ಒತ್ತಾಯದ ಮೇರೆಗೆ ಮತ್ತೆ ತೆರೆಗೆ ಬಂತು 'ಡಬ್ಬಿಂಗ್' ಸಿನಿಮಾ
ಕನ್ನಡ ಸಿನಿಮಾರಂಗಕ್ಕೆ ಡಬ್ಬಿಂಗ್ ಬೇಕು ಬೇಡ ಎನ್ನುವ ವಿರೋಧಗಳ ನಡುವೆ ಈಗಾಗಲೇ ತಮಿಳಿನಿಂದ ಕನ್ನಡಕ್ಕೆ ಮೂರು ಡಬ್ ಆದ ಚಿತ್ರಗಳು ತೆರೆಗೆ ಬಂದವು. ಕಳೆದ ತಿಂಗಳ ಅಂತ್ಯದಲ್ಲಿ ತಮಿಳು ಸ್ಟಾರ್ ನಟ 'ಅಜಿತ್' ಅಭಿನಯದ 'ಆರಂಭಂ' ಸಿನಿಮಾ ಕನ್ನಡದಲ್ಲಿ 'ಧೀರ' ಎಂಬ ಹೆಸರಿನಲ್ಲಿ ಡಬ್ಬಿಂಗ್ ಆಗಿ ತೆರೆಕಂಡಿತ್ತು. 'ಧೀರ' ಬೆಂಗಳೂರಿನಲ್ಲಿ ಕೇವಲ ಒಂದು ಚಿತ್ರಮಂದಿರದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಹೊಸ ಕರೆಹಳ್ಳಿಯಲ್ಲಿರುವ 'ಶ್ರೀಕೋಕಿಲ' ಚಿತ್ರಮಂದಿರದಲ್ಲಿ 'ಧೀರ' ರಿಲೀಸ್ ಆಗಿದ್ದು, ದಿನಕ್ಕೆ ನಾಲ್ಕು ಪ್ರದರ್ಶನ ಕೂಡ ಕಂಡಿತ್ತು.
ಬೆಂಗಳೂರಿನ ಚಿತ್ರಮಂದಿರ ಸೇರಿದಂತೆ ರಾಜ್ಯದ ಇತರೆ ನಗರದಲ್ಲೂ 'ಧೀರ' ಚಿತ್ರ ತೆರೆಕಂಡಿತ್ತು. ಮೂಡಬಿದ್ರೆಯ 'ಅಮರಶ್ರೀ', ಕಾರ್ಕಳದ 'ಪ್ಲಾನೆಟ್' ಚಿತ್ರಮಂದಿರ, ಹಾಗೂ ಬೈಂದೂರಿನ 'ಶಂಕರ್' ಚಿತ್ರಮಂದಿರದಲ್ಲಿ ಪ್ರೇಕ್ಷಕರು ತಮಿಳಿನಿಂದ ಕನ್ನಡಕ್ಕೆ ಡಬ್ಬಿಂಗ್ ಆದ 'ಧೀರ' ಚಿತ್ರವನ್ನ ನೋಡಿದ್ದರು.

ಬೆಂಗಳೂರಿನಲ್ಲಿ 'ಧೀರ' ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರ ಚೆನ್ನಾಗಿದೆ, ಡಬ್ಬಿಂಗ್ ಗುಣಮಟ್ಟ ಕೂಡ ಉತ್ತಮವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಒಳ್ಳೆ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನಲೆಯಲ್ಲಿ ನಿರ್ಮಾಪಕರು 'ಧೀರ' ಚಿತ್ರವನ್ನು ಈ ವಾರವೂ ರಾಜ್ಯದ ಹಲವಾರು ಸಿನಿಮಾಮಂದಿರಗಳಲ್ಲಿ ರಿಲೀಸ್ ಮಾಡಿದ್ದಾರೆ.

ಇಂದಿನಿಂದ (ಡಿ 15) ನರಗುಂದ, ಹುಬ್ಬಳ್ಳಿ, ಧಾರಾವಾಡ, ರಾಣಿಬೆನ್ನೂರು, ವಿಜಯಪುರ, ಬೆಳಗಾವಿ, ಬೀಳಗಿ, ಚಿಕ್ಕೆರೂರು, ಅಮೀನಗಡ, ರೋಣ, ಸೇರಿದಂತೆ ಸಕಲೇಶಪುರ ಮತ್ತು ಹರಪ್ಪನಹಳ್ಳಿ ಯಲ್ಲಿ 'ಧೀರ' ಚಿತ್ರ ಪ್ರದರ್ಶನವಾಗುತ್ತಿದೆ. ಇದೇ ರೀತಿಯಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಡಬ್ಬಿಂಗ್ ಆಗಿರುವ ಚಿತ್ರಗಳು ರಿಲೀಸ್ ಆಗಲಿವೆ.


Click it and Unblock the Notifications











