»   » ಟಿ.ಎನ್‌. ಸೀತಾರಾಂ ನಿರ್ದೇಶನದ ಮಾಯಾಮೃಗ ಶ್ರೇಷ್ಠ ಧಾರಾವಾಹಿ

ಟಿ.ಎನ್‌. ಸೀತಾರಾಂ ನಿರ್ದೇಶನದ ಮಾಯಾಮೃಗ ಶ್ರೇಷ್ಠ ಧಾರಾವಾಹಿ

Posted By: Staff
Subscribe to Filmibeat Kannada

ಬೆಂಗಳೂರು : ಪ್ರಪ್ರಥಮ ಬಾರಿಗೆ ಟಿ.ವಿ. ಸೀರಿಯಲ್‌ ಹಾಗೂ ಸಾಕ್ಷ್ಯ ಚಿತ್ರಗಳಿಗೂ ಪ್ರಶಸ್ತಿ ನೀಡಲುದ್ದೇಶಿಸಿರುವ ರಾಜ್ಯ ಸರಕಾರ 1999-2001 ಸಾಲಿನ ಕಿರುತೆರೆಯ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಮತದಾನ ಚಿತ್ರದ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಟಿ.ಎನ್‌. ಸೀತಾರಾಂ, ದೂರದರ್ಶನಕ್ಕಾಗಿ ನಿರ್ದೇಶಿಸಿದ್ದ ಮಾಯಾಮೃಗ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿ ಗಳಿಸಿದೆ. ದೀಪಾವಳಿ ದೀಪೋತ್ಸವ ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಬಿ. ಸುರೇಶ್‌ ನಿರ್ದೇಶನದ ಸಾಧನೆ ಧಾರಾವಾಹಿ ಹಾಗೂ ವಿಮೋಚನೆ ಎಂಬ ಸಾಕ್ಷ್ಯಚಿತ್ರ 2000-01ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿವೆ. ಈ ವಿಷಯವನ್ನು ರಾಜ್ಯ ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಟ- ನಟಿಯರಿಗೂ ಪ್ರಶಸ್ತಿ : ಕನ್ನಡ ಚಲನಚಿತ್ರಗಳಿಗೆ ನೀಡುವಂತೆಯೇ 2001 -02ನೇ ಸಾಲಿನಿಂದ ಟಿ.ವಿ. ಧಾರಾವಾಹಿಗಳ ವಿಭಾಗದಲ್ಲೂ ಅತ್ಯುತ್ತಮ ನಟ, ನಟಿ ಹಾಗೂ ನಿರ್ದೇಶಕ, ನಿರ್ಮಾಪಕ ಪ್ರಶಸ್ತಿ ನೀಡಲು ಸರಕಾರ ತೀರ್ಮಾನಿಸಿದೆ ಎಂದು ಬಿ.ಕೆ.ಸಿ. ಹೇಳಿದರು.

ಬರುವ ಅಕ್ಟೋಬರ್‌ 10ರಿಂದ 20ರವರೆಗೆ ಬೆಂಗಳೂರಲ್ಲಿ 10 ದಿನಗಳ ಕಾಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಎಸ್‌.ಎಂ. ಕೃಷ್ಣ ಅವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ 2 ಕೋಟಿ ರುಪಾಯಿ ಮಂಜೂರು ಮಾಡಿದ್ದಾರೆ ಎಂದೂ ಚಂದ್ರಶೇಖರ್‌ ತಿಳಿಸಿದರು.

ಈಬಾರಿಯ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಲ್ಲೇ ನಡೆಸಲು ನಿರ್ಧರಿಸಲಾಗಿದ್ದು, ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದರು. ಪ್ರಥಮ ಹಂತವಾಗಿ ಈ ಬಾರಿ ಅತ್ಯುತ್ತಮ ಧಾರಾವಾಹಿ ಹಾಗೂ ಸಾಕ್ಷ್ಯಚಿತ್ರಕ್ಕೆ ಮಾತ್ರ ಪ್ರಶಸ್ತಿ ಪ್ರಕಟಿಸಲಾಗಿದೆ. ಮುಂದಿನ ವರ್ಷದಿಂದ ದೂರದರ್ಶನ ಹಾಗೂ ಕನ್ನಡದ ಎಲ್ಲ ಟಿ.ವಿ. ಚಾನಲ್‌ಗಳ ಧಾರಾವಾಹಿಗಳಿಗೂ ಇದು ಅನ್ವಯಿಸುತ್ತದೆ ಎಂದರು.

ಜೀೕವಿತಾವಧಿ ಸಾಧನೆ ಪ್ರಶಸ್ತಿ : 2000-01ನೇ ಸಾಲಿನಿಂದ ಕನ್ನಡ ಚಿತ್ರ ರಂಗದಲ್ಲಿ ಜೀವಿತಾವಧಿಯ ವಿಶಿಷ್ಟ ಸಾಧನೆ ಮಾಡಿದವರಿಗೆ 50 ಸಾವಿರ ರುಪಾಯಿಗಳ ಮೊತ್ತದ ವಿಶೇಷ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಎಸ್‌.ಪಿ. ವರದರಾಜ್‌ ಹಾಗೂ ಟಿ.ಎನ್‌. ನರಸಿಂಹನ್‌ ಅವರನ್ನು ಮೊದಲ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದೂ ಸಚಿವರು ತಿಳಿಸಿದರು.

English summary
T.N. Sitarams Mayamruga bags best tv serial award
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada