ನಟಿ ಹೇಮಾಗೆ 11 ದಿನ ನ್ಯಾಯಾಂಗ ಬಂಧನ; ನಾನೇನು ತಪ್ಪು ಮಾಡ್ಲಿಲ್ಲ ಎಂದು ಹೈಡ್ರಾಮಾ
ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಜೆಎಂಎಫ್ಸಿ ನ್ಯಾಯಾಲಯ 11 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆನೇಕಲ್ ನ್ಯಾಯಾಲಯದ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸಲ್ಮಾ ಎಎಸ್ ಈ ಆದೇಶ ಹೊರಡಿಸಿದ್ದಾರೆ. ಸೋಮವಾರ ಮಧ್ಯಾಹ್ನ ಸಿಸಿಬಿ ಪೊಲೀಸರು ಹೈದರಾಬಾದ್‌ನಲ್ಲಿ ಹೇಮಾ ಅವರನ್ನುನ್ನು ವಶಕ್ಕೆ ಪಡೆದಿದ್ದರು.
ಎರಡು ಬಾರಿ ನೋಟಿಸ್ ನೀಡಿದರೂ ನಟಿ ಹೇಮಾ ವಿಚಾರಣೆ ಹಾಜರಾಗಿರಲಿಲ್ಲ. ಇನ್ನು ಆಕೆ ಬುರ್ಖಾ ಧರಿಸಿ ವಿಚಾರಣೆಗೆ ಬಂದಿದ್ದರು. ಗುರುತು ಸಿಗದಂತೆ ಬುರ್ಖಾ ಧರಿಸಿ ಕಾಣಿಸಿಕೊಂಡರು. ಪಾರ್ಟಿಗೆ ಡ್ರಗ್ಸ್ ಸಪ್ಲೇ ಮಾಡುತ್ತಿದ್ದ ಪೆಡ್ಲರ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇನ್ನು ನಟಿ ಹೇಮಾ ಮೊದಲಿನಿಂದಲೂ ತಾನು ತಪ್ಪು ಮಾಡಿಲ್ಲ ಎಂದು ಬಿಂಬಿಸಲು ನಾನಾ ಕರಸತ್ತು ಮಾಡಿದ್ದರು. ಮುಖ್ಯವಾಗಿ ತಮ್ಮ ಬಗ್ಗೆ ಸುದ್ದಿ ಆಗದಂತೆ ಏನೇನೊ ಸರ್ಕಸ್ ಮಾಡಿದ್ದರು.

ಪಾರ್ಟಿ ವೇಳೆ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಈ ವೇಳೆ ಹೇಮಾ ಹೆಸರು ಕೇಳಿಬಂದಿತ್ತು. ಆದರೆ ಅಷ್ಟರಲ್ಲೇ ಪೊಲೀಸರ ಕಣ್ಣು ತಪ್ಪಿಸಿ ನಾನು ಬೆಂಗಳೂರಿನ ಯಾವುದೇ ಪಾರ್ಟಿಗೆ ಹೋಗಿರಲಿಲ್ಲ. ನಾನು ಹೈದರಾಬಾದ್‌ನಲ್ಲೇ ಇದ್ದೀನಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಕೆಲವರು ಇದನ್ನು ನಿಜ ಎಂದೇ ನಂಬಿದ್ದರು. ಆದರೆ ಬೆಂಗಳೂರು ಸಿಸಿಬಿ ಪೊಲೀಸರು ಆಕೆ ಪಾರ್ಟಿಯಲ್ಲಿ ಇದ್ದಿದ್ದು ನಿಜ ಎಂದು ಖಚಿತಪಡಿಸಿದ್ದರು.
ಇನ್ನು ಕೋರ್ಟ್‌ನಿಂದ ಹೊರ ಬಂದ ಬಳಿಕ ಕೂಡ ನಟಿ ಹೇಮಾ ನಾನೇನು ತಪ್ಪು ಮಾಡಲಿಲ್ಲ ಎಂದು ವಾದಿಸಿದ್ದಾರೆ. ನಾನೇನು ತಪ್ಪು ಮಾಡಿಲ್ಲ, ನನ್ನನ್ನು ಈಗಲೇ ಕರೆತಂದಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕೂಗಾಡಿದ್ದಾರೆ. ಸದ್ಯ ನಟಿ ಹೇಮಾ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿರುವುದಾಗಿ ಹೇಳಲಾಗುತ್ತಿದೆ. ಕೋರ್ಟ್‌ನಿಂದ ಹೊರ ಬಂದಾಗಲೂ ಹೇಮಾ ಅದೇ ಮಾತು ಪುನರುಚ್ಚರಿಸಿದ್ದಾರೆ.
"ನನ್ನನ್ನು ಸುಮ್ಮನೆ ಕರೆದುಕೊಂಡು ಬಂದಿದ್ದಾರೆ. ನಾನು ಹೈದರಾಬಾದ್‌ನಿಂದಲೇ ಆ ವಿಡಿಯೋ ಪೋಸ್ಟ್ ಮಾಡಿದ್ದು. ಇಲ್ಲಿಂದ ಅಲ್ಲ. ಅದು ಬರ್ತ್‌ಡೇ ಪಾರ್ಟಿ. ಅಲ್ಲಿ ಕೇಕ್ ಕತ್ತರಿಸಿದ ಬಳಿಕ ನಾನು ಹೈದರಾಬಾದ್‌ಗೆ ಹೊರಟುಬಿಟ್ಟೆ. ನಮ್ಮ ಮನೆಯಿಂದಲೇ ನಾನು ಬಿರಿಯಾನಿ ಮಾಡುವ ವೀಡಿಯೋ ಪೋಸ್ಟ್ ಮಾಡಿದ್ದೆ. ನಾನು ಯಾವುದೇ ಡ್ರಗ್ಸ್ ತೆಗೆದುಕೊಂಡಿಲ್ಲ" ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಮೇ 20ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜೆ.ಆರ್. ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜು ಆಗಿರುವುದು ಗೊತ್ತಾಗಿತ್ತು. ಈ ವೇಳೆ ಪಾರ್ಟಿಯಲ್ಲಿ ಭಾಗವಹಿಸಿದ್ದ 100ಕ್ಕೂ ಅಧಿಕ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೇಮಾ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ರಕ್ತ, ಮೂತ್ರ, ಕೂದಲು, ಉಗುರಿನ ಸ್ಯಾಂಪಲ್ ಅನ್ನು ಪಡೆದುಕೊಳ್ಳಲಾಗಿದೆ.
ಹಲವು ತೆಲುಗು ಸಿನಿಮಾಗಳಲ್ಲಿ ಹೇಮಾ ನಟಿಸಿದ್ದಾರೆ. ಜನಪ್ರಿಯ ಹಾಸ್ಯ ನಟಿಯಾಗಿ ಆಕೆ ಗುರ್ತಿಸಿಕೊಂಡಿದ್ದಾರೆ. ಅಂದು ನಡೆದ ಪಾರ್ಟಿಯಲ್ಲಿ ತೆಲುಗು ನಟ-ನಟಿಯರು ಭಾಗಿ ಆಗಿದ್ದಾರೆ ಎನ್ನಲಾಗಿತ್ತು. ಅದರಲ್ಲಿ ಹೇಮಾ ಹೆಸರು ಸದ್ದು ಮಾಡಿತ್ತು. ಆದರೆ ಆಕೆ ಮಾತ್ರ ನಾನು ಅಲ್ಲಿ ಇರಲಿಲ್ಲ, ಡ್ರಗ್ಸ್ ತೆಗೆದುಕೊಳ್ಳಲಿಲ್ಲ ಎಂದು ವಾದಿಸುತ್ತಾ ಬರುತ್ತಿದ್ದಾರೆ. ಸದ್ಯ ಜೂನ್ 14ರ ವರೆಗೆ ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪಾರ್ಟಿಯಲ್ಲಿ ಪಾಲ್ಗೊಂಡು ಡ್ರಗ್ಸ್ ಸೇವನೆ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು 20ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು. ನಟಿ ಹೇಮಾ, ಆಶಿ ರಾಯ್ ಹೆಸರು ಅದರಲ್ಲಿ ಇತ್ತು. ಬಳಿಕ ವಿಚಾರಣೆಗೆ ಹಾಜಾರಾಗದ ವ್ಯಕ್ತಿಗಳ ವಿರುದ್ದ ಅರೆಸ್ಟ್ ವಾರಂಟ್ ಪಡೆದು ಬಂಧನ ಮಾಡಲು ಅಧಿಕಾರಿಗಳ ತೀರ್ಮಾನಿಸಿದ್ದರು. ಪಾರ್ಟಿಗೆ ಡ್ರಗ್ಸ್ ಸಪ್ಲೆ ಮಾಡಿದ್ದ ಪೆಡ್ಲರ್ ಡಿಜೆ ಹಳ್ಳಿ ನಿವಾಸಿ ಇಮಾರ್ ಶರೀಫ್ ಕೂಡ ಪೊಲೀಸರ ವಶದಲ್ಲಿದ್ದಾನೆ. ಸನ್ ಸೆಟ್ ಟು ಸನ್ ರೈಸ್ ಹೆಸರಿನಲ್ಲಿ ಭರ್ಜರಿ ಪಾರ್ಟಿ ನಡೆದಿತ್ತು.


Click it and Unblock the Notifications











