ದೇವಸ್ಥಾನದಲ್ಲಿ ದರ್ಶನ್ ಫೋಟೊಗೆ ಪೂಜೆ ಮಾಡಿ ಅರ್ಚಕರ ಎಡವಟ್ಟು; ಕೆಲಸದಿಂದ ಅಮಾನತು
ಬಳ್ಳಾರಿ: ನಟ ದರ್ಶನ್ ಬೇಗ ಜೈಲಿನಿಂದ ಹೊರ ಬರಲಿ ಎಂದು ಕುಟುಂಬ ಸದಸ್ಯರು, ಅಭಿಮಾನಿಗಳು ದೇವರ ಮೊರೆ ಹೋಗುತ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಈಗಾಗಲೇ ದರ್ಶನ್ ಜೈಲು ಸೇರಿ ಎರಡು ತಿಂಗಳಾಗುತ್ತಾ ಬಂತು. ಆಗಸ್ಟ್ 14ರವರೆಗೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ತನಿಖೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಂಡಿಮಾಕಾಳಮ್ಮ, ಬನಶಂಕರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇತ್ತ ಅಭಿಮಾನಿಗಳು ಕೂಡ ರಾಜ್ಯದ ಹಲವೆಡೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಅರ್ಚಕರೊಬ್ಬರು ದೇವರ ಬಳಿ ನಟ ದರ್ಶನ್ ಫೋಟೊ ಇಟ್ಟು ಪೂಜೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಳ್ಳಾರಿಯ ಕುರುಗೋಡಿನ ಬಸವೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆಸಿದೆ. ಬಸವೇಶ್ವರನ ಮೂರ್ತಿಗೆ ತಾಗಿಸಿ ದರ್ಶನ್ ಫೋಟೋ ಇಟ್ಟು ಅರ್ಚಕ ಮಲ್ಲಿ ಎಂಬುವವರು ಪೂಜೆ ಸಲ್ಲಿಸಿದ್ದಾರೆ. ಹಾಗಾಗಿ ಅವರನ್ನು ಧಾರ್ಮಿಕ ದತ್ತಿ ಇಲಾಖೆ ಅಮಾನತು ಮಾಡಿದೆ. ಮಲ್ಲಿ ದರ್ಶನ್ ಫೋಟೊಗೆ ಮಂಗಳಾರತಿ ಮಾಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.
ದೇಗುಲದ ಸಂಪ್ರದಾಯಕ್ಕೆ ವಿರುದ್ಧವಾಗಿ ಅರ್ಚಕರು ಈ ರೀತಿ ಮಾಡಿದ್ದಾರೆ ಎಂದು ಅರ್ಚಕನನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ. ಈ ಸಂಬಂಧ ಅರ್ಚಕ ಮಲ್ಲಿ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ವಿಚಾರಣೆಗೆ ಮುಂದಾಗಿದ್ದಾರೆ. ಅರ್ಚಕರ ವಿರುದ್ಧ ದೇವಾಲಯದ ಸಂಪ್ರದಾಯಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಇದೆ.
ಕೆಲ ದಿನಗಳ ಹಿಂದೆ ಮಹಿಳೆ ಅಭಿಮಾನಿಗಳು ನಟ ದರ್ಶನ್ ಫೋಟೊ ಹಿಡಿದು ಮೈಸೂರು ಚಾಮುಂಡಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆಗ ಪೊಲೀಸರ ಜೊತೆ ದರ್ಶನ್ ಅಭಿಮಾನಿಗಳು ವಾಗ್ವಾದಕ್ಕೆ ಇಳಿದಿದ್ದರು. ಕೊನೆಗೆ ಬೇರೆ ವಿಧಿಯಿಲ್ಲದೇ ಅಭಿಮಾನಿಗಳು ಹೊರಬಂದಿದ್ದರು.
ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಪ್ತರ ಜೊತೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ನವ ಚಂಡಿಕಾ ಹೋಮದಲ್ಲಿ ಭಾಗವಹಿಸಿದ್ದರು. ಅರ್ಚಕರಾದ ನರಸಿಂಹ ಅಡಿಗರವರ ನೇತೃತ್ವದಲ್ಲಿ ಚಂಡಿಕಾಯಾಗ ನಡೆದಿತ್ತು. ಕಳೆದ ವಾರ ದರ್ಶನ್ ಸಹೋದರ ದಿನಕರ್, ನಟ ಚಿಕ್ಕಣ್ಣ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ಜಾಮೀನು ಅರ್ಜಿಗೆ ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಗಂಭೀರ ಪ್ರಕರಣ ಆಗಿರುವುದರಿಂದ ಅಷ್ಟು ಸುಲಭವಾಗಿ ಜಾಮೀನು ಸಿಗಲ್ಲ ಎನ್ನುವ ವಾದವೂ ಇದೆ.


Click it and Unblock the Notifications











