Tagaru Palya: ನಾಳೆಯಿಂದ 175 ಥಿಯೇಟರ್‌ಗಳಲ್ಲಿ 'ಟಗರು ಪಲ್ಯ'ದ ರುಚಿ!
ನಿನ್ನ ರುಚಿ ನಿನ್ನದು, ನನ್ನ ರುಚಿ ನನ್ನದು ಎನ್ನುತ್ತಾ ನಟ ಡಾಲಿ ಧನಂಜಯ್ ಕನ್ನಡ ಸಿನಿಮಾರಂಗಕ್ಕೆ ಟಗರು ಪಲ್ಯದ ರುಚಿ ಬಡಿಸಲು ಬರುತ್ತಿದ್ದಾರೆ. ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಚಿತ್ರದ ಭರ್ಜರಿ ಪ್ರಚಾರ ಈಗಾಗಲೇ ಶುರುವಾಗಿದೆ. ಇದೇ ವಾರವೇ ಸಿನಿಮಾ ಬಿಡುಗಡೆಯಾಗುತ್ತಿದೆ.
ಟಗರು ಪಲ್ಯ ಚಿತ್ರಕ್ಕೆ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಟ ಧನಂಜಯ್ ಬಂಡವಾಳ ಹೂಡಿದ್ದಾರೆ. ಉಮೇಶ್ ಕೃಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ನಾಗಭೂಷಣ್, ರಂಗಾಯಣ ರಘು, ತಾರಾ ಅನುರಾಧಾ, ಪೂರ್ಣಚಂದ್ರ, ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ, ಶ್ರೀನಾಥ್ ವಸಿಷ್ಠ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿದ್ದರು. ಸಿನಿಪ್ರಿಯರು ಕೂಡ ಟಗರು ಪಲ್ಯ ಟ್ರೇಲರ್ ಮೆಚ್ಚಿದ್ದಾರೆ. ಅಕ್ಟೋಬರ್ 27 ರಂದು ಸಿನಿಮಾ ತೆರೆ ಕಾಣುತ್ತಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದು, ಒಂದು ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಟಗರು ಪಲ್ಯಕ್ಕೆ 175 ಥಿಯೇಟರ್
ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ಈ ಸಮಯದಲ್ಲಿ ಟಗರು ಪಲ್ಯ ಸಿನಿಮಾಕ್ಕೆ 175 ಥಿಯೇಟರ್ ಸಿಕ್ಕಿದೆ. ವಿತರಕ ಕಾರ್ತಿಕ್ ಗೌಡ ಕೂಡ ಸಿನಿಮಾ ಬಗ್ಗೆ ಒಳ್ಳೆ ಮಾತುಗಳನ್ನಾಡಿದ್ದಾರೆ. ಇದು ಎಲ್ಲಾರ ಮೆಚ್ಚುಗೆಗೆ ಸೇರುವ ಸಿನಿಮಾ. ಸಂಪ್ರದಾಯ, ಕನ್ನಡ ಭಾಷೆ ಎಲ್ಲವೂ ಚಿತ್ರದಲ್ಲಿ ಚೆನ್ನಾಗಿದೆ. ಪ್ರತಿ ಪಾತ್ರವೂ ಅದ್ಭುತವಾಗಿದೆ. ಮನರಂಜನೆ ಜೊತೆಗೆ ನಮ್ಮ ರಾಜ್ಯದ ಒಂದು ಭಾಗದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾವು ಈ ವರ್ಷದಲ್ಲಿ ವಿತರಣೆ ಮಾಡ್ತಿರುವ ಬೆಸ್ಟ್ ಸಿನಿಮಾ ಎಂದು ಹೇಳಿದ್ದಾರೆ.

ಬಡವರ ಮನೆ ಮಕ್ಕಳು ಬೆಳೆಯಬೇಕು ಎಂದು ನಾನು ನನಗೋಸ್ಕರ ಹೇಳಿಕೊಂಡಿಲ್ಲ
ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ನಟ, ನಿರ್ಮಾಪಕ ಧನಂಜಯ್, "ಕೆಲವೊಂದು ಯಾಕೆ ಘಟಿಸುತ್ತದೆ. ಹೇಗೆ ಘಟಿಸುತ್ತದೆ ಗೊತ್ತಿಲ್ಲ. ಬಡವ ರಾಸ್ಕಲ್ ಪ್ರೊಡಕ್ಷನ್ ಮಾಡಿದ್ವಿ. ಹೆಡ್ ಬುಷ್ ಪ್ರೊಡಕ್ಷನ್ ಮಾಡಿದ್ವಿ. ಕಳೆದ ವರ್ಷ ನನ್ನ ಬರ್ತ್ ಡೇಯಲ್ಲಿ ಕಾರ್ತಿಕ್ ಜೊತೆ ಚರ್ಚೆ ಮಾಡುವಾಗ ಪ್ರೊಡಕ್ಷನ್ ಕಂಟಿನ್ಯೂ ಮಾಡಬೇಕು. ಒಳ್ಳೆ ಕಥೆ ನಿರ್ಮಾಣ ಮಾಡಬೇಕು ಎಂದು ನಮ್ಮ ಸಂಸ್ಥೆ ಕಡೆಯಿಂದ ನಾವೆಲ್ಲರೂ ಸೇರಿ ಒಂದೊಳ್ಳೆ ಪ್ರಾಡೆಕ್ಟ್ ಹೆಮ್ಮೆಯಿಂದ ಅರ್ಪಿಸುತ್ತಿದ್ದೇವೆ" ಎಂದಿದ್ದಾರೆ.
" ಸಿನಿಮಾಗೆ ಒಂದೊಳ್ಳೆ ಕಥೆಗೆ ಏನ್ ಬೇಕು ಅದೆಲ್ಲವನ್ನೂ ಟಗರು ಪಲ್ಯಗೆ ಒದಗಿಸಿದ್ದೇವೆ. ಬೇರೆ ಭಾಷೆ ಸಿನಿಮಾ ನೋಡಿದಾಗ ನಮ್ಮಲ್ಲಿ ಬರಬೇಕು ಅಂತೀವಲ್ಲ. ಆ ರೀತಿ ಕಥೆ ಇದು. ಬಡವರ ಮನೆ ಮಕ್ಕಳು ಬೆಳೆಯಬೇಕು ಎಂದು ನಾನು ಯಾವತ್ತೂ ನನಗೋಸ್ಕರ ಹೇಳಿಕೊಂಡಿಲ್ಲ. ಅದು ಬೇರೆಯವರಿಗೆ ಸ್ಫೂರ್ತಿ ಆಗಲಿ ಎಂದು. ಯಾವುದೇ ಬ್ಯಾಗ್ ಗ್ರೌಂಡ್ ಇಲ್ಲದೇ ಬಂದವರು ನಮ್ಮ ಪ್ರೊಡಕ್ಷನ್ ನಿಂದ ಮೂವರು ಜನ ನಿರ್ದೇಶಕರು ಬಂದಿದ್ದಾರೆ ಅನ್ನೋದು ನಮ್ಮ ಹೆಮ್ಮೆ" ಎಂದಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಗರು ಪಲ್ಯ ನೋಡಲು ಬರುವುದನ್ನು ಹಂಚಿಕೊಂಡಿದ್ದಾರೆ.
ನಟಿ ತಾರಾ, 'ಅಮೃತಾ ಹೊಸ ಹುಡುಗಿ ಅನಿಸುವುದಿಲ್ಲ. ತುಂಬಾ ಚೆನ್ನಾಗಿ ನಟಿಸಿದ್ದಾಳೆ. ನಾಗು ಒಳ್ಳೆ ಆಕ್ಟರ್. ನಮ್ಮ ಅದೃಷ್ಟ ಏನೂ ನಾನು ರಘು ಮಾಡಿದ ಎಲ್ಲಾ ಚಿತ್ರಗಳು ಚೆನ್ನಾಗಿ ಓಡುತ್ತಿವೆ' ಎಂದಿದ್ದಾರೆ.


Click it and Unblock the Notifications











