'ಲವ್ ಮಾಕ್ಟೇಲ್'ದಿಂದ ನನಗೆ ಸಿಕ್ಕಿದ್ದು ಫೇಮ್ ಅಲ್ಲ ಶೇಮ್ ; ಕೃಷ್ಣ-ಮಿಲನಾ ವಿರುದ್ಧ ಮತ್ತೆ ಕಿಡಿ ಕಾರಿದ ಗೀತಾ ಭಟ್
ದೇಹದ ಗಾತ್ರದ ಕುರಿತು ಬಣ್ಣದ ಪ್ರಪಂಚದಲ್ಲಿ ಆಗಾಗ ಮಾತು ಕೇಳಿ ಬರುತ್ತಲೇ ಇರುತ್ತೆ. ಅನೇಕ ನಾಯಕಿಯರು ಈ ಬಾಡಿ ಶೇಮಿಂಗ್‌ಗೆ ಚಿತ್ರರಂಗದಲ್ಲಿ ಗುರಿಯಾಗಿದ್ದು ಇದೆ. ದಪ್ಪಗಿದ್ದರೆ ದಪ್ಪ .. ತೆಳ್ಳಗಿದ್ದರೆ ಕಡ್ಡಿ .. ಎಂದು ಅನೇಕ ನಾಯಕಿಯರನ್ನು ಇಲ್ಲಿ ಕೇವಲ ದೇಹದಾಕಾರದ ಮೇಲೆ ಅಳೆಯಲಾಗಿದೆ.
ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯದ ಕುರಿತು ಮಾತನಾಡುವ ಮೂಲಕ ಅನೇಕರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ಇಲ್ಲಾಗಿವೆ. ಹೀಗಾಗಿಯೇ ಲಿಂಗ, ಬಣ್ಣ, ಜನಾಂಗದಂತೆ ದೇಹದ ಗಾತ್ರ ಪರಿಗಣಿಸಿ ಮಾಡಲಾಗುವ ಈ ತಾರತಮ್ಯದ ಕುರಿತು, ದೇಹ ರಚನೆಯ ಕುರಿತು ಎದುರಾದ ಟೀಕೆಗಳ ಕುರಿತು ಹಲವರು ಮಾತನಾಡುತ್ತಲೇ ಬಂದಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕುತ್ತಲೇ ಬಂದಿದ್ದಾರೆ. ಆ ಪೈಕಿ ಗೀತಾ ಭಾರತಿ ಭಟ್ ಕೂಡ ಒಬ್ಬರು.

ಹೌದು, ಗೀತಾ ಭಟ್.. ''ಬ್ರಹ್ಮಗಂಟು'' ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ನಟಿ. ಆ ನಂತರ ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ಪರದೆಯಲ್ಲೂ ಅದೃಷ್ಟ ಪರೀಕ್ಷೆ ಮಾಡಿಕೊಂಡ ಗೀತಾ ಈ ಹಿಂದೆ ''ಲವ್ ಮಾಕ್ಟೇಲ್'' ಪಾತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದರು.
ಆದರೆ. ಆ ಪಾತ್ರ ಮಾಡಿದ ಪಶ್ಚಾತಾಪ ಗೀತಾ ಅವರಿಗೆ ಇವತ್ತು ಇದೆ. ಖುದ್ದು ಗೀತಾ ಈ ಮಾತನ್ನು ''ರಾಜೇಶ್ ಗೌಡ'' ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದು ಇದೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಮೇಲೆ ಬಾಡಿ ಶೇಮಿಂಗ್ ಮಾಡಿದ ಆರೋಪವೂ ಕೂಡ ಮಾಡಿಯಾಗಿದೆ.
ಗೀತಾ ಅವರ ಈ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಇತ್ತೀಚೆಗಷ್ಟೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ''ಫಸ್ಟ್ ಡೇ ಫಸ್ಟ್ ಶೋ'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಉದ್ದೇಶಪೂರ್ವಕವಾಗಿ ನಾವು ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಮೊದಲನೆಯದ್ದಾಗಿ ನಮಗೆ ಅವರು ಯಾರು ಎನ್ನುವುದೇ ಗೊತ್ತಿರಲಿಲ್ಲ ಎಂದು ಹೇಳಿರುವ ಕ್ರಿಸ್ಮಿ ಜೋಡಿ ಆ ಪಾತ್ರಕ್ಕೆ ನಾವು ಆಡಿಷನ್ ಮಾಡಿ ಅವರನ್ನು ಆಯ್ಕೆ ಮಾಡಿದ್ದೇವು ಎಂದು ಹೇಳಿದ್ದಾರೆ. ವಿಷಯವನ್ನು ಅಥವಾ ಡೈಲಾಗ್‌ನ ಮುಚ್ಚಿಟ್ಟು ಆ ಪಾತ್ರವನ್ನು ಅವರಿಂದ ಮಾಡಿಸುವ ಅವಶ್ಯಕತೆ ನಮಗೆ ಇರಲಿಲ್ಲ ಎಂದು ಹೇಳಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಬೇಕಾದಷ್ಟು ಜನ ಆರ್ಟಿಸ್ಟ್‌ಗಳು ಅವಕಾಶಗಳಿಗೋಸ್ಕರ ಕಾದು ಕುಳಿತಿರ್ತಾರೆ, ನಮ್ಮ ಅವಶ್ಯಕತೆಯನ್ನು ನಾವು ಹೇಳಿಯೇ ಮುಂದುವರೆದಿದ್ದು ಎಂದು ಹೇಳಿದ್ದಾರೆ.

ಮುಂದುವರೆದು ಅವರು ಮೊದಲು ಧಾರಾವಾಹಿ ಮಾಡ್ತಿದ್ದರು. ಆ ಧಾರಾವಾಹಿಯ ಕಥೆ ದೇಹದ ತೂಕದ ಸುತ್ತಾನೇ ತಾನೇ ಇದ್ದಿದ್ದು ಎಂದು ಪ್ರಶ್ನೆ ಮಾಡಿರುವ ಡಾರ್ಲಿಂಗ್ ಕೃಷ್ಣ ಆ ಧಾರಾವಾಹಿಯಲ್ಲಿ ಆಗದ ಬಾಡಿ ಶೇಮಿಂಗ್ ನಮ್ಮ ಸಿನಿಮಾದ ಒಂದು ಡೈಲಾಗ್‌ದಿಂದ ಆಯ್ತಾ ಎಂದು ಕೇಳಿದ್ದಾರೆ.
ಸದ್ಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಈ ಮಾತುಗಳಿಂದ ಗೀತಾ ಭಟ್ ಮತ್ತೊಮ್ಮೆ ಕೆರಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಉತ್ತರ ನೀಡಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಗೀತಾ ಭಟ್, ನಾನು ಮೊದಲು ಬಾಡಿ ಶೇಮಿಂಗ್ ಇರುವ ಸೀರಿಯಲ್‌ನಲ್ಲಿ ನಟಿಸಿದ್ದೆ ಎಂದು ಹೇಳುತ್ತಿರುವವರಿಗೆ ಒಂದು ಸ್ಪಷ್ಟನೆ ಕೊಡಬೇಕಿದೆ ಎಂದು ತಮ್ಮ ಮಾತು ಶುರುಮಾಡಿದ್ದಾರೆ.
ಆ ಸೀರಿಯಲ್ಲಿನ ಕಥೆ ಒಬ್ಬ ದಪ್ಪ ಹುಡುಗಿ ಸಮಾಜದಲ್ಲಿ ಎದುರಿಸುವ ನಿಜವಾದ ಸಮಸ್ಯೆಗಳ ಬಗ್ಗೆ ಇತ್ತು. ಉದ್ದೇಶ ಅವಳನ್ನು ಹಾಸ್ಯ ಮಾಡುವುದು ಅಲ್ಲ, ಸಮಾಜ ಅವಳನ್ನು ಹಾಸ್ಯದ ವಿಷಯವಾಗಿಸಿದರೂ ಕೂಡ ಅವಳ ಬಲ, ದಯೆ ಮತ್ತು ಮಾನವೀಯತೆಯನ್ನು ತೋರಿಸುವುದಾಗಿತ್ತು ಎಂದು ಹೇಳಿರುವ ಗೀತಾ ಭಟ್ ಬಾಡಿ ಶೇಮಿಂಗ್‌ನ್ನು ಹಾಸ್ಯದ ಹೆಸರಿನಲ್ಲಿ ಬೆಂಬಲಿಸುವುದಾಗಿರಲಿಲ್ಲ ಎಂದು ಹೇಳಿದ್ದಾರೆ.
ಆ ಒಂದು ಡೈಲಾಗ್ ಜನಜನಿತವಾಯ್ತು ಅಂದ್ರೆ ಅದು ಕೇವಲ ಕಾಮಿಡಿ ಆಗಿದ್ದರಿಂದ ಮಾತ್ರ ಅಲ್ಲ, ಜನರು ಅದನ್ನು ಇನ್ನೊಬ್ಬರನ್ನು ಹಾಸ್ಯ ಮಾಡಲು ಬಳಸಿದ ಕಾರಣವೂ ಹೌದು ಎಂದು ಹೇಳಿರುವ ಗೀತಾ ಭಟ್ ಅದು ಫೇಮ್ ಅಲ್ಲ ಶೇಮ್ ಎಂದು ಹೇಳಿದ್ದಾರೆ.
ಇನ್ನೂ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಆ ಪಾತ್ರಕ್ಕೆ ಆಡಿಷನ್ ಮೂಲಕ ಆಯ್ಕೆ ಮಾಡಲಾಗಿತ್ತು ಎಂದು ಹೇಳಿದ್ದರು. ಈ ಕುರಿತು ಕೂಡ ಸ್ಪಷ್ಟೀಕರಣ ನೀಡಿರುವ ಗೀತಾ ಭಟ್ ಇನ್ನೊಂದು ವಿಷಯ-ನಾನು ಆ ಅವಕಾಶಕ್ಕಾಗಿ ಹುಡುಕಿಕೊಂಡು ಹೋಗಲಿಲ್ಲ.ಆ ಪಾತ್ರಕ್ಕಾಗಿ ಆಡಿಷನ್ ಕೂಡ ಕೊಡಲಿಲ್ಲ ಎಂದು ಹೇಳಿದ್ದಾರೆ. ಆ ಸೀನ್‌ನಲ್ಲಿ ಸೇರಿಸಿದ ಬ್ಯಾಕ್ ಶಾಟ್ ಅಥವಾ ಸೌಂಡ್ ಎಫೆಕ್ಟ್ಸ್ ಬಗ್ಗೆ ಕೂಡ ನನಗೆ ಗೊತ್ತಿರಲಿಲ್ಲ ಎಂದು ಹೇಳಿರುವ ಗೀತಾ ಭಟ್ ಅವುಗಳು ಬಾಡಿ ಶೇಮಿಂಗ್ ಅನ್ನು ಇನ್ನಷ್ಟು ಹೆಚ್ಚಾಗಿ ತೋರಿಸುವಂತೆ ಪರದೆಯ ಮೇಲೆ ಕಾಣಿಸಿಕೊಂಡವು ಎಂದು ಹೇಳಿದ್ದಾರೆ.
ಮುಂದುವರೆದು ಹೌದು ಆ ಪಾತ್ರ ನಾನು ತೆಗೆದುಕೊಂಡಿದ್ದು ತಪ್ಪು ಎಂದು ಹೇಳಿರುವ ಗೀತಾ ಭಟ್, ಮುಂದೆ ಹಾಸ್ಯ ಅಥವಾ ಪದಗಳ ಆಟದ ಹೆಸರಿನಲ್ಲಿ ಬಾಡಿ ಶೇಮಿಂಗ್ ಮಾಡುವಂತಹ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದು ಕೇವಲ ಒಂದು ಕ್ಯಾರೆಕ್ಟರ್ ಎಂದು ಹೇಳುವಂಥವರಿಗೆ ಇಂತಹ ಪಾತ್ರಗಳ ಮೂಲಕ ನಾವು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.



Click it and Unblock the Notifications











