ದುರಂತದಿಂದ ಪಾರಾದ ಜ್ಯೂ. ಎನ್‌ಟಿಆರ್ ಕುಟುಂಬ!: ದಿಗ್ಭ್ರಾಂತಿ ವ್ಯಕ್ತಪಡಿಸಿದ ನಟ
ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಪುನೀತ್ ರಾಜ್‌ಕುಮಾರ್ ನಟನೆಯ 'ಚಕ್ರವ್ಯೂಹ' ಚಿತ್ರದಲ್ಲೂ ಹಾಡೊಂದನ್ನು ಹಾಡಿದ್ದಾರೆ. ತಾರಕ್ ನಟನೆಯ 'RRR' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. 'ದೇವರ' ಸಿನಿಮಾ ಮೂಲಕ ಮತ್ತೆ ಕನ್ನಡ ಸಿನಿಪ್ರೇಕ್ಷಕರ ಮುಂದೆ ಯಂಗ್ ಟೈಗರ್ ಬರುತ್ತಿದ್ದಾರೆ.
ಈ ವರ್ಷ ಫ್ಯಾಮಿಲಿ ಸಮೇತ ಜಪಾನ್‌ನಲ್ಲಿ ನಟ ಜ್ಯೂ.ಎನ್‌ಟಿಆರ್ ಕ್ರಿಸ್‌ಮಸ್ ಹಾಗೂ ಹೊಸ ವರ್ಷವನ್ನು ಆಚರಿಸಿದ್ದರು. ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ಇಬ್ಬರು ಮಕ್ಕಳಾದ ಅಭಯ್ ಮತ್ತು ಭಾರ್ಗವ್ ಜೊತೆ ಜಪಾನ್ ಪ್ರವಾಸ ಕೈಗೊಂಡಿದ್ದರು. ಜಪಾನ್‌ನಲ್ಲಿ ಕೇವಲ 18 ಗಂಟೆಗಳಲ್ಲಿ 155 ಬಾರಿ ಭೂಮಿ ಕಂಪಿಸಿದೆ. ಈ ಭೂಕಂಪನದಲ್ಲಿ 13 ಮಂದಿ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.

ಜಪಾನ್‌ನ ಇಶಿವಾಕಾದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಈ ಭೂಕಂಪದ ತೀವ್ರತೆಗೆ ಕಟ್ಟಡಗಳು ಉರುಳಿ, ರಸ್ತೆಗಳು ಬಿರುಕುಬಿಟ್ಟಿದೆ. ವಿದ್ಯುತ್ ವ್ಯತ್ಯಯದಿಂದ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲ ಭೂಕಂಪನ ಸಂಭವಿಸಬಹುದು ಎಚ್ಚರ ಎಂದು ಜನರಿಗೆ ತಿಳಿಸಲಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಪ್ರದೇಶಗಳಿಗೆ ರೈಲು, ವಿಮಾನ ಸಂಪರ್ಕ ಕಡಿತಗೊಂಡಿದೆ. ತೆಲುಗು ನಟ ಜ್ಯೂ. ಎನ್‌ಟಿಆರ್ ತಾಯ್ನಾಡಿಗೆ ವಾಪಸ್ ಆಗಲು ವಿಮಾನ ಏರಿದ ಬೆನ್ನಲ್ಲೇ ಭೂಕಂಪ ಸಂಭಂವಿಸಿದೆ. ಈ ಬಗ್ಗೆ ನಟ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ಇಂದು ಮನೆಗೆ ವಾಪಸ್ ಆಗಿದ್ದೇವೆ. ಇದರ ಬೆನ್ನಲ್ಲೇ ಜಪಾನ್ ಭೂಕಂಪ ವಿಚಾರ ಆಘಾತ ತಂದಿದೆ. ಕಳೆದ ವಾರ ಪೂರ್ತಿ ಅಲ್ಲಿಯೇ ಕಳೆದೆವು. ಬಾಧಿತರಿಗೆ ನನ್ನ ಹೃದಯ ಮಿಡಿಯುತ್ತಿದೆ. ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲು ಎಂದು ಆಶಿಸುತ್ತೇನೆ. ಎಲ್ಲರೂ ಧೈರ್ಯವಾಗಿರಿ" ಎಂದು ತಾರಕ್ ಬರೆದುಕೊಂಡಿದ್ದಾರೆ.
ಸದ್ಯ ಜ್ಯೂ. ಎನ್‌ಟಿಆರ್ ಟ್ವೀಟ್ ವೈರಲ್ ಆಗುತ್ತಿದೆ. ತಮ್ಮ ನೆಚ್ಚಿನ ನಟ ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ತಾರಕ್ ಸದ್ಯ ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. 'RRR' ರಿಲೀಸ್ ಆಗಿ ಒಂದು ವರ್ಷದ ಬಳಿಕ ಈ ಸಿನಿಮಾ ಶುರುವಾಗಿತ್ತು. ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದೆ. ಜನವರಿ 8ಕ್ಕೆ ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. 'ದೇವರ' ಚಿತ್ರದಲ್ಲಿ ತಾರಕ್ ಜೋಡಿಯಾಗಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ.
'ದೇವರ' ಬಳಿಕ ಬಾಲಿವುಡ್‌ನ 'ವಾರ್- 2' ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ತಾರಕ್ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾ ಕೂಡ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಯಾನ್ ಮುಖರ್ಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಥ್ರಿಲ್ಲರ್ ಸರಣಿಗೆ ಈ ಸಿನಿಮಾ ಕೂಡ ಸೇರಿಕೊಳ್ಳಲಿದೆ.
'RRR' ಚಿತ್ರದಲ್ಲಿ ಕೋಮುರಂ ಭೀಮ್ ಆಗಿ ಯಂಗ್ ಟೈಗರ್ ಅಭಿನಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಸ್ವತಃ ರಾಮ್‌ಚರಣ್ ಹಾಗೂ ತಾರಕ್ ಕನ್ನಡ ಕಲಿತು ತಮ್ಮ ತಮ್ಮ ಪಾತ್ರಗಳಿಗೆ ಡಬ್ ಮಾಡಿದ್ದರು. ಇನ್ನು ಜ್ಯೂ. ಎನ್‌ಟಿಆರ್ ತಾಯಿ ಕುಂದಾಪುರ ಮೂಲದವರು. ಹಾಗಾಗಿ ತಾರಕ್ ಚೆನ್ನಾಗಿ ಕನ್ನಡ ಕೂಡ ಮಾತನಾಡುತ್ತಾರೆ.


Click it and Unblock the Notifications











