ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್‌ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
ಚಿತ್ರರಂಗ.. ರಾಜಕೀಯದ ರಣರಂಗ.. ರಮ್ಯಾ ನಡೆ ಯಾವ ಕಡೆ ಅನ್ನುವುದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ, ಉತ್ತರಕಾಂಡ ಚಿತ್ರದಿಂದ, ಮೋಹಕತಾರೆ ರಮ್ಯಾ ಹೊರ ನಡೆದ ಮೇಲೆ ಅವರ ಜಾಗಕ್ಕೆ ಬರುವ ನಾಯಕಿ ಯಾರು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿದೆ.
ಹೌದು. ಐಶ್ವರ್ಯ ರಾಜೇಶ್, ಕಾಲಿವುಡ್‌ನ ಕಿನ್ನರಿ. 'ಕಾಕ ಮುತ್ತೈ' .. 'ವಡಾ ಚೆನ್ನೈ' .. 'ಕನಾ' .. 'ನಮ್ಮ ಮನೆ ಪಿಳ್ಳೈ' .. ಹೀಗೆ ಹತ್ತಾರು ಚಿತ್ರ, ವೈವಿಧ್ಯಮಯ ಪಾತ್ರದ ಮೂಲಕ ಜನ ಮನ ಗೆದ್ದ ಐಶ್ವರ್ಯ ರಾಜೇಶ್, ಚಂದನವನದ ಚೆಂದದ ನಾಯಕಿಯರಿಗೆಲ್ಲ ಸೆಡ್ಡು ಹೊಡೆದು ಉತ್ತರಕಾಂಡ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ .. ಸ್ಯಾಂಡಲ್‌ವುಡ್ ನಲ್ಲಿ ಸಂಚಲನ ಸೃಷ್ಟಿಸಲು ಸಿದ್ಧರಾಗಿದ್ದಾರೆ. ಹೀಗೊಂದು ಗುಸುಗುಸು.. ಪಿಸು ಪಿಸು ಮಾತು, ವಜ್ರೇಶ್ವರಿ ಸಂಸ್ಥೆಯ ಮೇಲಗಡೆ ಇರುವ ಕೆ.ಆರ್.ಜಿ ಸ್ಟುಡಿಯೋಸ್ ನ ಕಚೇರಿಯಲ್ಲಿ ಕೇಳಿ ಬರುತ್ತಿದೆ.

ಇನ್ನೂ.. ಐಶ್ವರ್ಯ ರಾಜೇಶ್ ಅವರ ಜೊತೆ ಈಗಾಗ್ಲೇ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಒಂದೆರಡ್ಮೂರು ಸುತ್ತು ಮಾತುಕತೆ ನಡೆಸಿದ್ದಾರೆ. ಕಥೆ ಕೇಳಿ ಐಶ್ವರ್ಯ ರಾಜೇಶ್ ಕೂಡ ಪುಳಕಿತಗೊಂಡಿದ್ದಾರೆ ಅನ್ನುವ ಸುದ್ದಿಯೂ ಇದೆ. ಇನ್ನು ತಮ್ಮ ಚಿತ್ರಕ್ಕೆ ಬಣ್ಣ ಹಚ್ತಿರುವ ಕಲಾವಿದರನ್ನ ಇವತ್ತು ಒಬ್ಬರಾದ ಮೇಲೊಬ್ಬರಂತೆ ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮ ಹಮ್ಮಿಕೊಂಡಿರುವ ಕೆ.ಆರ್.ಜಿ ಸಂಸ್ಥೆ, ಐಶ್ವರ್ಯ ರಾಜೇಶ್ ಅವರ ಹೆಸರನ್ನೂ ಸದ್ಯದಲ್ಲಿಯೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.

ಉಳಿದಂತೆ ರೊಹೀತ್ ಪದಕಿ ನಿರ್ದೇಶನದಲ್ಲಿ ಅನಾವರಣವಾಗಲಿರುವ ಬಯಲು ಸೀಮೆಯ ಕಥೆಯಲ್ಲಿ ಚೈತ್ರಾ ಆಚಾರ್ ಲಚ್ಚಿ ಪಾತ್ರಕ್ಕೆ ಬಣ್ಣ ಹಚ್ತಿದ್ದಾರೆ. ದೂದ್ ಪೇಡಾ ದಿಗಂತ್ ಅವರಿಗೆ ಮಿರ್ಚಿ ಮಲ್ಲಿಗೆ ಎಂದು ಮರುನಾಮಕರಣ ಮಾಡಲಾಗಿದೆ. ಹಿಂದೆಂದೂ ನೀವು ನೋಡಿರದ ದಿಗಂತ್ ಅವರನ್ನ ಈ ಚಿತ್ರದಲ್ಲಿ ನೀವು ನೋಡಬಹುದು. ಮಲಯಾಳಂನ ನಿರ್ಮಾಪಕ ಮತ್ತು ಆಕ್ಟರ್ ವಿಜಯ್ ಬಾಬು ಕೂಡ ಇದೇ ಚಿತ್ರದ ಮೂಲಕ ಕನ್ನಡಕ್ಕೆ ಬಲಗಾಲಿಟ್ಟು ಬರುತ್ತಿದ್ದಾರೆ. ಡಾಲಿ ಧನಂಜಯ್ ಜೊತೆ ಕರುನಾಡ ಚಕ್ರವರ್ತಿ ಕೂಡ ಚಿತ್ರದಲ್ಲಿದ್ದಾರೆ ಅನ್ನುವ ವಿಚಾರ ನಿಮಗೆ ಈಗಾಗ್ಲೇ ಗೊತ್ತಿರಬೇಕು.

ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ "ಉತ್ತರಕಾಂಡ'' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವುದು ಚಿತ್ರದ ವಿಶೇಷತೆಯಲ್ಲಿ ಒಂದು. ಅದ್ವೈತ ಗುರುಮೂರ್ತಿ ಕ್ಯಾಮರಾದಲ್ಲಿ ಗುದ್ದಾಂ ಗುದ್ದಿಯ ಕಥನ ಸೆರೆಯಾಗಲಿದೆ. ಒಟ್ನಲ್ಲಿ ಸದ್ಯಕ್ಕೆ ರಮ್ಯಾ ಅವರ ಜಾಗಕ್ಕೆ, ಐಶ್ವರ್ಯ ರಾಜೇಶ್ ಬರುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಯಾವುದೇ ಕ್ಷಣದಲ್ಲಾದರೂ ಅಧಿಕೃತ ಘೋಷಣೆಯಾಗಬಹುದು


Click it and Unblock the Notifications