'ಅಂಜನೀಪುತ್ರ', 'ಟಗರು' ಬಳಿಕ ಅಪ್ಪು ಅಪ್ಪಿಕೊಂಡಿದ್ದು 'ಇದೇ' ಹಾಡನ್ನ.!
Recommended Video

ಹೊಸ ಸಿನಿಮಾಗಳಿಗೆ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಪಿ.ಆರ್.ಕೆ' ಆಡಿಯೋ ಕಂಪನಿ ಶುರು ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ.
'ಪಿ.ಆರ್.ಕೆ' ಆಡಿಯೋ ಕಂಪನಿಯಿಂದ ತಮ್ಮ 'ಅಂಜನೀಪುತ್ರ' ಹಾಗೂ ಶಿವಣ್ಣನ 'ಟಗರು' ಚಿತ್ರಗಳ ಹಾಡುಗಳನ್ನ ಅಪ್ಪು ಹೊರತಂದಿದ್ದರು. 'ಅಂಜನೀಪುತ್ರ' ಹಾಗೂ 'ಟಗರು' ಬಳಿಕ ಅಪ್ಪು ಮನಸಾರೆ ಅಪ್ಪಿಕೊಂಡಿದ್ದು '6ನೇ ಮೈಲಿ' ಚಿತ್ರದ ಹಾಡುಗಳನ್ನ.!
ಹೌದು, ಸಂಚಾರಿ ವಿಜಯ್ ಅಭಿನಯದ ಸೀನಿ ನಿರ್ದೇಶನದ '6ನೇ ಮೈಲಿ' ಚಿತ್ರದ ಹಾಡುಗಳು 'ಪಿ.ಆರ್.ಕೆ' ಆಡಿಯೋ ಲೇಬಲ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುವ ಕಥೆ ಹೊಂದಿರುವ '6ನೇ ಮೈಲಿ' ಸಿನಿಮಾದಲ್ಲಿ ಇರುವುದು ಒಂದೇ ಹಾಡು. ಸಾಯಿ ಕಿರಣ್ ಸಂಯೋಜಿಸಿರುವ '6ನೇ ಮೈಲಿ' ಹಾಡು ಪುನೀತ್ ರಾಜ್ ಕುಮಾರ್ ಗೆ ಇಷ್ಟವಾದ ಕಾರಣ ತಮ್ಮದೇ ಆಡಿಯೋ ಕಂಪನಿ ಮೂಲಕ ಹೊರತರಲು ಮನಸ್ಸು ಮಾಡಿದರಂತೆ.
ಈಗಾಗಲೇ '6ನೇ ಮೈಲಿ' ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು, ಸಿನಿ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಲವಾರು ವಿಶೇಷತೆಗಳಿಂದ ಸದ್ದು ಮಾಡುತ್ತಿರುವ '6ನೇ ಮೈಲಿ' ಚಿತ್ರದ ಟ್ರೈಲರ್ ಇದೇ ಶನಿವಾರ ಬಿಡುಗಡೆ ಆಗಲಿದೆ. ಅದು ಶಿವರಾಜ್ ಕುಮಾರ್ ರವರ ಅಮೃತಹಸ್ತದಿಂದ.!
ತಾವು ನೋಡಿದ ಕೆಲವು ಘಟನೆಗಳನ್ನು ಇಟ್ಟುಕೊಂಡು ನಿರ್ದೇಶಕ ಸೀನಿ '6ನೇ ಮೈಲಿ' ಚಿತ್ರ ಮಾಡಿದ್ದಾರೆ. ಕ್ವಾಲಿಟಿಗೆ ಎಲ್ಲೂ ಕಾಂಪ್ರೊಮೈಸ್ ಆಗದೆ ಡಾ.ಬಿ.ಎಸ್.ಶೈಲೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್, ಆರ್.ಜೆ ನೇತ್ರ ಸೇರಿದಂತೆ ರಂಗಭೂಮಿ ಕಲಾವಿದರ ದಂಡು ಸಿನಿಮಾದಲ್ಲಿದೆ.
ಗಾಂಧಿನಗರದ ಮೂಲೆ ಮೂಲೆಯಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ '6ನೇ ಮೈಲಿ' ಸಿನಿಮಾ ಜುಲೈ 6 ರಂದು ನಿಮ್ಮ ಮುಂದೆ ಬರಲಿದೆ. ಪ್ರತಿಭಾವಂತರಿಗೆ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅಂತೂ ಪ್ರೋತ್ಸಾಹ ಕೊಟ್ಟಿದ್ದಾರೆ. ಅದೇ ರೀತಿ ಕನ್ನಡಿಗರ ಹಾರೈಕೆ ಕೂಡ ಸಿಗಲಿ ಅನ್ನೋದು ಚಿತ್ರತಂಡದ ಅಭಿಲಾಷೆ.


Click it and Unblock the Notifications











