ಹಾಸನಾಂಬೆಯ ದರ್ಶನ ಪಡೆದು, ದರ್ಶನ್‌ಗಾಗಿ ಪ್ರಾರ್ಥನೆ ಮಾಡಿದ ತರುಣ್ ಸುಧೀರ್...!
ಒಂದು ಕಡೆ ದರ್ಶನ್ ಜೈಲಿನಲ್ಲಿದ್ದಾರೆ. ಮತ್ತೊಂದು ಕಡೆ ಅವರ ನಲ್ಮೆಯ ಸ್ನೇಹಿತ -ಸಹೋದರ ತರುಣ್ ಸುಧೀರ್, ದರ್ಶನ್ ಅನುಪಸ್ಥಿತಿಯಲ್ಲಿ ಅವರ ಆದೇಶದ ಮೇರೆಗೆ ಮದುವೆಯಾಗಿದ್ದಾರೆ. ಪತ್ನಿ ಸೋನಾಲ್ ಜೊತೆ ಮಾಲ್ಡೀವ್ಸ್‌ಗೆ ತೆರಳಿ ಖುಷಿ ಖುಷಿಯಾಗಿ ಕಾಲ ಕಳೆದಿದ್ದಾರೆ, ದಾಂಪತ್ಯ ಜೀವನದ ಪಲ್ಲಕ್ಕಿಯಲ್ಲಿ ತರುಣ್ ಮತ್ತು ಸೋನಾಲ್ ಪ್ರೇಕ್ಷ ಪಕ್ಷಿಗಳಂತೆ ಹಾರಾಡುತ್ತಾ ಮರಳಿ ಬಂದಿದ್ದಾರೆ.
ಆದರೂ, ದರ್ಶನ್ ಇನ್ನೂ ಜೈಲಿಂದ ಆಚೆ ಬಂದಿಲ್ಲ. ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಯಾವಾಗ ಬರ್ತಾರೆ ಎನ್ನುವುದಕ್ಕೆ ಉತ್ತರ ಬಹುಶ ನಾಳೆ ಸಿಗಲಿದೆ. ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಾಳೆ ನಡೆಯಲಿದೆ. ಇದರ ನಡುವೆ ಈಗ ತಮ್ಮ ಪತ್ನಿ ಸೋನಾಲ್ ಮಾಂಥೆರೋ ಜೊತೆ ತರುಣ್ ಸುಧೀರ್ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ದರ್ಶನ್‌ಗಾಗಿ ಪ್ರಾರ್ಥನೆಯನ್ನು ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ತರುಣ್ ಸುಧೀರ್ ಮದುವೆಯ ನಂತರ ದೇವಿಯ ದರ್ಶನಕ್ಕೆ ಪತ್ನಿ ಸೋನಾಲ್ ಜೊತೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಕಳೆದ ವರ್ಷ ನನಗೆ ಬರಲು ಸಾಧ್ಯವಾಗಿರಲಿಲ್ಲ, ಸೋನಾಲ್ ಮಾತ್ರ ಬಂದು ಕಳೆದ ವರ್ಷ ದೇವಿಯ ದರ್ಶನ ಪಡೆದಿದ್ದರು ಎಂದು ಹೇಳಿದ್ದಾರೆ. ಇನ್ನೂ ಹಾಸನಾಂಬೆಗೆ ಕಾಲಿಡುತ್ತಿದ್ದರೆ ಒಂದು ಪಾಸಿಟಿವ್ ಎನರ್ಜಿ ಬರುತ್ತೆ, ಆ ಸ್ಥಾನದಲ್ಲಿ ನಿಂತಾಗ ತುಂಬಾ ವೈಬ್ರೇಶನ್ ಇರುತ್ತೆ ಎಂದಿರುವ ತರುಣ್ ಸುಧೀರ್ ಅಲ್ಲಿ ನಿಂತಾಗ ಮನಸಿನಲ್ಲಿರುವುದನ್ನೆಲ್ಲ ಹೇಳಿಕೊಳ್ಳಬೇಕು ಅನಸುತ್ತೆ ಎಂದಿದ್ದಾರೆ. ಅಷ್ಟು ಶಕ್ತಿ ಇದೆ ಎಂದು ಹೇಳಿದ್ದಾರೆ.
ಇನ್ನೂ ದರ್ಶನ್ ಸರ್ ನಮ್ಮ ಜೊತೆ ಬಂದಿಲ್ಲ, ಅವರು ಹೊರಗಡೆ ಇದ್ದಿದ್ದರೆ ಹಾಸನಾಂಬೆಯ ದರ್ಶನ ಪಡೆಯಲು ಅವರು ಕೂಡ ಬಂದೇ ಬರುತ್ತಿದ್ದರು ಎಂದಿರುವ ತರುಣ್ ಸುಧೀರ್ ಅವರಿಗಾಗಿ ಪ್ರಾರ್ಥನೆ ಮಾಡಿದ್ದೇನೆ, ದರ್ಶನ್ ಸರ್ ಆದಷ್ಟು ಬೇಗ ಹೊರ ಬರಲಿ ಎಂದು ದೇವಿಯ ಬಳಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ತರುಣ್ ಸುಧೀರ್ ಅವರ ಈ ಮಾತು ಕೇಳಿ ಸದ್ಯಕ್ಕೆ ತಮ್ಮ ಪ್ರೀತಿಯ ದರ್ಶನ್‌ಗಾಗಿ ತರುಣ್ ಸುಧೀರ್ ದೇವಿ ಬಳಿ ಹರಕೆ ಹೊತ್ತಿರಬಹುದು ಎನ್ನುವ ಅಭಿಪ್ರಾಯವನ್ನು ದರ್ಶನ್ ಅವರ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಅವರ ಮೇಲೆ ತರುಣ್ ಸುಧೀರ್‌ಗೆ ಇರುವ ಪ್ರೀತಿಯನ್ನು ಕೂಡ ಕೊಂಡಾಡುತ್ತಿದ್ದಾರೆ. ಇನ್ನುಳಿದಂತೆ ಈ ನವೆಂಬರ್ 08ರಂದು ದರ್ಶನ್ ಅಭಿನಯದ ನವಗ್ರಹ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರವನ್ನು ದರ್ಶನ್ ಅನುಪಸ್ಥಿತಿಯಲ್ಲಿ ಚಿತ್ರತಂಡ ಮಾಡುತ್ತಿದೆ. ಇನ್ನೂ ಆ ಕಾಲದಲ್ಲಿ ಹೀರೋ ಆಗಿದ್ದ ಸದ್ಯದ ಸ್ಟಾರ್ ಡೈರೆಕ್ಟರ್ ಮತ್ತು ದರ್ಶನ್‌ಗಾಗಿ ದೇವಿಯ ಬಳಿ ಪ್ರಾರ್ಥನೆ ಮಾಡಿರುವ ತರುಣ್ ಸುಧೀರ್ ಈ ಚಿತ್ರದಲ್ಲಿ ಕುಂಬಿ ಪಾತ್ರವನ್ನು ನಿರ್ವಹಿಸಿದ್ದರು.
ದರ್ಶನ್ ಮತ್ತು ತರುಣ್ ಸುಧೀರ್ ಜೊತೆ ಟೈಗರ್ ಪ್ರಭಾಕರ್ ಪುತ್ರ ವಿನೋದ್, ಲೋಕೇಶ್ ಪುತ್ರ ಸೃಜನ್, ದಿನೇಶ್ ಪುತ್ರ ಗಿರಿ, ಸುಂದರ್ ಕೃಷ್ಣ ಅರಸ್ ಪುತ್ರ ನಾಗೇಂದ್ರ ಹಾಗೂ ಕೀರ್ತಿರಾಜ್ ಪುತ್ರ ಧರ್ಮ ಕೂಡ ಬಣ್ಣ ಹಚ್ಚಿದ್ದರು. ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ವರ್ಷಾ ನಾಯಕಿಯರ ಪಾತ್ರವನ್ನು ನಿರ್ವಹಿಸಿದ್ದರು. ಪೊಲೀಸ್ ಆಫೀಸರ್ ಪಾತ್ರದಲ್ಲಿ ಸೌರವ್ ಮಿಂಚಿದ್ದರು.
ಮಿಕ್ಕಂತೆ ದರ್ಶನ್ ಅವರಿಗೆ ತೀವ್ರ ಬೆನ್ನು ನೋವಿರುವ ಕಾರಣ ಆಪರೇಷನ್‌ಗಾಗಿ ಜಾಮೀನು ಮಂಜೂರು ಮಾಡುವಂತೆ ದರ್ಶನ್ ಪರ ವಕೀಲರು ನ್ಯಾಯಾಧೀಶರ ಮುಂದೆ ಕೋರಿದ್ದರು. ಹೀಗಾಗಿ ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಸಲ್ಲಿಸುವಂತೆ ಕೋರ್ಟ್ ಹೇಳಿತ್ತು. ಇನ್ನು ನಾಳೆ ನಡೆಯಲಿರುವ ವಿಚಾರಣೆಯಲ್ಲಿ ಜೈಲಿನ ಅಧಿಕಾರಿಗಳು ದರ್ಶನ್ ಅವರ ವೈದ್ಯಕೀಯ ಸ್ಥಿತಿಗತಿ ಕುರಿತಾದ ವರದಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ದರ್ಶನ್ ಜಾಮೀನು ಸಿಗುವ ನಿರೀಕ್ಷೆ ಇದೆ.


Click it and Unblock the Notifications











