Yash: ಯಶ್ ಮೇಲೆ ತೆಲುಗು ಮಾಧ್ಯಮಗಳ ಕಿಡಿ, ಅಲ್ಲು ಅರ್ಜುನ್ ಪರವಾಗಿ ಪ್ರತೀಕಾರನಾ?
ನಟ ಯಶ್ ಮತ್ತು ಕೆಜಿಎಫ್ ಚಿತ್ರತಂಡ ಸದ್ಯ, 'ಕೆಜಿಎಫ್ 2' ಚಿತ್ರದ ಪ್ರಚಾರದಲ್ಲಿ ಸಿಕ್ಕಾ ಪಟ್ಟೆ ಬ್ಯುಸಿಯಾಗಿದೆ. ಭಾರತದಾದ್ಯಂತ ಸುತ್ತಿ ಚಿತ್ರದ ಪ್ರಚಾರ ಮಾಡುತ್ತಾ ಇದೆ 'ಕೆಜಿಎಫ್ 2' ಚಿತ್ರತಂಡ. ದೆಹಲಿ, ಮುಂಬೈ, ಕೊಚ್ಚಿ, ಕರ್ನಾಟಕ ಹೀಗೆ ಹತ್ತು ಹಲವು ಕಡೆಗಳಲ್ಲಿ ಚಿತ್ರದ ಪ್ರಚಾರ ಮಾಡುತ್ತಿದೆ 'ಕೆಜಿಎಫ್ 2' ತಂಡ. ಈಗ ಹೈದ್ರಾಬಾದ್‌ನಲ್ಲೂ ಕೂಡ ಚಿತ್ರ ಸುದ್ದಿಗೋಷ್ಟಿ ನಡೆದಿದೆ.
ಹೈದ್ರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಟಿ ಹೆಚ್ಚಾಗಿ ಗಮನ ಸೆಳೆಯುತ್ತಿದೆ. ಈ ಸುದ್ದಿಗೋಷ್ಟಿಯಲ್ಲಿ ಯಶ್‌ಗೆ ಎದುರಾದ ಪ್ರಶ್ನೆ ಒಂದು ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಇದೇನು ಹೊಸ ಪ್ರಶ್ನೆ ಅಲ್ಲ ಬಿಡಿ. ಈ ಹಿಂದೆ ತೆಲುಗು ಸ್ಟಾರ್ ನಟನಿಗೆ ಕನ್ನಡದ ಮಾಧ್ಯಮಗಳು ಕೇಳಿದ್ದ ಪ್ರಶ್ನೆಯೇ ಈಗ ತೆಲುಗು ಮಾಧ್ಯಮಗಳಿಂದ ಯಶ್‌ಗೆ ಎದುರಾಗಿದೆ.
ನಿಮಗೆ ನೆನಪಿದೆಯಾ 'ಪುಷ್ಪ' ಚಿತ್ರದ ಪ್ರಚಾರಕ್ಕಾಗಿ ನಟ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಿದ್ದರಲ್ಲ. ಆಗ ಕನ್ನಡ ಮಾಧ್ಯಮಗಳು ಅಲ್ಲು ಅರ್ಜುನ್ ನಡೆಗೆ ಬೇಸರಗೊಂಡು ಪ್ರಶ್ನೆ ಮಾಡಿದ್ದವು. ಈಗ ಅದೇ ಪ್ರಶ್ನೆ ಅಲ್ಲಿ ತೆಲುಗು ಮಾಧ್ಯಮಗಳಿಂದ ಯಶ್‌ಗೆ ಎದುರಾಗಿದೆ.
ವಿಳಂಬದ ಬಗ್ಗೆ ಯಶ್‌ಗೆ ಪ್ರಶ್ನೆ!
ಹೈದ್ರಾಬಾದ್‌ನಲ್ಲಿ ಕೆಜಿಎಫ್ 2 ಚಿತ್ರದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಆದರೆ ಯಶ್ ಮತ್ತು ತಂಡ ಈ ಕಾರ್ಯಕ್ರಮಕ್ಕೆ ಒಂದು ಗಂಟೆ ತಡವಾಗಿ ಹೋಗಿದೆ. ಹಾಗಾಗಿ ಅಲ್ಲಿ ಹಾಜರಿದ್ದ ಜರ್ನಲಿಸ್ಟ್ ಒಬ್ಬರು "ಸುದ್ದಿಗೋಷ್ಟಿಗೆ ಒಂದು ಗಂಟೆ ತಡವಾಗಿ ಬಂದಿದ್ದೀರಿ. ಎಲ್ಲರೂ ಗಂಟೆಯಿಂದ ಕಾಯುತ್ತಾ ಇದ್ದೇವೆ" ಎಂದು ಕೇಳುತ್ತಾರೆ. ಈ ಬಗ್ಗೆ ಕ್ಷಮೆ ಕೇಳಿದ ಯಶ್ ಯಾಕೆ ತಡವಾಯ್ತು ಎನ್ನವ ಬಗ್ಗೆ ಉತ್ತರಿಸುತ್ತಾರೆ.

ಪ್ರೈವೆಟ್ ಫ್ಲೈಟ್ ಲೇಟ್ ಆಯ್ತು: ನಟ ಯಶ್!
ತೆಲುಗು ಮಾಧ್ಯಮಗಳ ಪ್ರಶ್ನೆಗೆ ಉತ್ತರಿದ ನಟ ಯಶ್, ತೆಲುಗಿನಲ್ಲೇ ಮಾತನಾಡಿ "ದಯವಿಟ್ಟು ಕ್ಷಮಿಸಿ, ನನಗೆ ಈ ಬಗ್ಗೆ ಗೊತ್ತಿರಲಿಲ್ಲ, ಆಯೋಜಕರು ಹೇಳಿದ ಸಮಯಕ್ಕೆ, ಜಾಗಕ್ಕೆ ಹೋಗುತ್ತಾ ಇದ್ದೇನೆ. ನನಗೆ ಸಮಯದ ಬೆಲೆ ಗೊತ್ತು, ನಮ್ಮಿಂದ 10 ನಿಮಿಷ ತಡವಾಗಿದ್ದರು ಅದು ನಮ್ಮದೇ ತಪ್ಪು, ಪ್ರೈವೆಟ್ ಫ್ಲೈಟ್‌ನಲ್ಲಿ ಬಂದಿದ್ದು, ಹಾಗಾಗಿ ಟೇಕ್ ಆಫ್ ಆಗಲು ಸಮಯ ತೆಗೆದುಕೊಳ್ಳುತ್ತದೆ" ಎಂದು ಯಶ್ ಉತ್ತರಿಸಿದ್ದಾರೆ.

ಇಲ್ಲಿ ಅಲ್ಲು ಅರ್ಜುನ್, ಅಲ್ಲಿ ಯಶ್!
ಹೈದ್ರಾಬಾದ್‌ನಲ್ಲಿ ಯಶ್‌ಗೆ ಎದುರಾದ ಪ್ರಶ್ನೆ ಮತ್ತು ಯಶ್ ಕೊಟ್ಟ ಉತ್ತರ ಎರಡೂ ಸೇಮ್ ಟು ಸೇಮ್. ಈ ಹಿಂದೆ ಬೆಂಗಳೂರಿನಲ್ಲಿ ಆಯೋಜಿಸಿದ್ದ 'ಪುಷ್ಪ' ಚಿತ್ರದ ಸುದ್ದಿಗೋಷ್ಟಿಗೆ ಅಲ್ಲು ಅರ್ಜುನ್ ಮತ್ತು ತಂಡ 2 ಗಂಟೆ ತಡವಾಗಿ ಹಾಜರಾಗಿತ್ತು. ಆಗ ಮಾಧ್ಯಗಳಿಂದ ಈ ಬಗ್ಗೆ ಅಲ್ಲು ಅರ್ಜುನ್‌ಗೆ ಪ್ರಶ್ನೆ ಎದುರಾಗಿತ್ತು. ಆಗ ಅಲ್ಲು ಅರ್ಜುನ್ "ದಯವಿಟ್ಟು ಕ್ಷಮಿಸಿ, ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಖಾಸಗಿ ವಿಮಾನದಲ್ಲಿ ಬಂದೆ. ಹವಾಮಾನದ ಸಮಸ್ಯೆಯಿಂದ ವಿಮಾನ ಟೇಕ್ ಆಫ್ ಆಗಲಿಲ್ಲ. ಹಾಗಾಗಿ ಸ್ವಲ್ಪ ಲೇಟ್ ಆಗುತ್ತದೆ. ನನಗೆ ಯಾರಿಗೂ ನೋವು ಮಾಡಲು ಇಷ್ಟ ಇಲ್ಲ. ಹಾಗಾಗಿ ಕ್ಷಮೆ ಕೇಳುತ್ತೇನೆ" ಎಂದಿದ್ದರು.

ಇದು ಪ್ರತೀಕಾರಾನಾ: ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ!
ಎರಡೂ ಸುದ್ದಿಗೋಷ್ಟಿಯಲ್ಲಿ ನಡೆದ ಘಟನೆ ಒಂದೇ ರೀತಿ ಇದೆ. ಪ್ರಶ್ನೆ ಮತ್ತು ಉತ್ತರ ಕೂಡ ಒಂದೇ ರೀತಿ ಇದೆ. ಕರ್ನಾಟಕದಲ್ಲಿ ಈ ಘಟನೆ ಮೊದಲು ನಡೆದ ಕಾರಣ, ತೆಲುಗಿನ ಮಾಧ್ಯಮಗಳು ಅಲ್ಲು ಅರ್ಜುನ್ ಪರವಾಗಿ ಪ್ರತೀಕಾರ ತೆಗೆದುಕೊಂಡರಾ? ಎನ್ನುವ ಬಗ್ಗೆ ಚರ್ಚೆ ನಡೆಯುತ್ತಾ ಇದೆ. ಆದರೆ ಇದು ಕಾಕತಾಳಿವೂ ಆಗಿರಬಹುದು. ಒಟ್ಟಾರೆ ಈ ವಿಚಾರ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


Click it and Unblock the Notifications











