ರೇವ್ ಪಾರ್ಟಿಗೆ ಹೋಗಿರಲಿಲ್ಲ ಎಂದು ಕಳ್ಳಾಟ ಆಡಿದ್ದ ತೆಲುಗು ನಟಿ ಹೇಮಾ ಬಂಧನ
ಬೆಂಗಳೂರಿನಲ್ಲಿ ರೇವ್ ಪಾರ್ಟಿಯಲ್ಲಿ ಭಾಗಿ ಆಗಿದ್ದ ಪ್ರಕರಣದಲ್ಲಿ ತೆಲುಗು ಪೋಷಕ ನಟಿ ಹೇಮಾ ಬಂಧನವಾಗಿದೆ. ಈ ಪ್ರಕರಣದಲ್ಲಿ ಟಾಲಿವುಡ್ ನಟಿ ಹೇಮಾ ಅವರನ್ನು ಬೆಂಗಳೂರು ಪೊಲೀಸರು ಹೈದರಾಬಾದ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಸೋಮವಾರ ನಾಲ್ಕು ಗಂಟೆಗೆ ವೇಳೆಗೆ ಅಲ್ಲಿಗೆ ತೆರಳಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ನಟಿ ಹೇಮಾ ಅವರನ್ನು ಆನೇಕಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಮೇ 20 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ. ಆರ್ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಹೇಮಾ ಭಾಗವಹಿಸಿದ್ದು ಗೊತ್ತೇ ಇದೆ. ಅಂದು ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ರೇವ್ ಪಾರ್ಟಿ ಆಯೋಜನೆ ಆಗಿತ್ತು. ಇನ್ನು ಪಾರ್ಟಿಯಲ್ಲಿ ತೆಲುಗು ನಟ-ನಟಿಯರು ಭಾಗಿ ಆಗಿದ್ದರು ಎನ್ನಲಾಗಿತ್ತು. 100 ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ನಟಿ ಹೇಮಾ ನಾನು ಯಾವುದೇ ರೇವ್ ಪಾರ್ಟಿಯಲ್ಲಿ ಭಾಗಿ ಆಗಿರಲಿಲ್ಲ ಎಂದು ವಾದಿಸಿದ್ದರು. ಪ್ರಕರಣ ಬಯಲಾಗುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೋ ಹರಿಬಿಟ್ಟಿದ್ದರು. "ಅಯ್ಯೋ ನಾನು ಯಾವುದೇ ರೇವ್ ಪಾರ್ಟಿಯಲ್ಲಿ ಭಾಗಿ ಆಗಿಲ್ಲ. ಅದೆಲ್ಲಾ ಸುಳ್ಳು ಸುದ್ದಿ. ನಾನು ಬೇರೆ ಕಡೆ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ" ಎಂದಿದ್ದರು. ಆದರೆ ಬಳಿಕ ಬೆಂಗಳೂರು ಸಿಸಿಬಿ ಪೊಲೀಸರು ನಟಿ ಹೇಮಾ ಪಾರ್ಟಿಯಲ್ಲಿ ಇದ್ದಿದ್ದು ನಿಜ ಯಾಮಾರಿಸಿ, ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದರು. ನಂತರ ಪಾರ್ಟಿಗೆ ಹಾಜರಾಗಿದ್ದ ಎಲ್ಲರಿಗೂ ಡ್ರಗ್ ಟೆಸ್ಟ್ ನಡೆಸಲಾಗಿತ್ತು. ಇದರಲ್ಲಿ ಹೇಮಾ ಸೇರಿದಂತೆ 86 ಮಂದಿಗೆ ಪಾಸಿಟಿವ್ ಬಂದಿದೆ ಎಂದು ವರದಿ ಆಗಿತ್ತು.
ಪೊಲೀಸರು ಪಾಸಿಟಿವ್ ಬಂದವರಿಗೆಲ್ಲ ನೋಟಿಸ್ ನೀಡಿ ತನಿಖೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. ಆ ವೇಳೆ ನನಗೆ ವೈರಲ್ ಫೀವರ್ ಇದೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಕೆಲವು ದಿನಗಳ ಕಾಲಾವಕಾಶ ಕೇಳಿದ್ದರು. ಸಮಯಾವಕಾಶ ನೀಡಿದರೂ ತನಿಖೆಗೆ ಬಾರದ ಕಾರಣ ಬೆಂಗಳೂರಿನಿಂದ ಪೊಲೀಸರು ತೆರಳಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆತಂದಿದ್ದಾರೆ ಎನ್ನಲಾಗ್ತಿದೆ.

ಅಂದು ಸನ್ ಸೆಟ್ ಟು ಸನ್‌ರೈಸ್ ಪಾರ್ಟಿ ಹೆಸರಿನಲ್ಲಿ ಪಾರ್ಟಿ ಆಯೋಜನೆಗೊಂಡಿತ್ತು. ತೆಲುಗಿನ ಕೆಲ ನಟ, ನಟಿಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಮಾಹಿತಿ ತಿಳಿದ ಕೂಡಲೇ ಪೊಲೀಸರು ರೆಸಾರ್ಟ್ ಮೇಲೆ ದಾಳಿ ನಡೆಸಿದ್ದರು. ಕೆಲವೊತ್ತು ಬಾಗಿಲು ತೆಗೆಯದೇ ಒಳಗಿದ್ದವರು ಸಾಕ್ಷಿ ನಾಶಕ್ಕೆ ಯತ್ನಿಸಿದ್ದರು. ಮಾದಕ ವಸ್ತುಗಳನ್ನು ನಾಶ ಪಡಿಸಲು ಮುಂದಾಗಿದ್ದರು. ಬಳಿಕ ಪೊಲೀಸರು ಬಲವಂತವಾಗಿ ಬಾಗಿಲು ತೆಗೆಸಿ ಒಳಗೆ ಹೋಗಿದ್ದರು.
ಪಾರ್ಟಿಯಲ್ಲಿ ಒಟ್ಟು 30 ಜನ ಯುವತಿಯರು 71 ಮಂದಿ ಯುವಕರು, ಸೇರಿ 101 ಭಾಗಿ ಆಗಿದ್ದ ಮಾಹಿತಿ ಲಭ್ಯವಾಗಿತ್ತು. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದರು. ಪಾರ್ಟಿ ನಡೆದ ಸ್ಥಳದಲ್ಲಿ ಎಂಡಿಎಂಎ ಮಾತ್ರೆಗಳು ಹಾಗೂ ಕೊಕೇನ್ ಸಿಕ್ಕಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು ರೆಸಾರ್ಟ್‌ನಲ್ಲಿ ನಿಲ್ಲಿಸಿದ್ದ ಕಾರ್‌ವೊಂದರಲ್ಲಿ ಆಂಧ್ರ ಶಾಸಕ ಕಾಕನಿ ಗೋವರ್ಧನ ರೆಡ್ಡಿ ಹೆಸರಿನ ಪಾಸ್ ಸಿಕ್ಕಿದ್ದು ಸುದ್ದಿ ಆಗಿತ್ತು. ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ನಟಿ ಹೇಮಾ ನಟಿಸಿದ್ದಾರೆ. ಬಹುತೇಕ ಆಕೆ ಹಾಸ್ಯ ಪಾತ್ರಗಳಿಗೆ ಹೆಚ್ಚು ಬಣ್ಣ ಹಚ್ಚಿದ್ದಾರೆ.


Click it and Unblock the Notifications











