ಅಮರ್ ಜೊತೆಯಾದ ಮಂಗಳೂರು ಬೆಡಗಿ 'ತಾನ್ಯ'
'ಅಮರ್' ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ. ನಾಗಶೇಖರ್ ನಿರ್ದೇಶನದಲ್ಲಿ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಅಮರ್ ಸಿನಿಮಾಗೆ ನಾಯಕಿಯಾಗಿ ತಾನ್ಯ ಹೋಪೆ ಆಯ್ಕೆ ಆಗಿದ್ದಾರೆ.
ಈಗಾಗಲೇ ಕನ್ನಡದ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿರುವ ತಾನ್ಯ, ಯಂಗ್ ರೆಬೆಲ್ ಸ್ಟಾರ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ. ಅಭಿಷೇಕ್ ಜೊತೆಯಾಗಿ ಯಾರು ಅಭಿನಯ ಮಾಡುತ್ತಾರೆ ಎನ್ನುವ ನಿರೀಕ್ಷೆಗೆ ತೆರೆ ಬಿದ್ದಿದ್ದು ಇಬ್ಬರ ಆನ್ ಸ್ಕ್ರೀನ್ ಜೋಡಿ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸುತ್ತಿದೆ.

'ಹೋಮ್ ಮಿನಿಸ್ಟರ್' ಚಿತ್ರದ ಮೂಲಕ ರಿಯಲ್ ಸ್ಟಾರ್ ಜೊತೆಯಲ್ಲಿ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ತಾನ್ಯ ಹೋಪೆ ಇನ್ನು ಒಂದು ಚಿತ್ರ ಬಿಡುಗಡೆ ಆಗದೆಯೇ ಎರಡು ಚಿತ್ರದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಸಿನಿಮಾರಂಗದಲ್ಲಿಯೂ ನಾಯಕಿಯಾಗಿ ಮಿಂಚುತ್ತಿರುವ ತಾನ್ಯ ಹೋಪೆ ಕನ್ನಡ ಸಿನಿಮಾರಂಗದಲ್ಲಿ ಭರವಸೆ ನಾಯಕಿಯಾಗಿ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಸದ್ಯ ಅಮರ್ ಸಿನಿಮಾಗೆ ನಾಯಕಿಯಾಗಿರುವ ತಾನ್ಯ ಅಭಿನಯದ ಹೋಂ ಮಿನಿಸ್ಟರ್ ಹಾಗೂ ಯಜಮಾನ ಚಿತ್ರಗಳು ಬಿಡುಗಡೆ ಆಗಬೇಕಿವೆ. ಒಟ್ಟಾರೆ ನಮ್ಮದೆ ನೆಲದ ನಾಯಕಿಯರು ಚಿತ್ರರಂಗದಲ್ಲಿ ಮಿಂಚುತ್ತಿರುವುದು ಖುಷಿಯ ವಿಚಾರ.


Click it and Unblock the Notifications











