಕ ಜೀವನಕ್ಕೆ ಸಾಕ್ಷಿಯಾಗಿ ಇವರಿಗೆ ಇಬ್ಬರು ಮಕ್ಕಳಿದ್ದಾರೆ. 20 ವರ್ಷಗಳ ಕಾಲ ಜೊತೆಯಾಗಿ ಬದುಕಿದ ಇಬ್ಬರ ದಾಂಪತ್ಯ ಜೀವನ ಕೆಲ ವರ್ಷದ ಹಿಂದೆ ಅಂತ್ಯವಾಗಿತ್ತು. ಅಲ್ಲಿಂದ ಏಕಾಂಗಿಯಾಗಿದ್ದ ಬಿಪ್ಲಬ್ ದೇವ್ ಬದುಕಿನಲ್ಲಿ ಈಗ ತ್ರಿವೇಣಿ ರಾವ್ ಅವರ ಪ್ರವೇಶ ಆಗಿದೆ.


Click it and Unblock the Notifications