»   » ಋತು ಚಕ್ರದಲ್ಲಿ ಹಣ್ಣಾಗದ ಹೂವು?

ಋತು ಚಕ್ರದಲ್ಲಿ ಹಣ್ಣಾಗದ ಹೂವು?

Posted By: Staff
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಶಶಿಕಲಾ ನಂತರ ತಂಗಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತ ನಟಿ ಎಂದು ಹೆಸರು ಮಾಡಿದವರು ಕೃಷ್ಣ ಸುಂದರಿ 'ತಾರಾ". ಕನ್ನಡ ಚಿತ್ರಗಳಲ್ಲಿ ಎರಡನೇ ಹೀರೋಯಿನ್‌ ಆಗಿ ಇಲ್ಲವೆ ತಂಗಿಯ ಪಾತ್ರಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡ ತಾರಾ ಈಗ ಉತ್ತಮ ಪಾತ್ರಗಳಿಗಾಗಿ ಹುಡುಕುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಕೃತಿ ಆಧಾರಿತ ಹಾಗೂ ಗಿರೀಶ್‌ ಕಾರ್ನಾಡರ ಮಹತ್ವಾಕಾಂಕ್ಷೆಯ ಚಿತ್ರ 'ಕಾನೂರು ಹೆಗ್ಗಡಿತಿ"ಯಲ್ಲಿ ನಾಯಕಿಯಾಗಿ ನಟಿಸಿದ ತಾರಾ ಫಿಲ್ಮ್‌ಫೇರ್‌ನ ಅತ್ಯುತ್ತಮ ನಟಿ ಪ್ರಶಸ್ತಿಗೂ ಪಾತ್ರರಾದರು.

ತಾರಾ ಚಿತ್ರರಂಗಕ್ಕೆ ಪ್ರವೇಶಿಸಿದ್ದು ಅನಿರೀಕ್ಷಿತವಾಗಿ. ತಾರಾರ ಮೊದಲ ಹೆಸರು ಅನೂರಾಧಾ. ಅನುರಾಧಾ ಆರನೇ ತರಗತಿಯಲ್ಲಿ ಓದುತ್ತಿದ್ದಾಗ ರವೀಂದ್ರಕಲಾಕ್ಷೇತ್ರದಲ್ಲಿ ಕಾರ್ಯಕ್ರಮವೊಂದನ್ನು ನೀಡುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ವೇಮಗಲ್‌ ಜಗನ್ನಾಥ ರಾವ್‌ ಅವರ ಕಣ್ಣಿಗೆ ಬಿದ್ದರು. ವೇಮಗಲ್‌ ತಮ್ಮ ಚಿತ್ರ 'ತುಳಸಿದಳ "ದಲ್ಲಿ ತಾರಾಗೆ ಅವಕಾಶ ನೀಡಿದರು. ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತಾರಾ ಆನಂತರ ತಮಿಳಿನ 'ಇಂಗೈ ಒರು ಗಂಗೈ " ಚಿತ್ರದಲ್ಲಿ ನಟಿಸಿದ ನಂತರ ಬೆಳ್ಳಿತೆರೆಯ ತಾರೆ ಆಗಿದ್ದಷ್ಟೇ ಅಲ್ಲದೆ ಎಲ್ಲರಿಗೂ ತಾರಾ ಎಂದೇ ಪರಿಚಿತರಾದರು.

'ನಾನು ನನ್ನ ಹೆಂಡ್ತಿ " ಚಿತ್ರಿದಲ್ಲಿ ಕಾಶಿನಾಥ್‌ ಸೋದರಿಯಾಗಿ, 'ಪೊಲೀಸನ ಹೆಂಡ್ತಿ " ಹಾಗೂ 'ಕರುಣಾಮಯಿ" ಮೊದಲಾದ ಚಿತ್ರಗಳಲ್ಲಿ ದ್ವಿತೀಯ ನಾಯಕಿಯಾಗಿ ಅಭಿನಯಿಸಿದ ತಾರಾ ಪೂರ್ಣಕಾಲಿಕ ನಾಯಕಿಯಾಗಲೇ ಇಲ್ಲ. ಏಕೆ ಎಂದು ಯಾರಾದರೂ ತಾರಾರನ್ನು ಪ್ರಶ್ನಿಸಿದರೆ. ಉತ್ತರ ಗೊತ್ತಿಲ್ಲ ಎಂದೇ ಹೇಳುತ್ತಾರೆ. ಇದೇ ಪ್ರಶ್ನೆ ತಾರಾರನ್ನೂ ಕಾಡುತ್ತಿದೆಯಂತೆ.

ಚಿತ್ರರಂಗದಲ್ಲಿ ಮಿಂಚ ಬೇಕಾದರೆ, ಗಾಡ್‌ ಫಾದರ್‌ ಇರಲೇ ಬೇಕು ಎನ್ನುವ ತಾರಾ, ತಾವು ಸೂಕ್ತ ಕಾಲದಲ್ಲಿ ಚಿತ್ರರಂಗ ಪ್ರವೇಶಿಸಲಿಲ್ಲ ಎಂದೂ ಹೇಳುತ್ತಾರೆ. ಇದಕ್ಕೆ ಇವರು ನೀಡುವ ವಿವರಣೆ ಏನು ಗೊತ್ತೆ ? ತಾರಾ ಚಿತ್ರರಂಗ ಪ್ರವೇಶಿಸಿದಾಗ, ಆರತಿ, ಅಂಬಿಕಾ, ಗಾಯತ್ರಿ, ಮಹಾಲಕ್ಷ್ಮೀ, ಗೀತಾ ಅವರು ಭಾರಿ ಹೆಸರು ಮಾಡಿದ್ದರು. ಈಗ ಇವರಾರೂ ಕನ್ನಡ ಚಿತ್ರರಂಗದಲ್ಲಿಲ್ಲ ಉಳಿದಿರುವವರು ತಾರಾ ಒಬ್ಬರೇ ಇದು ಇವರಿಗೆ ಹೆಮ್ಮೆ ತಂದಿದೆಯಂತೆ.

ಒಂದೇ ಕೊರಗು : ಸುಮಾರು 18 ತಮಿಳು ಚಿತ್ರಗಳಲ್ಲಿ ತಾರಾ ನಟಿಸಿದ್ದರೂ ಕೂಡ ತಾರಾ ಎಂದೂ ಹೀರೋಯಿನ್‌ ಆದದ್ದಿಲ್ಲ. ಕನ್ನಡಚಿತ್ರಗಳಾದ 'ಕ್ರಮ" ಹಾಗೂ 'ಕರುಣಾಮಯಿ", 'ತೆಲುಗಿನ ಮಾ ಇಂಟಿ ಕಥಾ" ಚಿತ್ರಗಳ ಅಭಿನಯಕ್ಕಾಗಿ ತಾರಾ ರಾಜ್ಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಆದರೆ ಈ ಪ್ರಶಸ್ತಿಗಳಾವುವೂ ಇವರನ್ನು ನಾಯಕನಟಿ ಮಾಡಲಿಲ್ಲ ಎಂಬುದೇ ತಾರಾರ ಕೊರಗು.

ಕನ್ನಡ ಚಿತ್ರರಂಗದಲ್ಲಿ ಅನ್ಯ ಭಾಷಾ ತಾರೆಯರಿಗೆ ಅಗ್ರ ಪ್ರಾಶಸ್ತ್ಯ ನೀಡಿ, ಮುಂಬಯಿಯ ಬೆಡಗಿಯರಿಗೆ ಲಕ್ಷಗಟ್ಟಲೆ ಸಂಭಾವನೆಯ ಜತೆಗೆ ಪಂಚತಾರಾ ಹೊಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ಅಣಿಮಾಡಿ, ಎ.ಸಿ. ಕಾರುಗಳನ್ನು ಓಡಾಡಲು ನೀಡುವ ನಿರ್ಮಾಪಕರು ಕನ್ನಡ ಮಣ್ಣಿನ ನಾಯಕಿಯರನ್ನು ಕಡೆಗಣಿಸುವ ರಾಜಕೀಯದ ಬಗ್ಗೆ ತಾರಾಗೆ ನೋವಿದೆ.

ಕನ್ನಡದ ಚಿತ್ರ ನಟಿಯರು ಮೈಚಳಿ ಬಿಟ್ಟು ನಟಿಸಲು ಹಿಂಜರಿಯುತ್ತಾರೆ, ಬಿಗಿಯುಡುಗೆ ತೊಡಲು ನಿರಾಕರಿಸುತ್ತಾರೆ ಎಂಬ ಕಾರಣಕ್ಕಾಗಿ ಪರಭಾಷೆಯ ನಟಿಯರ ಹಿಂದೆ ನಿರ್ಮಾಪಕರು ನಿಲ್ಲುತ್ತಿದ್ದಾರೆ ಎಂಬ ವಾದವನ್ನು ಅಲ್ಲಗಳೆಯುವ ತಾರಾ, ಬಹು ಹಿಂದಿನಿಂದಲೂ ಕನ್ನಡ ತಾರೆಯರು ಬಿಗಿಯುಡುಗೆ ತೊಟ್ಟಿದ್ದಾರೆ. ನಾವು ಇಂದೂ ಒಂದು ಪರಿಧಿಯಾಳಗೆ ಬಟ್ಟೆ ಕಳಚಲು ಸಿದ್ಧ ಎಂದು ಹೇಳುತ್ತಾರೆ. ಆದರೆ ಪೂರ್ಣ ನಗ್ನರಾಗಿ ನಡೆಯುವುದು ನಮ್ಮ ಸಂಸ್ಕೃತಿಯಲ್ಲ ಎಂಬುದು ತಾರಾರ ಬಿಚ್ಚು ನುಡಿ. 'ಕಾನೂರು ಹೆಗ್ಗಡಿತಿ"ಯಲ್ಲಿ ಖ್ಯಾತ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡರ ಜತೆ ನಟಿಸಿದ ಬಗ್ಗೆ ತಾರಾಗೆ ತಮ್ಮ ಜನ್ಮ ಸಾರ್ಥಕವಾಯಿತು ಎನ್ನಿಸಿತಂತೆ. ಈ ಚಿತ್ರದಲ್ಲಿ ತಮ್ಮ ಅಭಿನಯ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ಅವಕಾಶ ಸಿಕ್ಕಿತು ಎನ್ನುತ್ತಾರೆ ತಾರಾ. ಹೂಸ್ಟನ್‌ನಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನ ಹಾಗೂ ಯು.ಕೆಯಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶಿತಗೊಳ್ಳುತ್ತಿರುವುದನ್ನು ತಾರಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಈ ಚಿತ್ರ ಬಾಕ್ಸ್‌ ಆಫೀಸಿನಲ್ಲಿ ತೋಪಾದರೂ, ಜನಮನ್ನಣೆ ಹಾಗೂ ಪ್ರಶಸ್ತಿ ಎರಡೂ ತಂದಿತ್ತಿದೆ. ಹೀಗಾಗಿ ಈಗ ತಾರಾಗೆ ಕಲಾತ್ಮಕ ಚಿತ್ರಗಳಲ್ಲಿ ನಟಿಸುವ ಆಸೆ ಮೂಡಿದೆ. ಈಗ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಇರಾದೆಯೂ ತಾರಾರಲ್ಲಿ ಮೂಡಿದೆ. ಆ್ಹ ಅಂದಹಾಗೆ ತಾರಾರನ್ನು ಮದುವೆ ಬಗ್ಗೆ ಕೇಳಿದರೆ ಏನು ಹೇಳುತ್ತಾರೆ ಗೊತ್ತೆ. ಅವರು ಸದ್ಯಕ್ಕೆ ತಮ್ಮ ವೃತ್ತಿಯನ್ನೇ ವರಿಸಿದ್ದಾರಂತೆ. ಸಮಯ ಬಂದಾಗ ವಿವಾಹದ ಬಗ್ಗೆ ಚಿಂತಿಸುತ್ತಾರಂತೆ. ಆ ಸಮಯ ಯಾವಾಗ ಬರತ್ತೆ, ಊಟ ಯಾವಾಗ ಹಾಕಿಸುತ್ತಾರೆ ಅಂತ ನೀವು ಕಾಯುತ್ತಾ ಇರಬೇಕಷ್ಟೆ.

English summary
Tara: no parameters to popularity
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada