»   » ಪ್ರೇಮಸೌಧ : ಒಂದು ಅನನ್ಯ ಪ್ರೇಮಕತೆ

ಪ್ರೇಮಸೌಧ : ಒಂದು ಅನನ್ಯ ಪ್ರೇಮಕತೆ

Posted By: Super
Subscribe to Filmibeat Kannada

ರಾಜಾಸ್ಥಾನದ ಜೋಧಪುರದ ಪ್ರಾಚೀನ ಮೆಹಾರಂಗಧ್‌ ಕೋಟೆಯಲ್ಲಿ ಸದ್ದು- ಗದ್ದಲ. ಸುಮಾರು 100 ಕರ್ಮಿಗಳು ಅಲ್ಲಿ ತಾಜ್‌ಮಹಲ್‌ನ ಒಳಾಂಗಣದ ತದ್ರೂಪು ಸೃಷ್ಟಿಸುತ್ತಿದ್ದಾರೆ.

ಚರಿತ್ರೆಯ ವಿಷಯಗಳನ್ನು ಹೆಕ್ಕಿಕೊಂಡು, ಟಿವಿ ಧಾರಾವಾಹಿಗಳನ್ನು ನಿರ್ಮಿಸಿ ಹೆಸರು ಮಾಡಿರುವ, ಸಿನಿಮಾ ಕ್ಷೇತ್ರದಲ್ಲೂ ಕಾಸು ಚೆಲ್ಲಿರುವ ಅಕ್ಬರ್‌ ಖಾನ್‌ ತಾಜ್‌ಮಹಲ್ಲಿನ ನಿರ್ಮಾಣದ ಹಿಂದಿನ ಇಂಚಿಂಚೂ ಕತೆಯನ್ನು ಹೇಳಲು ಸಿದ್ಧಗೊಳ್ಳುತ್ತಿರುವ ಪರಿಯಿದು. ದೇಶದಲ್ಲೇ ಹಿಂದೆಂದಿಗಿಂತಲೂ ಅದ್ಧೂರಿ ಚಿತ್ರವಾಗಲಿದೆ 'ತಾಜ್‌ ಮಹಲ್‌- ಆ್ಯನ್‌ ಎಟೆರ್ನಲ್‌ ಲವ್‌ ಸ್ಟೋರಿ" ಎನ್ನುತ್ತಾರೆ ಖಾನ್‌. ಸೆಟ್‌ ನಿರ್ಮಾಣಕ್ಕೇ ಅವರು ಸುರಿಯುತ್ತಿರುವ ಹಣ ಬರೋಬ್ಬರಿ 50 ಕೋಟಿ ರುಪಾಯಿ !

ನಾಲ್ಕು ತಿಂಗಳಿಂದ ಭಾರೀ ಸೆಟ್‌ ನಿರ್ಮಾಣದ ಕೆಲಸ ನಡೆಯುತ್ತಿದೆ. ಬಿಡುವೇ ಇಲ್ಲದ ಅಕ್ಬರ್‌, ಕೆಲಸದ ನಡುವೆಯೇ ಮಾತಾಡಿದ್ದು ಹೀಗೆ...

ತಾಜ್‌ಮಹಲ್‌ ನಿರ್ಮಾಣದ ಹಿಂದಿನ ನೈಜ ಪ್ರಣಯ ಪ್ರಕರಣ ಯಾರಿಗೂ ಗೊತ್ತಿಲ್ಲ. ಅರಸರ ಮನಸ್ಸುಗಳ ಒಳನೋಟ, ತಿಕ್ಕಾಟ, ಪ್ರೇಮದ ಸೆಳಕು....ಇವನ್ನೆಲ್ಲಾ ಸಿನಿಮಾದ ಮೂಲಕ ತೋರಿಸುವುದು ನನ್ನ ಉದ್ದಿಶ್ಯ. 17ನೇ ಶತಮಾನದಲ್ಲಿ ಮುಗಲ್‌ ದೊರೆ ಷಹಜಹಾನ್‌, ರಾಣಿ ಮುಮ್ತಾಜ್‌ ನೆನಪಿಗೆ ಕಟ್ಟಿದ ಪ್ರೇಮಸೌಧ ತಾಜ್‌ಮಹಲ್‌ ಅನ್ನೋದಷ್ಟೇ ಎಷ್ಟೋ ಜನರಿಗೆ ಗೊತ್ತು. ಆದರೆ ಶಹಜಹಾನ್‌ ಪಾಲಿಗೆ ಆಕೆ 14ನೇ ಮಗುವನ್ನು ಹೆತ್ತು, ಕಣ್ಣು ಮುಚ್ಚಿದ ಜೀವನಾಡಿ. ಹೆಂಡತಿ ಕಳಕೊಂಡ ಬಾದಶಹನ ಕೂದಲು ಒಂದೇ ರಾತ್ರಿಯಲ್ಲಿ ನರೆತುಬಿಟ್ಟವಂತೆ.

ಈ ಕತೆಯಲ್ಲಿನ ಮಾನವಾಸಕ್ತ ವಿಷಯಗಳು ಅನೇಕ. ಜನರಿಗೆ ಮೆಚ್ಚಾಗುವಂತೆ ಅವನ್ನು ಬಿಚ್ಚಿಡಲು ಸಾಕಷ್ಟು ಹೆಣಗಾಡುತ್ತಿದ್ದೇನೆ. ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಅನ್ನೋದು ನನ್ನ ನಂಬುಗೆ. ಅಕ್ಟೋಬರ್‌ 10ರಂದು ಚಿತ್ರೀಕರಣ ಪ್ರಾರಂಭವಾಗುತ್ತದೆ. ಕಬೀರ್‌ ಬೇಡಿ ಶಹಜಹಾನ್‌ ಪಾತ್ರ ಮಾಡುತ್ತಾರೆ. ಮುಮ್ತಾಜ್‌ ಆಗಿ ಹೊಸ ನಾಯಕಿಯಾಬ್ಬಳನ್ನು ಪರಿಚಯಿಸುತ್ತಿದ್ದೇವೆ. ಆಕೆ ಯಾರು ಅನ್ನೋದು ಸಸ್ಪೆನ್ಸ್‌. ಆರು ತಿಂಗಳಲ್ಲಿ ಚಿತ್ರೀಕರಣ ಪೂರೈಸುತ್ತದೆ.

ಇನ್ನೊಂದು ತಾಜ್‌ಮಹಲ್‌ : ಅದೇಕೋ ಈಗ ಸಿನಿಮಾ ಮಂದಿಗೆ ತಾಜ್‌ಮಹಲ್‌ ತಾಜಾ ಮಾಲಾಗುತ್ತಿದೆ. ಗಣಪತಿ ಭಾರತ್‌ ಎಂಬ ನಿರ್ದೇಶಕ ಕೆಲವು ತಿಂಗಳ ಹಿಂದಷ್ಟೇ ತಾಜ್‌ಮಹಲ್‌ ಕುರಿತು ಸಿನಿಮಾ ಮಾಡುವುದಾಗಿ ಪ್ರಕಟಿಸಿದ್ದರು. ಅಮೆರಿಕಾ ಮೂಲದ ಭಾರತೀಯ ತಾಂತ್ರಿಕ ಸಂಸ್ಥೆ ಟೈಕೂನ್ಸ್‌ ಇದಕ್ಕೆ ಹಣ ಹಾಕಲಿದೆ ಎಂದೂ ಹೇಳಿದ್ದರು. ಅಂದಹಾಗೆ, ಈ ಚಿತ್ರದ ನಾಯಕನ ಹೆಸರನ್ನು ಅವರು ಪ್ರಕಟಿಸಿಲ್ಲ. ನಾಯಕಿ- ಐಶ್ವರ್ಯ ರೈ. ಗಣಪತಿ- ಅಕ್ಬರ್‌ ಮಾತಾಡಿಕೊಂಡಿದ್ದಾರೋ ಅಥವಾ ಪೋಟಿಗಿಳಿದಿದ್ದಾರೋ ಅನ್ನೋದು ಅರ್ಥವಾಗುತ್ತಿಲ್ಲ.

English summary
Akbar Khan is planning to make a movie, woven around the royal romance that inspired the Taj Mahal, which he says will be the most expensive movie ever made in the country.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada