»   » ದಿ ಗಿಫ್ಟ್‌ ಆಫ್‌ ಗಾಡ್‌ ಮದರ್‌ ಮರುಹುಟ್ಟು!

ದಿ ಗಿಫ್ಟ್‌ ಆಫ್‌ ಗಾಡ್‌ ಮದರ್‌ ಮರುಹುಟ್ಟು!

By: *ಆಲ್ಬರ್ಟ್‌ ಎಡ್ವಿನ್‌
Subscribe to Filmibeat Kannada

ಮಮತಾ ಮಯಿ ಮದರ್‌ ತೆರೆಸಾ ಮತ್ತೆ ಜೀವಗೊಳ್ಳಲಿದ್ದಾರೆ ! ಮಲೆಯಾಳಿ ಕಿರುಚಿತ್ರಗಳ ಮೂಲಕ ಹೊಸತುಗಳನ್ನು ಕೊಡುತ್ತಾ ಶಹಭಾಸ್‌ ಅನ್ನಿಸಿಕೊಂಡಿರುವ ಶಾಜಿ ಥೈಕ್ಕಡನ್‌ ತ್ಯಾಗಮೂರ್ತಿಗೆ ಜೀವ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ. ಅದ್ಹೇಗೆ ಅಂದಿರಾ ? ಶಾಜಿ, ಮದರ್‌ ತೆರೆಸಾ ಜೀವನ ವೃತ್ತಾಂತ ಕುರಿತ ಸಿನಿಮಾ ಚಿತ್ರಿಸುತ್ತಿದ್ದಾರೆ. ಈ ವರ್ಷಾಂತ್ಯದ ಹೊತ್ತಿಗೆ ಮದರ್‌ ತೆರೆ ಮೇಲೆ ಮೂಡಲಿದ್ದಾರೆ. ಚಿತ್ರದ ಹೆಸರು ದಿ ಗಿಫ್ಟ್‌ ಆಫ್‌ ಗಾಡ್‌.

ಕಿರುಚಿತ್ರಗಳ ಮೂಲಕ ಸೃಜನಶೀಲತೆ ಮೆರೆಯುತ್ತಾ ಬಂದಿರುವ ಶಾಜಿ ಕೇರಳದಲ್ಲಿ ಮನೆಮಾತು. ಭಾರತರತ್ನ ಪ್ರಶಸ್ತಿಗೆ ಮದರ್‌ ಭಾಜನರಾಗಿದ್ದ ಕಾರಣ ಅವರು ಕೇಂದ್ರ ಸರ್ಕಾರದ ಅನುಮತಿ ಪಡೆಯಲೇ ಬೇಕಿತ್ತು . ಪಶ್ಚಿಮದ ಕೆಲ ಚಿತ್ರ ನಿರ್ಮಾಪಕರೂ ಮದರ್‌ ತೆರೆಸಾ ಜೀವನ ಆಧಾರಿತ ಚಿತ್ರ ನಿರ್ಮಿಸುವ ಯೋಜನೆಗೆ ಕೈ ಹಾಕಿದ್ದರು. ಆದರೆ ಅವರ್ಯಾರಿಗೂ ಸರ್ಕಾರದ ಅನುಮತಿ ದೊರೆಯಲಿಲ್ಲ. ಈ ಮಹತ್ತರ ಯೋಜನೆಗೆ ಕೇಂದ್ರ ಸರ್ಕಾರ ಹ್ಞೂಂ ಅಂದಿರುವುದೇ ಶಾಜಿ ಹುಟ್ಟಸಿರುವ ಭರವಸೆಗೆ ಸಾಕ್ಷಿ.

ಅಧ್ಯಾತ್ಮದ ಅನ್ವೇಷಣೆಯಲ್ಲಿ : ಜಿಗಿದಾಡುವ ಅಲ್ಬೇನಿಯಾದ ಹಸುಳೆ ಎಗ್ನಸ್‌ ಮದರ್‌ ಆಗುವುದು. ಲಕ್ಷಾಂತರ ಕುಷ್ಟರೋಗಿಗಳ ಕಣ್ಣೊರೆಸುವ ಜೀವಸೆಲೆಯಾಗುವುದು. ನಿಸ್ಪೃಹತೆಯಿಂದ ಜಗನ್ಮಾತೆಯಾಗುವುದು. ಕೊನೆಗೆ 87ರ ಹರೆಯದಲ್ಲಿ ಇಹಲೋಕ ತೊರೆಯುವುದು- ಇದು ಸಂಕ್ಷಿಪ್ತ ಚಿತ್ರಕಥೆ. ಶಾಜಿ ಹೇಳುವಂತೆ ಒಬ್ಬ ಸಾಮಾನ್ಯ ಬಾಲಕಿಗೆ ಆಧ್ಯಾತ್ಮ ಸಾಕ್ಷಾತ್ಕಾರವಾದದ್ದಾದರೂ ಹೇಗೆ ಎಂಬುದರ ಸೂಕ್ಷ್ಮ ಎಳೆಗಳನ್ನು ಚಿತ್ರ ಬಿಂಬಿಸಲಿದೆ.

ಭಾರತದಲ್ಲೇ ಶೂಟಿಂಗ್‌ : ಮದರ್‌ ಬಾಲ್ಯ ಕಳೆದದ್ದು ಅಲ್ಬೇನಿಯಾದಲ್ಲೆ. ಆದರೆ ಶಾಜಿ ಚಿತ್ರೀಕರಣಕ್ಕೆ ಅಲ್ಬೇನಿಯಾಗೆ ಹೋಗುತ್ತಿಲ್ಲ . ಕೇರಳದ ಎಡಕೋಚಿ ಹಾಗೂ ಆಳುವದಲ್ಲೇ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾರೆ. ಕೊಲ್ಕತಾ, ಪಾಂಡಿಚೆರಿ ಮತ್ತು ಒರಿಸ್ಸಾದಲ್ಲೂ ಚಿತ್ರೀಕರಣ ನಡೆಯಲಿದೆ. ಆದರೆ ವಿದೇಶದಲ್ಲಿ ಒಂದು ಸನ್ನಿವೇಶವನ್ನೂ ಶಾಜಿ ಚಿತ್ರಿಸುತ್ತಿಲ್ಲ.

ಮದರ್‌ ಆಗಿ ಮಿನಿ ನಾಯರ್‌ : ಜಯರಾಜ್‌ರ ಮಲೆಯಾಳಿ ಚಿತ್ರ ದೇಸದಾನಂನಲ್ಲಿನ ಅಭಿನಯಕ್ಕೆ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಮಿನಿ ನಾಯರ್‌ ಮದರ್‌ ತೆರೆಸಾ ಪಾತ್ರವಹಿಸಲಿದ್ದಾರೆ. ಬಾಲಕಿ ಎಗ್ನೆಸ್‌ ಪಾತ್ರವನ್ನು ಕಿರಿಯ ನಟಿ ಶೃತಿಲಕ್ಷ್ಮಿ ನಿರ್ವಹಿಸುವರು. ಮತ್ತೊಂದು ವಿಶೇಷವೆಂದರೆ ಮದರ್‌ ದತ್ತು ತೆಗೆದುಕೊಂಡಿದ್ದ ಇಬ್ಬರು ಅನಾಥ ಹೆಣ್ಣು ಮಕ್ಕಳು ಕೂಡ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇಳಿ ವಯಸ್ಸಿನ ಮದರ್‌ ಅಸ್ತಿತ್ವ ಬಿಂಬಿಸಲು ಹಾಲಿವುಡ್‌ನ ಕಲಾವಿದರೊಬ್ಬರು ಮಿನಿ ನಾಯರ್‌ಗೆ ವಿಶೇಷ ಮುಖವಾಡ ಕೂಡ ಸಿದ್ಧಪಡಿಸುತ್ತಿದ್ದಾರೆ. ಶಾಜಿ ಮಾಡಹೊರಟಿರುವ ಈ ಸಾಧನೆಗೆ ಕೇವಲ 45 ಲಕ್ಷ ರುಪಾಯಿ ಖರ್ಚಾಗುತ್ತದಂತೆ. ಶಾಜಿ ಕೆಲಸ ಸಲೀಸಾಗಲಿ.

English summary
Malayalam creative film maker Shaji Thaikkadan to bring mother teresa to screen

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada