ಚಿತ್ರಮಂದಿರದಲ್ಲಿ ನಡೆದ ಘಟನೆಗೆ ಕಣ್ಣೀರಿಟ್ಟ ನಟಿ ಹರಿತೇಜ
ತೆಲುಗು ನಟಿ, ತೆಲುಗು ಬಿಗ್ ಬಾಸ್ ಮಾಜಿ ಸ್ಪರ್ಧಿ ಹರಿತೇಜ ತಮಗಾದ ನೋವನ್ನ ಹಂಚಿಕೊಂಡು ವಿಡಿಯೋ ಮೂಲಕ ಹೊರಹಾಕಿದ್ದಾರೆ. ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದ ವೇಳೆ ಮಹಿಳೆಯೊಬ್ಬರು ತಮ್ಮನ್ನ ಅವಮಾನಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೀರ್ತಿ ಸುರೇಶ್ ಅಭಿನಯದ 'ಮಹಾನಟಿ' ಚಿತ್ರವನ್ನ ನೋಡಲು ನಟಿ ಹರಿತೇಜ ಅವರ ಕುಟುಂಬದ ಜೊತೆ ಹೋಗಿದ್ದರಂತೆ. ಈ ವೇಳೆ ಮಹಿಳೆಯೊಬ್ಬರು ಸಿನಿಮಾದವರ ಬಗ್ಗೆ ಕೀಳಾಗಿ ಮಾತನಾಡಿ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿರುವ ಹರಿತೇಜ ''ನಾನು, ತಂಗಿ, ತಂದೆ ಮತ್ತು ತಾಯಿ ಸಿನಿಮಾ ನೋಡಲು ಹೋಗಿದ್ದಾಗ, ಇಂಟರ್ ವಲ್ ವರೆಗೂ ನಾನು ಮತ್ತು ತಂಗಿ ಅಕ್ಕ-ಪಕ್ಕದಲ್ಲಿ ಕೂತಿದ್ದೇವು. ನಂತರ ಅಮ್ಮನ ಪಕ್ಕ ಕುಳಿತುಕೊಳ್ಳಲು ನಾನು ಹೋದೆ. ಆಗ ನನ್ನ ಜಾಗಕ್ಕೆ ಅಪ್ಪ ಬರಬೇಕು ಅಂತ ಎದ್ದು ಹೋದಾಗ, ಆ ಮಹಿಳೆಯೊಬ್ಬರು ''ನಿಮ್ಮ ತಂದೆ ಪಕ್ಕದಲ್ಲಿ ಕುಳಿತುಕೊಳ್ಳಲು ನನ್ನ ಮಗಳಿಗೆ ಕಷ್ಟವಾಗಬಹುದು. ಮೊದಲಿನಿಂತೆ ಕೂತುಕೊಳ್ಳಿ ಎಂದರು''

ಅದಕ್ಕೆ ನಾನು ''ತಂದೆಯಂತವರು ಪಕ್ಕದಲ್ಲಿ ಕೂತರೇ ಅದರಲ್ಲಿ ತಪ್ಪೇನಿದೆ ಎಂದು ನಾನು ಕೇಳಿದೆ. ಅಷ್ಟರಲ್ಲೇ ನಮ್ಮ ತಂದೆ-ತಂಗಿ ಜಾಗ ಬದಲಿಸಿಕೊಂಡರು. ಈ ಮಧ್ಯೆ ಆ ಮಹಿಳೆ ''ನೀವೆನೂ ಸಿನಿಮಾದವರಮ್ಮ, ಯಾರ ಪಕ್ಕದಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು. ನಮಗೆ ದರಿದ್ರ ಇಲ್ಲ ಎಂದರು. ಆಮೇಲೆ ನಮ್ಮಿಬ್ಬರ ಮಧ್ಯೆ ದೊಡ್ಡ ಮಟ್ಟದ ಚರ್ಚೆಯಾಯಿತು. ಸಿನಿಮಾದವರ ಬಗ್ಗೆ ಅವರು ತುಂಬಾನೇ ಬೈದ್ರು'' ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೀಗೆ, ಸಿನಿಮಾ ಚಿತ್ರಮಂದಿರದಲ್ಲಿ ಕಾದಾಡಿದ ನಟಿ ಹರಿತೇಜ ಈಗ ಸೋಶಿಯಲ್ ಮಿಡಿಯಾದಲ್ಲಿ ಈ ವಿಷ್ಯವನ್ನ ಮುಂದಿಟ್ಟು, ಸಿನಿಮಾದವರು ಅಂದ್ರೆ ಯಾಕೆ ಕೆಟ್ಟ ಭಾವನೆ ಎಂದು ಪ್ರಶ್ನಿಸಿದ್ದಾರೆ. ತೆಲುಗು ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಹರಿತೇಜ, ಸಮಂತಾ ಅಭಿನಯದ 'ಅ ಆ' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಖ್ಯಾತಿಗಳಿಸಿಕೊಂಡಿದ್ದರು. ಆ ನಂತರ ತೆಲುಗು ಬಿಗ್ ಬಾಸ್ ನಲ್ಲಿ ಭಾಗವಹಿಸಿ ಫಿನಾಲೆಗೆ ತಲುಪಿದ್ದರು.


Click it and Unblock the Notifications











