ಮತದಾನದ ಹಕ್ಕು ಚಲಾಯಿಸಿದ ತೆಲುಗು ಸಿನಿತಾರೆಯರು
17ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ(ಏಪ್ರಿಲ್ 11) ದಿಂದ ಆರಂಭವಾಗಿದೆ. ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 20 ರಾಜ್ಯಗಳಲ್ಲಿ ಮತದಾನ ಪ್ರಾರಂಭವಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ.
ದಕ್ಷಿಣ ಭಾರತದಲ್ಲಿ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ತೆಲುಗು ಚಿತ್ರ ನಟರು ಮತದಾನ ಮಾಡಿದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ LIVE:ಮರುಮತದಾನಕ್ಕೆ ಚಂದ್ರಬಾಬು ನಾಯ್ಡು ಆಗ್ರಹ
ಅಷ್ಟೆಯಲ್ಲ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಚಲಾಯಿಸಿ ಎಂದು ತೆಲುಗು ನಟರು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್, ಜ್ಯೂನಿಯರ್ ಎನ್ ಟಿ ಅರ್, ಬಾಲಕೃಷ್ಣ ಸೇರಿದಂತೆ ಬಹುತೇಕ ನಟರು ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಮುಂದೆ ಓದಿ..

ಬೆಳಗ್ಗೆಯೇ ಮತದಾನ ಮಾಡಿದ ಚಿರಂಜೀವಿ ಕುಟುಂಬ
ತೆಲುಗು ನಟ ಮೆಗಾ ಸ್ಟಾರ್ ಚಿರಂಜೀವಿ ಇಂದು(ಏಪ್ರಿಲ್ 11) ಬೆಳಗ್ಗೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಚಿರಂಜೀವಿ ಜೊತೆಗೆ ಇಡೀ ಕುಟುಂಬ ಮತದಾನ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಪತ್ನಿ ಮತ್ತು ಮಗಳು, ಮಗ ಸೇರಿದಂತೆ ಪ್ರತಿಯೊಬ್ಬರು ಮತದಾನ ಮಾಡಿದ್ದಾರೆ.

ವೋಟ್ ಮಾಡಿದ ರಾಮ್ ಚರಣ್ ದಂಪತಿ
ಎಡಗೈ ತೋರು ಬೆರಳಿಗೆ ಶಾಯಿ ಹಾಕಿಸಿಕೊಳ್ಳುವ ಮೂಲಕ ತಮ್ಮ ಹಕ್ಕು ಚಲಾಯಿಸಿದ ರಾಮ್ ಚರಣ್ ಮತ್ತು ಪತ್ನಿ ಉಪಾಸನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಲ್ಲದೆ "ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರು ಮತ ಚಲಾಯಿಸಿ" ಎಂದು ಮನವಿ ಮಾಡಿದ್ದಾರೆ.
ಮತದಾನ ಮಾಡಿದ ಸ್ಟೈಲಿಶ್ ಅಲ್ಲು ಅರ್ಜುನ್
ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ ಚಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಮುಂದಿನ 1825 ದಿನಗಳು ಹೇಗಿರಬೇಕೆಂದು ನಿರ್ಧರಿಸುವ ಒಂದು ದಿನವಿದು ಹಾಗಾಗಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಿ" ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಹಕ್ಕು ಚಲಾಯಿಸಿದ ಜ್ಯೂನಿಯರ್ ಎನ್ ಟಿ ಆರ್ ದಂಪತಿ
ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಜ್ಯೂನಿಯರ್ ಎನ್ ಟಿ ಆರ್ ದಂಪತಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪತ್ನಿ ಪ್ರಣತಿ ಜೊತೆ ಶಾಯಿ ಹಾಕಿದ ಬೆರಳುಗಳನ್ನು ಕ್ಯಾಪ್ಚರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ " ನಮ್ಮ ಬೆರಳಿಗೆ ಶಾಯಿ ಬಿದ್ದಿದೆ ನೀವು ಕೂಡ ಮತದಾನ ಮಾಡಿ" ಎಂದು ಮನವಿ ಮಾಡಿದ್ದಾರೆ.

ಮತದಾನ ಮಾಡಿದ ಹಿರಿಯ ನಟ ಬಾಲಕೃಷ್ಣ
ತೆಲುಗು ನಟ ಬಾಲಕೃಷ್ಣ ಸಹ ಬೆಳಗ್ಗೆಯೇ ಮತದಾನ ಮಾಡುವ ಮೂಲಕ ಅಭಿಮಾನಿಗಳಿಗೂ ಮತ ಚಲಾಯಿಸಿ ಎಂದು ಸಂದೇಶ ನೀಡಿದ್ದಾರೆ. ಪತ್ನಿ ಜೊತೆ ಆಗಮಿಸಿ ಮತದಾನ ಮಾಡಿದ ಬಾಲಕೃಷ್ಣ ಶಾಯಿ ಹಾಕಿದ ಬೆರಳನ್ನು ಕ್ಯಾಮೆರಾಗೆ ತೋರಿಸಿ ಸಂತಸ ಪಟ್ಟಿದ್ದಾರೆ. ಅಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನ ಸಭಾ ಚುನಾವಣೆಯು ನಡೆಯುತ್ತಿದ್ದು, ಹಿಂದೂಪುರ ವಿಧಾನ ಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಬಾಲಕೃಷ್ಣ ಸ್ಪರ್ಧಿಸಿದ್ದಾರೆ.

ವೋಟ್ ಮಾಡಿದ ರಾಜಮೌಳಿ ತಂಡ
'ಬಾಹುಬಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ರಾಜಮೌಳಿ ಮತದಾನ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಮತದಾನ ಮಾಡಿರುವ ಫೋಟೋ ಹಾಕುವ ಮೂಲಕ ವೋಟ್ ಮಾಡುವ ಅಗತ್ಯವನ್ನು ತಿಳಿಸಿದ್ದಾರೆ. ಎಲ್ಲರೂ ವೋಟ್ ಮಾಡಬೇಕು ಎಂದು ತಮ್ಮ ಚಿತ್ರತಂಡದ ಎಲ್ಲರಿಗೂ ರಜೆ ನೀಡಿ ಮತದಾನ ಮಾಡಲು ಕಳುಹಿಸಿದ್ದಾರೆ.


Click it and Unblock the Notifications











