ಚಿಕ್ಕಬಳ್ಳಾಪುರ: ಆದಿಯೋಗಿ ಸನ್ನಿಧಿಯ ನಾಗರಾಧನೆಯಲ್ಲಿ ನಟಿ ತಮನ್ನಾ, ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಭಾಗಿ
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದ 'ಕಾವಾಲ" ಹಾಡಿನ ಯಶಸ್ಸಿನಲ್ಲಿ ತೇಲುತ್ತಿರುವ ನಟಿ ತಮನ್ನಾ ಭಾಟಿಯಾ ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗ ಪಂಚಮಿ ಹಿನ್ನೆಲೆ ಸದ್ಗುರು ಸನ್ನಿಧಿಯಲ್ಲಿ ಆಯೋಜಿಸಲಾದ ಪುರಾತನ ನಾಗ ಮಂಡಲ ಪೂಜೆಯಲ್ಲಿ ಭಾಗವಹಿಸಿದ್ದಾರೆ.
ಪಾಕೃತಿಕ ತಾಣದಲ್ಲಿ ನಟೆದ ನಾಗ ಮಂಡಲ ಪೂಜೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹೆಗಡೆ, ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ಶಿವಕುಮಾರ್ ಅವರು ನಟಿ ತಮ್ಮನಾ ಭಾಟಿಯಾ ಪಕ್ಕದಲ್ಲಿಯೇ ಕುಳಿತು ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಪಾಕೃತಿಕ ತಾಣದಲ್ಲಿ ಜನಸಂದಣಿ, ದೇವರಿಗೆ ವಿಶೇಷ ಅಲಂಕಾರ, ಉಡುಪಿಯ ನಾಗಪಾತ್ರಿಗಳಿಂದ ನಾಗಮಂಡಲ ರಚನೆ, ಪೂಜೆಗೆ ನಾನಾ ಬಗೆಯ ವಾದ್ಯಗಳ ವಾದನ, ಮೈ ನವಿರೇಳಿಸುವ ನಾಗನೃತ್ಯಗಳ ಮಧ್ಯೆ ಆದಿಯೋಗಿ ಧಾನ್ಯ ಕೇಂದ್ರದಲ್ಲಿ ಭಕ್ತರು ಮೈಮರೆತಿದ್ದಾರೆ. ದೈವಿಕ ನಾಗನನ್ನು ಆರಾಧಿಸುವ ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಸದ್ಗುರು ನೇತೃತ್ವದಲ್ಲಿ ಅದ್ಧೂರಿಯಾಗಿ ಕೈಗೊಂಡ ಬೃಹತ್ ಕಾರ್ಯಕ್ರಮದಲ್ಲಿ ಪೂಜಾ ಚಟುವಟಿಕೆಯು ಸಂಪ್ರದಾಯಬದ್ಧವಾಗಿ ನೆರವೇರಿದೆ.
ನಾಗಮಂಡಲ ಪೂಜೆಯಲ್ಲಿ ನಟಿಯರಾದ ತಮ್ಮನ್ನಾ, ಶ್ರೀನಿಧಿ ಶೆಟ್ಟಿ ಜೊತೆಗೆ ಸಂಸದರಾದ ಉಮೇಶ್ ಜಾದವ್, ಎನ್.ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್, ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಪ್ರದೀಪ್ ಈಶ್ವರ್, ಟಿ.ಬಿ.ಜಯಚಂದ್ರ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾ ಕೃಷ್ಣ, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕಿ ದಿವ್ಯ ಹೊಸೂರು, ಬಿಬಿಎಂಪಿ ವಿಶೇಷ ಆಯುಕ್ತ ಕೆ.ವಿ.ತಿಲೋಕಚಂದ್ರ ಡಿಜಿಪಿ ರವೀಂದ್ರನಾಥ್, ಎಡಿಜಿ ಸೀಮಂತಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

ನಟಿ ತಮನ್ನಾ ಭಾಟಿಯಾ ಅವರು ಆಧ್ಯಾತ್ಮಿಕದ ಕಡೆ ಒಲವಿರುವವರು ಎಂದು ಈ ಹಿಂದೆ ರಜನಿಕಾಂತ್ ಹೈಲೈಟ್ ಮಾಡಿದ್ದರು. 'ಜೈಲರ್' ಸಿನಿಮಾ ಬಿಡುಗಡೆಯ ಮೊದಲು ನಡೆದ ಸಮಾರಂಭದಲ್ಲಿ ತಮನ್ನಾ ಕೂಡ ತಮ್ಮಂತೆ ಹೆಚ್ಚು ಆಧ್ಯಾತ್ಮಿಕ ವ್ಯಕ್ತಿ ಎಂದು ಹೇಳಿದ್ದರು. ಜೊತೆಗೆ ಈ ಬಗ್ಗೆ ತಿಳಿದು ತಮಗೆ ಆಶ್ಚರ್ಯವಾಗಿದೆ ಎಂಬುದನ್ನು ಹೇಳಿದ್ದರು.
"ನಾಗಮಂಡಲವು ನಾಗನ ಅನುಗ್ರಹ ಪಡೆಯುವ ಸಾಂಪ್ರದಾಯಿಕ ಆಚರಣೆ, ಇದು ಆಧ್ಯಾತ್ಮಿಕ, ಸಾಂಸ್ಕೃತಿಕ ಬೆಳವಣಿಗೆಯ ಅನುಕೂಲಗಳನ್ನು ಹೊಂದಿದೆ ಎಂಬ ನಂಬಿಕೆಯಿದೆ. ಜ್ಯಾಮಿತೀಯ ವಿನ್ಯಾಸದ ಮಂಡಲದ ರೇಖಾ ಚಿತ್ರ ಬಿಡಿಸುವಿಕೆಯು, ಸ್ತೋತ್ರ ಮತ್ತು ಮಂತ್ರಗಳ ಪಠಣ ಹಾಗೂ ಅರ್ಪಣೆಯು ನಾಗಾರಾಧನೆಯಲ್ಲಿದೆ. ಇದರಿಂದ ಜೀವನದಲ್ಲಿರುವ ಅಡೆತಡೆಗಳು ನಿವಾರಣೆಗೊಂಡು ಸಾಮರಸ್ಯ, ಶಾಂತಿ, ಸಮೃದ್ಧಿ ಉಂಟಾಗುತ್ತದೆ. ಪ್ರಾಮಾಣಿಕ ಪ್ರಯತ್ನದಲ್ಲಿ ಯಶಸ್ಸು ಮೂಡಿ ಆಧ್ಯಾತ್ಮಿಕ ಪ್ರಗತಿ ಕಂಡುಬರುತ್ತದೆ" ಎಂದು ನಾಗ ಪೂಜೆ ವೇಳೆ ಸದ್ಗುರು ತಿಳಿಸಿದ್ದರು.


Click it and Unblock the Notifications











