ತಮ್ಮ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ತರುಣ್ ಸುಧೀರ್ ಕೊಟ್ಟಿದ್ದು ಯಾರಿಗೆ..?
ಒಂದು ಕಡೆ ದರ್ಶನ್ ಜೈಲಿನಲ್ಲಿದ್ದಾರೆ. ಮತ್ತೊಂದು ಕಡೆ ಅವರ ನಲ್ಮೆಯ ಸ್ನೇಹಿತ-ಸಹೋದರ ತರುಣ್ ಸುಧೀರ್ ಮದುವೆಯ ಸಂಭ್ರಮದಲ್ಲಿದ್ದಾರೆ. ಸಹಜವಾಗಿ ತರುಣ್ ಮತ್ತು ಸೋನಾಲ್ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ಸಾಧ್ಯವಾಗದ ಕಾರಣ ದರ್ಶನ್ ಅವರಿಗೆ ಬೇಸರ ಇದ್ದೇ ಇರುತ್ತೆ. ಸಂಭ್ರಮದಲ್ಲಿ ದರ್ಶನ್ ಭಾಗಿಯಾಗಲ್ಲವಲ್ಲ ಎಂಬ ಕೊರಗು ತರುಣ್ ಸುಧೀರ್ ಅವರನ್ನು ಕಾಡುತ್ತಿರುತ್ತೆ.
ಆದರೂ.. ಮದುವೆ ಮುಂದೂಡಲು ಆಗಲ್ಲ. ಯಾಕೆಂದರೆ.. ಖುದ್ದು ದರ್ಶನ್ ಅವರೇ ''ಯಾವುದೇ ಕಾರಣಕ್ಕೂ ಮದುವೆಯ ದಿನಾಂಕ ಮುಂದೂಡಬೇಡ'' ಎಂದು ತರುಣ್ ಅವರಿಗೆ ಹೇಳಿದ್ದಾರೆ. ಹೀಗಾಗಿಯೇ ಸೋನಾಲ್ ಜೊತೆ ಹಸೆಮಣೆ ಏರಲು ಸಿದ್ಧವಾದ ತರುಣ್, ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ನೀಡಿದ್ದಾರೆ. ಮೊದಲ ಇನ್ವಿಟೇಶನ್ ಕಾರ್ಡ್ ನ ವಿಜಯಲಕ್ಷ್ಮೀ ಅವರಿಗೆ ಕೊಟ್ಟು, ಆನಂತರ ಮದುವೆಯ ಮಮತೆಯ ಕರೆಯೋಲೆಯನ್ನು ಚಿತ್ರರಂಗದಲ್ಲಿನ ತಮ್ಮ ಸ್ನೇಹಿತರಿಗೆ ತಮ್ಮ ಸಹುದ್ಯೋಗಿಗಳಿಗೆ ನೀಡಲು ಶುರು ಮಾಡಿದ್ದಾರೆ. ಖುದ್ದು ತರುಣ್ ಈ ವಿಚಾರವನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ.

ಇನ್ನೂ ದರ್ಶನ್ ಅವರನ್ನು ಭೇಟಿಯಾದಾಗ ತರುಣ್ ಸುಧೀರ್ ಜೈಲಿನಲ್ಲಿಯೇ ದರ್ಶನ್ ಅವರಿಗೆ ತಮ್ಮ ಲಗ್ನ ಪತ್ರಿಕೆಯನ್ನೂ ನೀಡಿರಬಹುದಾ ಅನ್ನುವ ಅನುಮಾನ ಅನೇಕರಲ್ಲಿದೆ. ಮತ್ತೊಮ್ಮೆ ಜೈಲಿಗೆ ಹೋಗಿ ಆಮಂತ್ರಣ ಪತ್ರಿಕೆ ನೀಡ್ತಾರಾ ಅನ್ನುವ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಉತ್ತರವನ್ನೂ ನೀಡಿರುವ ತರುಣ್, ಜೈಲಿನಲ್ಲಿ ದರ್ಶನ್ ಅವರಿಗೆ ಲಗ್ನಪತ್ರಿಕೆ ಕೊಡೋ ತರಹದ್ದು ಆಗಲ್ಲ ಎಂದಿದ್ದಾರೆ.
ಅಂದ್ಹಾಗೇ ತರುಣ್ ಸುಧೀರ್ ಮತ್ತು ಸೋನಾಲ್ ಮಾಂಥೆರೋ ತಮ್ಮ ಮದುವೆಯ ವಿಚಾರವನ್ನು ವಿಶೇಷವಾದ ಫೋಟೋಶೂಟ್ ಮಾಡಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. ಬೆಂಗಳೂರಿನ ನವರಂಗ ಚಿತ್ರಮಂದಿರದಲ್ಲಿ ಕಲರ್ ಫುಲ್ ಫೋಟೋ ಶೂಟ್ ಮಾಡಿಸಿದ್ದರು.

ಈ ಫೋಟೋ ಶೂಟ್ ಹಿಂದಿನ ರಹಸ್ಯವನ್ನೂ ಹೇಳಿರುವ ತರುಣ್ ಸುಧೀರ್ ''ನಮ್ಮಿಬ್ಬರನ್ನು ಕನೆಕ್ಟ್ ಮಾಡಿದ್ದು ಸಿನಿಮಾ, ನಾವಿರೋದು ಸಿನಿಮಾದಲ್ಲಿ. ಸಿನಿಮಾನೇ ನಮ್ಮ ಥೀಮ್ ಆಗಬೇಕು ಅಂತ ಥಿಯೇಟರ್‌ನಲ್ಲಿ ಶೂಟ್ ಮಾಡಿದ್ವಿ. ಸಿನಿಮಾ ಅಂದ್ರೆನೇ ಸಿಂಗಲ್ ಸ್ಕ್ರೀನ್. ಅದಕ್ಕೆ 'ನವರಂಗ್' ಥಿಯೇಟರ್‌ನಲ್ಲಿ ಶೂಟ್ ಮಾಡಿದ್ವಿ. ನಾನು ಚಿಕ್ಕವಯಸ್ಸಿನಿಂದ ಸಿನಿಮಾಗಳನ್ನ ನೋಡಿ ಬೆಳೆದಿದ್ದು ನವರಂಗ್ ಥಿಯೇಟರ್‌ನಲ್ಲಿ. ಅದು ನನಗೆ ಒಂದು ಎಮೋಷನ್. ಹೀಗಾಗಿ ಅಲ್ಲೇ ಶೂಟಿಂಗ್ ಮಾಡಿದ್ವಿ'' ಎಂದಿದ್ದಾರೆ. ಸದ್ಯದಲ್ಲಿಯೇ ಪತ್ರಿಕಾಗೋಷ್ಠಿಯನ್ನು ಕರೆದು ತಮ್ಮಿಬ್ಬರ ಪ್ರೇಮಕಥನವನ್ನೂ ಸವಿಸ್ತಾರವಾಗಿ ಹೇಳುವುದಾಗಿಯೂ ಕೂಡ ತರುಣ್ ಸುಧೀರ್ ಹೇಳಿದ್ದಾರೆ.
ಸದ್ಯಕ್ಕೆ ತರುಣ್ ಸುಧೀರ್ ಮತ್ತು ಸೋನಾಲ್ ಮಾಂಥೆರೋ ತಮ್ಮ ಕುಟುಂಬಸ್ಥರಿಗೆ, ಆತ್ಮೀಯರಿಗೆ, ಸ್ನೇಹಿತರಿಗೆ ಹಾಗೂ ಚಿತ್ರರಂಗದವರಿಗೆ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ನೀಡುತ್ತಿದ್ಧಾರೆ. ಇಬ್ಬರು ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಆಗಸ್ಟ್ 10 ಹಾಗೂ 11 ರಂದು ಬೆಂಗಳೂರಿನಲ್ಲಿ ತರುಣ್ ಸುಧೀರ್ -ಸೋನಾಲ್ ಮಾಂಥೆರೋ ಅವರ ವಿವಾಹ ಮಹೋತ್ಸವ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ನಡೆಯಲಿದೆ.


Click it and Unblock the Notifications











