ತರುಣ್ ಸುಧೀರ್-ಸೋನಾಲ್ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ನೋಡಿದ್ದೀರಾ?
ಸಾಲು ಸಾಲು ವಿವಾದಗಳು, ಕೊಲೆ ಪ್ರಕರಣ, ವಿಚ್ಛೇದನದ ಸುದ್ದಿಗಳನ್ನು ಕೇಳಿ ಸುಸ್ತಾಗಿದ್ದ ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿ ಸುದ್ದಿ ಕೊಟ್ಟವರು ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ. ಸ್ಯಾಂಡಲ್‌ವುಡ್‌ನ ಈ ಜೋಡಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. ಈಗಾಗಲೇ ವಿಶೇಷ ವಿಡಿಯೋ ಮೂಲಕ ಅನೌನ್ಸ್ ಕೂಡ ಮಾಡಿದ್ದಾರೆ.
ಇದೇ ಬೆನ್ನಲ್ಲೇ ಈಗ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮದುವೆ ಅಂದ್ಮೇಲೆ ಆಮಂತ್ರಣ ಪತ್ರಿಕೆ ಮೇಲೆ ಎಲ್ಲರ ಕಣ್ಣು ಬೀಳುತ್ತೆ. ಸದ್ಯ ಈ ಜೋಡಿ ಮದುವೆ ಆಮಂತ್ರಣ ಪತ್ರಿಕೆ ಕೂಡ ಸದ್ದು ಮಾಡುತ್ತಿದೆ.

ವೈರಲ್ ಆಗುತ್ತಿರುವ ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಹೇಗೆ ನಡೆಯುತ್ತೆ ಅನ್ನುವ ಬಗ್ಗೆ ಮಾಹಿತಿಯಿದೆ. ಈ ಜೋಡಿಯ ಮದುವೆ ಎರಡು ದಿನಗಳ ಕಾಲ ನಡೆಯಲಿದೆ. ಆಗಸ್ಟ್ 10 ಹಾಗೂ 11 ಎರಡು ದಿನ ಮದುವೆ ಸಮಾರಂಭ ನಡೆಯಲಿದೆ. ಒಂದು ದಿನ ಆರತಕ್ಷತೆ ನಡೆದರೆ, ಇನ್ನೊಂದು ದಿನ ವಿವಾಹ ಜರುಗಲಿದೆ.
ಆಗಸ್ಟ್ 10ರಂದು ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಜೋಡಿಯ ಆರತಕ್ಷತೆ ಇರುತ್ತೆ. ಸಂಜೆ 6.30ರಿಂದ ಈ ಸಮಾರಂಭ ನಡೆಯಲಿದೆ. ಚಿತ್ರರಂಗದ ಗಣ್ಯರು, ಆಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಈಗಾಗಲೇ ಈ ಜೋಡಿ ಚಿತ್ರರಂಗದ ಗಣ್ಯರಿಗೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ.
ಆಗಸ್ಟ್ 11ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಹಿಂದೂ ಸಂಪ್ರದಾಯದಂತೆ ಈ ಮದುವೆ ಜರುಗಲಿದ್ದು, ಬೆಳಗ್ಗೆ 10.50 ರಿಂದ 11.35ರ ಒಳಗಿನ ಶುಭ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಆರತಕ್ಷತೆ ಹಾಗೂ ಮದುವೆ ಎರಡೂ ಸಮಾರಂಭಗಳು ಕೂಡ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಸದ್ಯ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಗ್ಯಾಪ್‌ನಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಹಂಚಿ ಆಹ್ವಾನ ನೀಡುತ್ತಿದ್ದಾರೆಂದು ವರದಿಯಾಗಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ಜೋಡಿಯ ಮದುವೆ ಚರ್ಚೆಯಾಗುತ್ತಿದೆ.
ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಇಬ್ಬರೂ 'ರಾಬರ್ಟ್' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಲ್ಲಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆ ಬಳಿಕ ದರ್ಶನ್ ಅವರೇ ಇವರಿಬ್ಬರ ಲವ್ ಸ್ಟೋರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಎನ್ನಲಾಗಿದೆ. ಅಲ್ಲಿಂದಲೂ ತಮ್ಮ ಲವ್ ಸ್ಟೋರಿಯನ್ನು ಗೌಪ್ಯವಾಗಿ ಇಟ್ಟಿದ್ದ ಈ ಜೋಡಿ ಕೊನೆಗೂ ರಿವೀಲ್ ಮಾಡಿ, ಹಸೆಮಣೆ ಏರುವುದಕ್ಕೆ ಸಜ್ಜಾಗಿದೆ.


Click it and Unblock the Notifications











