ಸದ್ಯಕ್ಕಿಲ್ಲ 'ಸಿಂಧೂರ ಲಕ್ಷ್ಮಣ'; ತರುಣ್ ಸುಧೀರ್ ಪ್ಲ್ಯಾನ್ ಬೇರೆನೇ ಇದೆ.. ಏನದು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೋಡುವುದಕ್ಕೆ ಬಳ್ಳಾರಿ ಜೈಲಿನ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ಇಂದು (ಅಕ್ಟೋಬರ್ 14) ದರ್ಶನ್‌ಗೆ ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ಆತ್ಮವಿಶ್ವಾದಲ್ಲಿ ದರ್ಶನ್ ಅಭಿಮಾನಿಗಳು ಇದ್ದಾರೆ. ಇನ್ನೊಂದು ಕಡೆ ಜಾಮೀನು ಕೊಡಬೇಕೋ ಬೇಡವೋ ಅನ್ನೋ ತೀರ್ಪನ್ನು ನ್ಯಾಯಾಧೀಶರು ನೀಡಲಿದ್ದಾರೆ.
ದರ್ಶನ್ ಜಾಮೀನು ಸಿಕ್ಕು ಹೊರಬರುತ್ತಿದ್ದಂತೆ ಸಾಲು ಸಾಲು ಸಿನಿಮಾಗಳನ್ನು ಮಾಡಬೇಕಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರುವುದಕ್ಕೂ ಮುನ್ನ ದರ್ಶನ್ 'ಡೆವಿಲ್' ಸಿನಿಮಾದಲ್ಲಿ ನಟಿಸುತ್ತಿದ್ದರು. ಆ ಸಿನಿಮಾ ಈಗ ಅರ್ಧಕ್ಕೆ ನಿಂತಿದೆ. ಎಲ್ಲಾ ಸರಿಯಿದ್ದಿದ್ದರೆ, ಈಗಾಗಲೇ 'ಡೆವಿಲ್' ಸಿನಿಮಾದ ಶೂಟಿಂಗ್ ಮುಗಿಯುತ್ತಿತ್ತು. ಮತ್ತೊಂದು ಹೊಸ ಪ್ರಾಜೆಕ್ಟ್ ಆರಂಭ ಆಗಬೇಕಿತ್ತು.

ದರ್ಶನ್‌ಗೆ ಜಾಮೀನು ಸಿಕ್ಕ ಕೂಡಲೇ 'ಡೆವಿಲ್' ಸಿನಿಮಾವನ್ನು ಮುಗಿಸಬೇಕಿದೆ. ಆದರೆ, ಸಿನಿಮಾ ಲೈನ್ ಅಪ್‌ನಲ್ಲಿ ಕೊಂಚ ಮಟ್ಟಿಗೆ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ 'ಡೆವಿಲ್' ಮುಗಿದ ಬಳಿಕವೇ 'ಸಿಂಧೂರ ಲಕ್ಷ್ಮಣ'ಕ್ಕೆ ಗ್ರೀನ್ ಸಿಗ್ನಲ್ ಕೊಡ ಬಹುದು ಎಂದು ಲೆಕ್ಕಚಾರ ಹಾಕಿದ್ದರು. ಯಾಕಂದ್ರೆ, ರೇಣುಕಾಸ್ವಾಮಿ ಹತ್ಯೆ ಕೇಸ್‌ನಿಂದ ನೆಗೆಟಿವ್ ಆಗಿರುವ ಇಮೇಜ್ ಅನ್ನು ಪಾಸಿಟಿವ್ ಮಾಡಿಕೊಳ್ಳುವುದಕ್ಕೆ 'ಸಿಂಧೂರ ಲಕ್ಷ್ಮಣ' ಮಾತ್ರ ಸಾಧ್ಯ ಅಂತ ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ತರುಣ್ ಸುಧೀರ್ ಪ್ಲ್ಯಾನ್ ಬೇರೆನೇ ಇದೆ.
ದರ್ಶನ್ ಹಾಗೂ ತರುಣ್ ಸುಧೀರ್ ಇಬ್ಬರದ್ದೂ ಸ್ಯಾಂಡಲ್‌ವುಡ್‌ನ ಸಕ್ಸಸ್‌ಫುಲ್ ಕಾಂಬಿನೇಷನ್. ದರ್ಶನ್ ಸಿನಿಮಾಗೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದ ಸಿನಿಮಾ 'ರಾಬರ್ಟ್' ಹಾಗೂ 'ಕಾಟೇರ' ಎರಡೂ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿತ್ತು. ಹೀಗಾಗಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಸಿಂಧೂರ ಲಕ್ಷ್ಮಣ'ವನ್ನು ತರುಣ್ ಸುಧೀರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

'ಡೆವಿಲ್' ಬಳಿಕ ಇನ್ನೂ ಎರಡು ಮೂರು ಸಿನಿಮಾಗಳು ಲೈನ್ ಅಪ್ ಆಗಿದ್ದರಿಂದ 'ಸಿಂಧೂರ ಲಕ್ಷಣ' ಶೀಘ್ರದಲ್ಲೇ ಟೇಕಾಫ್ ಆಗಲ್ಲ ಅನ್ನೋ ವಿಷಯವನ್ನು ನಿರ್ಮಾಪಕರು ಹೇಳಿದ್ದರು. ಆದರೀಗ ಬದಲಾದ ಪರಿಸ್ಥಿತಿಯಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾಗೆ ಮೊದಲ ಆದ್ಯತೆ ಕೊಡಬಹುದು ಎಂದು ಮಾತು ಕೇಳಿ ಬಂದಿತ್ತು. ಆದ್ರೀಗ ಸ್ವತ: ತರುಣ್ ಸುಧೀರ್ ಪರೋಕ್ಷವಾಗಿ ಈ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
'ಸಿಂಧೂರ ಲಕ್ಷ್ಮಣ' ಸಿನಿಮಾ ಆರಂಭಕ್ಕೂ ಮುನ್ನ ತರುಣ್ ಸುಧೀರ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇನ್ನೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳುವುದಕ್ಕೂ ಮುನ್ನ ಪ್ರೊಡಕ್ಷನ್ ಹೌಸ್ ಆರಂಭ ಮಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಈ ಪ್ರೊಡಕ್ಷನ್ ಹೌಸ್ ಮೂಲಕ ಕೇವಲ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ನಿರ್ದೇಶನ ಮಾಡುವುದಿಲ್ಲ ಅಂತ ಹೇಳಿಕೊಂಡಿದ್ದಾರೆ.
ಈ ಮೂಲಕ ತರುಣ್ ಸುಧೀರ್ ನಿರ್ಮಾಣಕ್ಕೆ ಇಳಿದಿದ್ದು, 'ಸಿಂಧೂರ ಲಕ್ಷ್ಮಣ' ನಿರ್ದೇಶನಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸದ್ಯಕ್ಕೆ ಈ ಸಿನಿಮಾ ಸೆಟ್ಟೇರುವುದು ಅನುಮಾನ. ಜೈಲಿನಿಂದ ಹೊರಬಂದ ಬಳಿಕ 'ಡೆವಿಲ್' ಮುಗಿಸಿದ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಮತ್ತೆ ಹೊಸ ಇಮೇಜ್ ಪಡೆಯುವ ಸಲುವಾಗಿ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳಬಹುದು. ಸದ್ಯ ತರುಣ್ ಸುಧೀರ್ ಆಲೋಚನೆ ಪ್ರೊಡಕ್ಷನ್ ಹೌಸ್ ಕಡೆಗೆ ವಾಲಿದೆ ಎಂದು ಹೇಳಬಹುದು.


Click it and Unblock the Notifications











