ರಜನಿಕಾಂತ್ ನೆಚ್ಚಿನ ನಿರ್ದೇಶಕ ಮಹೇಂದ್ರನ್ ವಿಧಿವಶ
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಜೆ ಮಹೇಂದ್ರನ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಮಹೇಂದ್ರನ್ ಮಾರ್ಚ್ 27 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ(ಏಪ್ರಿಲ್-1) ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದ್ರೆ, ಇಂದು ಬೆಳಗ್ಗೆ 77 ವರ್ಷದ ಮಹೇಂದ್ರನ್ ವಿಧಿವಶರಾಗಿದ್ದಾರೆ.
ತಮಿಳಿನಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಮಹೇಂದ್ರನ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹೇಂದ್ರನ್ ಸೂಪರ್ ಸ್ಟಾರ್ ರಜನಿಕಾಂತ್ ಪಾಲಿಗಂತು ದೊಡ್ಡ ನಿರ್ದೇಶಕರೇ ಆಗಿದ್ದರು. ಯಾಕಂದ್ರೆ, ಸೂಪರ್ ಸ್ಟಾರ್ ಹೆಸರು ಬರಲು ಮಹೇಂದ್ರನ್ ಅವರೇ ಕಾರಣ ಅಂತಾನು ಹೇಳಲಾಗುತ್ತೆ.
ಮಹೇಂದ್ರನ್ ನಿರ್ದೇಶನ ಮಾಡಿದ ಸಿನಿಮಾಗಳಲ್ಲಿ ಅತೀ ಹೆಚ್ಚು ರಜನಿಕಾಂತ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. 'ಮಲ್ಲುಮ್ ಮಲರುಮ್', 'ಜಾನಿ', 'ನಂಜಥೈ ಕಿಲ್ಲಾದಿ' ಚಿತ್ರಗಳಂತಹ ಅದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಹೇಂದ್ರನ್ ಇತ್ತೀಚಿನ ದಿನಗಳಲ್ಲಿ ಅಭಿನಯ ಕೂಡ ಮಾಡಿ ಸೈ ಎನಿಸಿಕೊಂಡಿದ್ದರು.

ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಮಹೇಂದ್ರನ್ ಇತ್ತೀಚಿನ ದಿನಗಳಲ್ಲಿ ರಜನಿಕಾಂತ್ ಅಭಿನಯದ 'ಪೇಟಾ', ವಿಜಯ್ ಸೇತುಪತಿ ಅಭಿನಯದ 'ಸೀತಾಕತ್ತಿ' ಸಿನಿಮಾ ಗಳಲ್ಲೂ ಕಾಣಿಸಿಕೊಂಡಿದ್ದರು. ವಿಶೇಷ ಅಂದ್ರೆ ಮಹೇಂದ್ರನ್ ರವಿವರ್ಮ ನಿರ್ದೇಶನದ 'ರಸ್ತುಂ' ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದರು ಮಹೇಂದ್ರನ್.
ಮಹೇಂದ್ರನ್ ನಿಧನದಿಂದ ಇಡೀ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಹೇಂದ್ರನ್ ಪಾರ್ಥೀವ ಶರೀರದ ಅಂತಿನ ದರ್ಶನ ಪಡೆದರು. ಜೊತೆಗೆ ನಟ ವಿಜಯ್, ನಿರ್ದೇಶಕ ಎ ಆರ್ ಮುರುಗದಾಸ್, ನಟಿ ಸುಹಾಸಿನಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.


Click it and Unblock the Notifications











