ತಮನ್ನಾ ಹೇಳಿದ ಮಾತಿಗೆ ತಮಿಳು ನಟ ವಿಜಯ್ ಫ್ಯಾನ್ಸ್ ಗರಂ
ದಕ್ಷಿಣ ಭಾರತದಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟಿಯರ ಪೈಕಿ ಬಹುಭಾಷಾ ನಟಿ ತಮನ್ನಾ ಪ್ರಮುಖರು. ಬಾಹುಬಲಿ ಚಿತ್ರದಲ್ಲಿ ಅವಂತಿಕಾ ಹಾಗೂ ಸೈರಾ ಸಿನಿಮಾದಲ್ಲಿ ಭಾನುಮತಿ ಪಾತ್ರ ನಿರ್ವಹಿಸಿ ಅಭಿಮಾನಿಗಳ ಹೃದಯ ಕದ್ದಿದ್ದಾರೆ.
ಇಂತಹ ಸ್ಟಾರ್ ನಟಿಯ ವಿರುದ್ಧ ತಮಿಳು ನಟ ವಿಜಯ್ ಅಭಿಮಾನಿಗಳ ಗರಂ ಆಗಿದ್ದಾರೆ. ತಮನ್ನಾ ನಟಿಸಿರುವ 'ಪೆಟ್ರೋಮ್ಯಾಕ್ಸ್' (Petromax) ಸಿನಿಮಾದ ಪ್ರಚಾರದ ವೇಳೆ ವಿಜಯ್ ಕುರಿತು ನೀಡಿದ ಹೇಳಿಕೆ ಈಗ ದಳಪತಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಅಷ್ಟಕ್ಕೂ, ವಿಜಯ್ ಕುರಿತು ತಮನ್ನಾ ಏನು ಹೇಳಿದರು? ತಮನ್ನಾ ನೀಡಿದ ಹೇಳಿಕೆಯಲ್ಲಿ ಅಂತಹದ್ದೇನಿದೆ? ಮುಂದೆ ಓದಿ....

ಆ ನಟನ ಕುರಿತು ನನಗೆ ಅಷ್ಟಾಗಿ ಗೊತ್ತಿಲ್ಲ
ತಮಿಳು ನಟ ವಿಜಯ್ ಕುರಿತು ಹೇಳಿ ಎಂದಾಗ ''ನಾನು ವಿಜಯ್ ಜೊತೆ ನಟಿಸುವಾಗ ಬಹಳ ಚಿಕ್ಕವಳು, ಆ ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ. ನಾನೊಬ್ಬ ಅಭಿಮಾನಿಯಂತೆ ನಟಿಸಿದ್ದೆ. ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ನಿಜ ಹೇಳಬೇಕು ಅಂದ್ರೆ ಅವರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ ಹಾಗಾಗಿ, ಅವರ ಬಗ್ಗೆ ನಾನು ಹೇಳಲು ಸಾಧ್ಯವಿಲ್ಲ'' ಎಂದಿದ್ದಾರೆ.

ದೊಡ್ಡ ನಟನೆ ಬಗ್ಗೆ ಗೊತ್ತಿಲ್ವಾ?
''ಒಂದು ಕಾಲದಲ್ಲಿ ಎಂಜಿಆರ್, ಶಿವಾಜಿ, ಆ ಬಳಿಕ ರಜನಿಕಾಂತ್, ಕಮಲ್ ಹಾಸನ್....ಈಗ ವಿಜಯ್ ಆ ಕ್ರೇಜ್ ಹೊಂದಿದ್ದಾರೆ. ಇಂಡಸ್ಟ್ರಿಗೆ ಬಂದು ಇಷ್ಟು ವರ್ಷ ಕಳೆದಿದೆ. ವಿಜಯ್ಎಷ್ಟು ದೊಡ್ಡ ನಟರು. ಅವರ ಜೊತೆ ಸಿನಿಮಾ ಬೇರೆ ಮಾಡಿದ್ದೀರಾ. ಆದರೂ ಅವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳುವುದು ಸರಿಯಿಲ್ಲ'' ಎಂದು ವಿಜಯ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಮತ್ತೆ ನಟಿಸಲು ಅವಕಾಶ ಸಿಕ್ಕಿಲ್ಲ
2010ರಲ್ಲಿ ತೆರೆಕಂಡಿದ್ದ 'ಸುರ' ಚಿತ್ರದಲ್ಲಿ ವಿಜಯ್ ಜೊತೆ ತಮನ್ನಾ ಮೊದಲ ಸಲ ನಟಿಸಿದ್ದರು. ಬಳಿಕ ಯಾವುದೇ ಸಿನಿಮಾನೂ ಒಟ್ಟಿಗೆ ಮಾಡಿಲ್ಲ. ಮತ್ತೆ ಅವಕಾಶ ಸಿಕ್ಕರೆ ವಿಜತ್ ಜೊತೆ ಸಿನಿಮಾ ಮಾಡ್ತೀನಿ ಎಂದು ಹಲವು ಸಲ ಹೇಳಿಕೊಂಡಿರುವ ತಮನ್ನಾ, ಈಗಲೂ ಆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಅವರ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ ಎನ್ನುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

'ಬಿಗಿಲ್' ಚಿತ್ರದಲ್ಲಿ ವಿಜಯ್
ಅಟ್ಲಿ ನಿರ್ದೇಶನದಲ್ಲಿ ತಯಾರಾಗಿರುವ 'ಬಿಗಿಲ್' ಸಿನಿಮಾ ಬಿಡುಗಡೆಗೆ ವಿಜಯ್ ಕಾಯುತ್ತಿದ್ದಾರೆ. ಮತ್ತೊಂದೆಡೆ ಸೈರಾ, ಪೆಟ್ರೋಮ್ಯಾಕ್ಸ್ ಸಿನಿಮಾಗಳ ಬಳಿಕ ಆಕ್ಷನ್, ಸರಿಲೇರು ನೀಕೆವರು, ದಟ್ ಈಸ್ ಮಹಾಲಕ್ಷ್ಮಿ ಜೊತೆಗೆ ಒಂದು ಹಿಂದಿ ಸಿನಿಮಾ ಕೂಡ ಮಾಡುತ್ತಿದ್ದಾರೆ ತಮನ್ನಾ.


Click it and Unblock the Notifications











