»   » ಚೆನ್ನಾಗಿ ನಟಿಸುವ ತಾರೆಯರು ನಮ್ಮಲ್ಲೇ ಇದ್ದಾರೆ

ಚೆನ್ನಾಗಿ ನಟಿಸುವ ತಾರೆಯರು ನಮ್ಮಲ್ಲೇ ಇದ್ದಾರೆ

Posted By: Super
Subscribe to Filmibeat Kannada

ಬೆಂಗಳೂರು : ನೀವು ಮದುವೆ ಆಗ್ತಿದೀರಂತೆ? ಲವ್‌ ಮ್ಯಾರೇಜಾ, ಅರೇಂಜಾ? ಪ್ರಶಸ್ತಿ ಬರುತ್ತೇ ಅಂತ ದೇವೀರಿ ಸಿನಿಮಾದಲ್ಲಿ ಕ್ಯಾಬರೆ ಡ್ಯಾನ್ಸ್‌ ಮಾಡಿದ್ರಾ?- ವಿಜಯನಗರದ ಬಿಂಬ ಮಕ್ಕಳ ಕೂಟ ಚಿತ್ರ ನಟಿ ತಾರಾಗೆ ಚುರುಕು ಮುಟ್ಟಿಸುವ ಈ ಪ್ರಶ್ನೆಗಳನ್ನು ಕೇಳಿದಾಗ, ತಾರಾ ಅಡಿಕೆ ಕತ್ತರಿ ಕೈಲಿ ಸಿಕ್ಕಂಥಾ ಭಾವ ವ್ಯಕ್ತಪಡಿಸಿದರು. ಆದರೂ ಎಲ್ಲಕ್ಕೂ ಉತ್ತರ ಕೊಟ್ಟರು.

ಸಕಲೇಶಪುರದ ಹುಡುಗ ನೋಡಿಕೊಂಡು ಹೋಗಿದ್ದಾನೆ. ಮದುವೆ ಫಿಕ್ಸ್‌ ಆಗೋ ಹಂತದಲ್ಲಿದೆ. ಆತನ ಹೆಸರು ಗೌತಮ್‌ ಅಂತ- ತಾರಾ ನಾಚಿಕೆಯಿಂದಲೇ ಹೇಳಿದರು. ಇದು ಮಂಗಳವಾರ ವಿಜಯನಗರದ ಬಿಂಬ ಮಕ್ಕಳ ಕೂಟ ವಿಜಯನಗರ ಸರ್ಕಾರಿ ಪ್ರಾಥಮಿಕ ಸಾಲೆಯಲ್ಲಿ ಏರ್ಪಡಿಸಿದ್ದ ಅಣಕು ನ್ಯಾಯಾಲಯ, 'ಕಿರಿಯರ ಕಟಕಟೆ"ಯಲ್ಲಿ ವಕೀಲಿ ಚಿಣ್ಣರು ಆರೋಪಿ ಸ್ಥಾನದಲ್ಲಿದ್ದ ನಟಿ ತಾರಾ ಅವರನ್ನು ಕೆಣಕಿ, ಉತ್ತರ ಹೊರಗೆಡಹಿದ ಪರಿ.

ಅಣಕು ಕೋರ್ಟಿನಲ್ಲಿ ... : ಬಿಂಬ ಕೂಟದ ಚಿನಕುರುಳಿ ದೀಪಾ ವಕೀಲರ ನಾಯಕಿ. ಅಂಕಿತ, ಅಮೂಲ್ಯ, ಜಿತೇಂದ್ರ, ಸುಷ್ಮಾ, ಸುಹಾಸ್‌, ಶ್ರೇಯಸ್‌ ಮೊದಲಾದ ಚಿಣ್ಣರು ಕಿರಿಯ ವಕೀಲರು. ನಿರ್ದೇಶಕ ಡಿ.ರಾಜೇಂದ್ರಬಾಬು ಜಡ್ಜ್‌. ತಾರಾ ಆರೋಪಿ. ಕರಿ ಕೋಟು ಧರಿಸಿದ್ದ ಮಕ್ಕಳು ಥೇಟ್‌ ಲಾಯರಿಗಿರಿಯನ್ನು ಪ್ರದರ್ಶಿಸಿದರು.

ಒಂದೂವರೆ ತಾಸು ತಾರಾ ಅವರನ್ನು ಗ್ರಿಲ್‌ ಮಾಡಿದರು. 'ಹೀರೋಗೆ ಐ ಲವ್‌ ಯೂ ಹೇಳೋ ಸೀನ್‌ನ ಮಾಡಿ ತೋರಿಸಿ" ಎಂಬ ಪೋರನ ತುಂಟ ಪ್ರಶ್ನೆಗೆ ತಾರಾ, 'ನೀನೇ ನನ್ನ ಲವ್‌ ಮಾಡಿದ್ರೆ ಹೇಳ್ತೀನಿ" ಅಂತ ಮಾಂಜಾ ಕೊಟ್ಟರು. ತುಂಟ ಮಕ್ಕಳ ಒತ್ತಾಯಕ್ಕೆ ಮಣಿದು ರುಕ್ಕಮ್ಮ ಹಾಡಿಗೆ ಕುಣಿದರು.

ಮಕ್ಕಳಿಂದ ಎಂಥಾ ದೊಡ್ಡ ಪ್ರಶ್ನೆ : ಇದ್ದಕ್ಕಿದ್ದಂತೆ ಮಕ್ಕಳಿಂದ ಗಂಭೀರ ಪ್ರಶ್ನೆಗಳು ಹರಿದವು- ರೀಮೇಕ್‌ ಮಾಡೋದು ತಪ್ಪಾ, ಮತದಾನ ಪಾತ್ರ ಇಷ್ಟಾ ಆಯ್ತಾ, ಮುನ್ನುಡಿಯ ಮುಸ್ಲಿಂ ಹುಡುಗಿ ಪಾತ್ರ ಹೇಗಿತ್ತು, ಹೆಗ್ಗಡಿತಿ ಪಾತ್ರದ ಛಾಲೆಂಜನ್ನು ಹೇಗೆ ಸ್ವೀಕರಿಸಿದಿರಿ, ಈಚಿನ ಚಿತ್ರಗಳಲ್ಲಿ ಫೈಟಿಂಗ್‌-ರೇಪ್‌ ದೃಶ್ಯಗಳು ಹೆಚ್ಚಾಗಿದ್ದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲ್ವಾ, ಪರಭಾಷಾ ತಾರೆಯರು ಕನ್ನಡಕ್ಕೆ ಬರುವ ಅವಶ್ಯಕತೆ ಇದೆಯಾ, ನೀವು ರಾಜಕೀಯಕ್ಕೆ ಹೋಗ್ತೀರಾ.

ರೀಮೇಕ್‌ ತಪ್ಪಲ್ಲ : ತಾರಾ ತಡಬಡಾಯಿಸದೆ ಉತ್ತರ ಕೊಟ್ಟರು- ರೀಮೇಕ್‌ ತಪ್ಪಲ್ಲ. ಪರಭಾಷಾ ತಾರೆಯರೂ ಇಲ್ಲಿಗೆ ಬರೋದು ತಪ್ಪಲ್ಲ. ಆದರೆ ಹೆಸರಿಗಿಲ್ಲದ ನಟಿಯರನ್ನು ಕರೆಸಿ ಮೆರೆಸೋದು ಸರಿಯಲ್ಲ. ಅವರಿಗಿಂತ ಚೆನ್ನಾಗಿ ನಟಿಸುವ ತಾರೆಯರು ನಮ್ಮಲ್ಲೇ ಇದ್ದಾರೆ. ಸದ್ಯಕ್ಕೆ ರಾಜಕೀಯಕ್ಕೆ ಬರೋ ಆಸೆ ಇಲ್ಲ.

ಕೆರಿಯರ್‌ ಹಾಳು ಮಾಡಿಕೊಂಡೆ : ಇಷ್ಟ- ಹವ್ಯಾಸಗಳ ಬಗೆಗೆ ಪುಟಾಣಿಗಳು ಕೇಳಿದ ಪ್ರಶ್ನೆಗಳಿಗೆ, ನನ್ನ ನೆಚ್ಚಿನ ನಟ ಚಾರ್ಲಿ ಚಾಪ್ಲಿನ್‌. ಸದಾ ನಗ್‌ನಗ್ತಾ ಇರೋದು ಇಷ್ಟ . ಓದೋದು, ಒಳ್ಳೊಳ್ಳೆ ಸಿನಿಮಾ ನೋಡೋದು, ಪುಟಾಣಿಗಳ ಜೊತೆ ಆಟ ಆಡೋದು ನನ್ನ ಹವ್ಯಾಸ ಎಂದು ಕಟಕಟೆಯಲ್ಲಿ ನಿಂತ ತಾರಾ ಉತ್ತರ ಕೊಟ್ಟರು. ಅನೇಕ ವರ್ಷಗಳ ಕಾಲ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳದೆ ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲಾ ಮಾಡಿದೆ. ಕೆರಿಯರ್‌ ಹಾಳು ಮಾಡಿಕೊಂಡೆ ಅಂತ ಪ್ರಶ್ನೆಯಾಂದಕ್ಕೆ ತಾರಾ ಉತ್ತರ ಕೊಟ್ಟಾಗ ವಿಷಾದದ ಭಾವ ತೋರಿದರು.

ಕೇಸಲ್ಲಿ ಗೆದ್ದೋರು ಚಿಣ್ಣರು : ವಾದ- ಪ್ರತಿವಾದಗಳು ಮುಗಿದ ನಂತರ, ಅವನ್ನು ಗಮನಿಸಿದ ಮುಖ್ಯ ನ್ಯಾಯಾಧೀಶ ರಾಜೇಂದ್ರ ಬಾಬು, ಇವತ್ತಿನ ಕಟಕಟೆಯಲ್ಲಿ ನಡೆದ ವಾದ- ವಿವಾದದಲ್ಲಿ ಮುಗ್ಧ ಹಾಗೂ ಗಂಭೀರ ಪ್ರಶ್ನೆ ಕೇಳಿದ ಕಿರಿಯ ವಕೀಲರು ಗೆದ್ದಿದ್ದಾರೆ. ಅವರ ಪ್ರಶ್ನೆಗಳು ನನಗೆ ಬಲು ಇಷ್ಟವಾಗಿವೆ ಎಂದು ತೀರ್ಪಿತ್ತರು.

ಬಿಂಬದ ಅಜ್ಜ ಎ.ಎಸ್‌.ಮೂರ್ತಿ ಸ್ವಾಗತಿಸಿದರೆ, ನಿರ್ದೇಶಕಿ ಗೌರಿದತ್ತು ಕಾರ್ಯಕ್ರಮ ನಿರೂಪಿಸಿದರು.

English summary
Tara is going to marry a sakaleshpura guy, gautam

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada