'ಜಲಂಧರ'ದಲ್ಲಿ ಲಾಫಿಂಗ್ ಬುದ್ದ ಪ್ರಮೋದ್ ಶೆಟ್ಟಿ ಕೇಂದ್ರ ಬಿಂದು, ಈ ಸಂಸ್ಥೆಯ ಪಾಲಾಯಿತು ಚಿತ್ರದ ಆಡಿಯೋ...!
ಚಿತ್ರವೊಂದರ ಗೆಲುವು ಆ ಚಿತ್ರದ ಹಾಡುಗಳಲ್ಲಿದೆ ಎನ್ನುವ ಮಾತು ಕನ್ನಡ ಚಿತ್ರರಂಗದಲ್ಲಿದೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು. ಇದಕ್ಕೆ ಪುರಾವೆ ಎನ್ನುವಂತೆ ಇಲ್ಲಿಯವರೆಗೆ ಅನೇಕ ಚಿತ್ರಗಳು ಕೇವಲ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿವೆ.
ಈ ಸಾಲಿಗೆ ರಿಷಬ್ ಶೆಟ್ಟಿಯ ಅತ್ಯಾಪ್ತ ಪ್ರಮೋದ್ ಶೆಟ್ಟಿ ಅಭಿನಯದ ಜಲಂಧರ ಚಿತ್ರ ಸೇರಿಕೊಳ್ಳುವ ಎಲ್ಲ ಲಕ್ಷಣ ಸದ್ಯಕ್ಕೆ ಕಾಣುತ್ತಿವೆ. ಚಿತ್ರದ ಹಾಡುಗಳನ್ನು ಮೆಚ್ಚಿ ಕನ್ನಡ ಚಿತ್ರರಂಗದ ಪ್ರತಿಷ್ಠಿತ ಆಡಿಯೋ ಕಂಪನಿಯಲ್ಲಿ ಒಂದಾದ ಜಂಕಾರ್ ಆಡಿಯೋ ಸಂಸ್ಥೆ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದೆ.

ಅಂದ್ಹಾಗೇ ಮೊನ್ನೆಯಷ್ಟೇ ಪ್ರಮೋದ್ ಶೆಟ್ಟಿ ಲಾಫಿಂಗ್ ಬುದ್ಧ ಚಿತ್ರದಲ್ಲಿ ಗೋವರ್ಧನ ಎಂಬ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಸ್ಯದ ರಸದೌತಣ ಬಡಿಸಿದ್ದರು. ಇನ್ನೂ.. ಚಿತ್ರರಂಗದ ಹಲವಾರು ಮಜಲುಗಳನ್ನು ಬಲ್ಲ ಪ್ರಮೋದ್ ಶೆಟ್ಟಿ ಕೇವಲ ಲಾಫಿಂಗ್ ಬುದ್ದ ಮಾತ್ರ ಅಲ್ಲ ಶಭಾಷ್ ಬಡ್ಡಿ ಮಗ್ನೆ, ಕಾಶಿ ಯಾತ್ರೆ ಸೇರಿ ಇನ್ನೂ ಕೆಲ ಚಿತ್ರಗಳಲ್ಲಿನ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಈ ಸಾಲಿಗೆ ಈಗ ಸೇರಿಕೊಂಡಿರುವ ಜಲಂಧರ ಚಿತ್ರವನ್ನು ವಿಷ್ಣು ಪ್ರಸನ್ನ ನಿರ್ದೇಶನ ಮಾಡುತ್ತಿದ್ದಾರೆ. ಅನೇಕ ಚಿತ್ರಗಳಿಗೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ ಅನುಭವ ಇವರದ್ದು. ಶ್ಯಾಮ್ ಸುಂದರ್ ಮತ್ತು ಅಕ್ಷಯ್ ಕುಮಾರ್ ಚಿತ್ರಕಥೆಯಲ್ಲಿ ವಿಷ್ಣು ಪ್ರಸನ್ನ ಅವರಿಗೆ ಸಹಾಯವನ್ನು ಮಾಡಿದ್ದಾರೆ. ಮದನ್ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಚಂದ್ರಮೋಹನ್, ಸಿ.ಎಲ್.ರಮೇಶ್ ರಾಮಚಂದ್ರ, ಪದ್ಮನಾಭನ್ ಮಂಗುದೊಡ್ಡಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಜಿ ಜತಿನ್ ದರ್ಶನ್ ಈ ಚಿತ್ರಕ್ಕೆ ಸಂಗೀತವನ್ನು ನೀಡುವ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.
ಇನ್ನೂ ರಂಗಭೂಮಿಯನ್ನೇ ಉಸಿರಾಗಿಸಿಕೊಂಡು ಬದುಕಿರುವ ಸ್ಟೆಪ್ ಅಫ್ ಲೋಕಿ ಈ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರ ಕಥೆಯನ್ನು ಬರೆದ್ದಿದ್ದು ಇವರೇ. ಇವರನ್ನು ಹೊರತು ಪಡಿಸಿದರೆ ಟಗರು ಚಿತ್ರದ ಮೂಲಕ ಕರುನಾಡಿನೆಲ್ಲೆಡೆ ಕಾನ್‌ಸ್ಟೇಬಲ್ ಸರೋಜಾ ಎಂದೇ ಜನಪ್ರಿಯರಾದ ಸರೋಜಾ ಅಲಿಯಾಸ್ ಋಷಿಕಾ ರಾಜ್ ಕೂಡ ಇದ್ದಾರೆ. ಅಧ್ಯಕ್ಷ ಖ್ಯಾತಿಯ ಆರೋಹಿತಾ ಗೌಡ ಕೂಡ ಇದ್ದಾರೆ. ಒವರ ಜೊತೆ ಬಲ ರಾಜ್ ವಾಡಿ, ರಘು ರಾಮನಕೊಪ್ಪ, ನವೀನ್ ಸಾಗರ್, ಪ್ರತಾಪ್ ನನಸು, ಆದಿ ಕೇಶವ ರೆಡ್ಡಿ, ಭೀಷ್ಮಾ ರಾಮಯ್ಯ, ವಿಜಯ್ ರಾಜ್, ಪ್ರಸಾದ್ ಮತ್ತು ಅಂಬು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಸದ್ಯಕ್ಕೆ ಜಲಂಧರ ಚಿತ್ರದ ಹಾಡುಗಳ ಹಕ್ಕುಗಳನ್ನು ಜಂಕಾರ್ ಆಡಿಯೋ ಸಂಸ್ಥೆ ಖರೀದಿ ಮಾಡುವ ಮೂಲಕ ಈ ನವತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಆಡಿಯೋ ಹಕ್ಕು ಬಿಕರಿಯಾದ ಖುಷಿಯಲ್ಲಿರುವ ಚಿತ್ರತಂಡ ಒಂದಾದ ಮೇಲೊಂದರಂತೆ ಸುದ್ದಿಗಳನ್ನು ಹಂಚಿಕೊಳ್ಳುವ ಮೂಲಕ ಪ್ರಚಾರದ ಮೈದಾನಕ್ಕೆ ಕೂಡ ಸದ್ಯದಲ್ಲಿ ಕಾಲಿಡಲು ಮುಂದಾಗಿದೆ. ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.


Click it and Unblock the Notifications











