ನಾಗಚೈತನ್ಯಗೆ ಜೋಡಿಯಾದ 'ಪ್ರೇಮಂ' ಬೆಡಗಿ
ಮಲಯಾಳಂನ ಸೂಪರ್ ಹಿಟ್ 'ಪ್ರೇಮಂ' ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರಾಭಿಮಾನಿಗಳ ಮನಗೆದ್ದಿರುವ ನಟಿ ಸಾಯಿ ಪಲ್ಲವಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಸಿನಿ ಇಂಡಸ್ಟ್ರಿಯ ಬಹು ಬೇಡಿಯ ನಟಿಯಾಗಿರುವ ಸಾಯಿ ಪಲ್ಲವಿ ಸದ್ಯ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
'ಫಿದಾ' ಚಿತ್ರದ ಮೂಲಕ ತೆಲುಗು ಪ್ರೇಕ್ಷರ ಮನಸೆಳೆದಿದ್ದ ಸಾಯಿ ಈಗ ನಾಗಚೈತನ್ಯ ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ. ರೋಮ್ಯಾಂಟಿಕ್ ಸಿನಿಮಾದಲ್ಲಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಜೊತೆಯಾಗುತ್ತಿರುವ ವಿಚಾರ ಕೇಳಿ ಈಗಾಗಲೆ ತೆಲುಗು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
ಅಂದ್ಹಾಗೆ ಇವರಿಬ್ಬರ ಚಿತ್ರಕ್ಕೆ ನಿರ್ದೇಶಕ ಶೇಖರ್ ಖಮ್ಮುಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು 'ಫಿದಾ' ಚಿತ್ರದ ಮೂಲಕ ಸಾಯಿ ಪಲ್ಲವಿ ಅವರನ್ನು ತೆಲುಗು ಚಿತ್ರರಂಗಕ್ಕೆ ಕರೆ ತಂದ ನಿರ್ದೇಶಕ ಶೇಖರ್, ಈಗ ಎರಡನೆ ಬಾರಿ ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.

'ಫಿದಾ' ಚಿತ್ರದ ಹಾಗೆ ಮತ್ತೊಂದು ರೋಮ್ಯಾಂಟಿಕ್ ಚಿತ್ರವನ್ನು ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ ಶೇಖರ್. ನಾಗಚೈತನ್ಯ ಸದ್ಯ 'ಮಜಿಲಿ' ಸಕ್ಸಸ್ ನ ಖುಷಿಯಲ್ಲಿ 'ವೆಂಕಿ ಮಾಮ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ದಿಲ್ ರಾಜು ಅವರ ಚಿತ್ರದಲ್ಲೂ ಕೂಡ ನಾಗ್ ಅಭಿನಯಿಸಲಿದ್ದಾರೆ.
ಸಾಯಿ ಪಲ್ಲವಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಸದ್ಯ ಮಲಯಾಳಂ ಚಿತ್ರದಲ್ಲಿ ಅಭಿನಯಿಸುತ್ತಿರುವ ಸಾಯಿ ಇತ್ತ ರಾಣಾ ದಗ್ಗುಬಾಟಿ ಅಭಿನಯದ 'ವಿರಾಟಪರ್ವಂ' ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಇಬ್ಬರು ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ನಾಗ್ ಮತ್ತು ಸಾಯಿ ಪಲ್ಲವಿ ಸಿನಿಮಾ ಈ ವರ್ಷದ ಕೊನೆಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಅಂದ್ಮೇಲೆ 'ಫಿದಾ' ಚಿತ್ರದ ರೀತಿಯಲ್ಲೆ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ನೀಡಲು ಸಜ್ಜಾಗುತ್ತಿದ್ದಾರೆ ಸಾಯಿ ಪಲ್ಲವಿ ಮತ್ತು ನಿರ್ದೇಶಕ ಶೇಖರ್.


Click it and Unblock the Notifications











