''ದರ್ಶನ್ ಅವರಿಗೆ ಈಗ ವೈರಲ್ ಫೀವರ್ ಇದೆ'' - ಕೋರ್ಟ್ ನಲ್ಲಿ ಇಂದು ಆಗಿದ್ದೇನು..?
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ದರ್ಶನ್ ಸದ್ಯಕ್ಕೆ ಅತ್ಯುತ್ತಮ ಉದಾಹರಣೆ.
ಸ್ಯಾಂಡಲ್ ವುಡ್ ಏಕ ಚಕ್ರಾಧಿಪತಿ.. ಬಾಕ್ಸ್ ಆಫೀಸ್ ಸುಲ್ತಾನ್.. ಚಾಲೆಂಜಿಂಗ್ ಸ್ಟಾರ್.. ಹೀಗೆ ಹತ್ತಾರು ಬಿರುದು ಬಾವಲಿಗಳನ್ನು ಹೊಂದಿರುವ ದರ್ಶನ್, ಜೈಲು ಹಕ್ಕಿಯಾಗುವ ಮುನ್ನ ಸುಖದ ಸುಪ್ಪತ್ತಿಗೆ ಅಲ್ಲಿದ್ದರು. ಹಿಂದೆ-ಮುಂದೆ ಇವರನ್ನು ಕಾಯಲೆಂದೇ ಒಂದು ಡಜನ್ ಜನರಿರುತ್ತಿದ್ದರು. ಇನ್ನೂ.. ಸಿಹಿ..ಹುಳಿ..ಕಹಿ..ಉಪ್ಪು.. ಬಾಯಿ ರುಚಿಯನ್ನೂ ಹೆಚ್ಚಿಸುತ್ತಿದ್ದವು. ಆದರೆ ಮಾಡಿಕೊಂಡ ಸಹವಾಸ ಈಗ ತಿನ್ನೋ ಅನ್ನಕ್ಕೂ ಕಲ್ಲು ಹಾಕಿದೆ. ಜೈಲೂಟ ರುಚಿಸುತ್ತಿಲ್ಲ. ಜೈಲಿನ ಆಹಾರದಿಂದ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗುತ್ತಿದೆ. ದೇಹದ ತೂಕ ಕೂಡ ಇಳಿಕೆಯಾಗಿದೆ. ಹೀಗಾಗಿಯೇ.. ಮನೆ ಊಟಕ್ಕಾದರೂ ಅವಕಾಶ ಮಾಡಿಕೊಡಿ ಎಂಬ ಮನವಿಯನ್ನೂ ದರ್ಶನ್ ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ದರ್ಶನ್‌ಗೆ ಮನೆಯಲ್ಲಿ ಪ್ರೀತಿಯಿಂದ ಮಾಡುವ ಅಡುಗೆಯನ್ನು ತಿನ್ನುವ ಯೋಗ ಮಾತ್ರ ಕೂಡಿ ಬರುತ್ತಿಲ್ಲ.

ಹೌದು, ಮನೆ ಊಟ ಕೊಡುವಂತೆ ದರ್ಶನ್ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಇಂದು 24 ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆದಿದೆ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ವಿಶ್ವನಾಥ್.ಸಿ. ಗೌಡರ್ ಎರಡು ಕಡೆಯ ವಾದ-ಪ್ರತಿವಾದವನ್ನು ಆಲಿಸಿದ್ದಾರೆ. ಜುಲೈ 25 ಕ್ಕೆ ಆದೇಶ ಕಾಯ್ದಿರಿಸಿದ್ದಾರೆ.
ಮೊದಲಿಗೆ ನ್ಯಾಯಾಲಯದಲ್ಲಿ ದರ್ಶನ್ ಪರ ವಾದ ಮಂಡನೆ ಮಾಡಿದ ವಕೀಲ ರಾಘವೇಂದ್ರ ಅವರು, ಸೆಕ್ಷನ್ 30ರ ಪ್ರಕಾರ ಜೈಲಿನಲ್ಲಿ ಇರುವ ಆರೋಪಿ ಮನೆಯ ಊಟ ಪಡೆಯಬಹುದು. ಅಲ್ಲದೇ ಮನೆಯಿಂದ ಹಾಸಿಗೆ ವ್ಯವಸ್ಥೆ ಮತ್ತು ಪುಸ್ತಕಗಳನ್ನು ಹೊಂದುವ ಅವಕಾಶ ಇದೆ . ಈ ಎಲ್ಲಾ ಅವಕಾಶಗಳನ್ನು ಆರೋಪಿಗಳಿಗೆ ಒದಗಿಸಿಕೊಡಬಹುದು ಎಂದಿದ್ದಾರೆ. ಇದು ವಿಚಾರಣಾಧೀನ ಕೈದಿಯ ಹಕ್ಕು. ಜೈಲಿನ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಆರೋಪಿಗೆ ಕೆಲವೊಂದು ನಿಬಂಧನೆಗಳನ್ನು ಹೇಳಿ ಅವಕಾಶ ಕೊಡಿಸಬಹುದು. ತಮ್ಮದೇ ವೆಚ್ಚದಲ್ಲಿ ಇದನ್ನು ಪಡೆಯಲು ಅವಕಾಶವನ್ನು ಹೊಂದಿಸಲಾಗಿದೆ ಎಂಬ ವಾದ ಮಾಡಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಪ್ರಕರಣವನ್ನೂ ಉದಾಹರಣೆಯನ್ನಾಗಿ ನೀಡಿದ ಲಾಯರ್ ರಾಘವೇಂದ್ರ, ಚಾರ್ಲ್ಸ್ ಶೋಭರಾಜ್‌ಗೆ ಕೂಡ ಮನೆಯ ಊಟ ಕಲ್ಪಿಸಲಾಗಿತ್ತು. ಯಾವಾಗ ಆರೋಪಿ, ಅಪರಾಧಿ ಎಂದು ಕೋರ್ಟ್ ಶಿಕ್ಷೆ ನೀಡುತ್ತದೋ ಅಲ್ಲಿಯವರೆಗೆ ಈ ಎಲ್ಲಾ ಅವಕಾಶವನ್ನು ಬಳಸಿಕೊಳ್ಳಬಹುದು ಎಂದಿದ್ದಾರೆ. ಇದು ವಿಚಾರಣಾಧೀನ ಕೈದಿಯ ಹಕ್ಕು ಎಂದಿದ್ದಾರೆ. ಮರಣ ದಂಡನೆ ಹೊಂದಿದ ಅಪರಾಧಿಗೂ ಕೆಲ ಅವಕಾಶ ಇದೆ. ಅಲ್ಲದೇ ದರ್ಶನ್ ಅವರು ಸಿನಿಮಾದ ನಟರಾಗಿರುವ ಕಾರಣ ಅತಿ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಹೀಗಾಗಿ ಜೈಲಿನ ಅಧಿಕಾರಿಗಳು ಮನೆಯ ಊಟವನ್ನು ನೀಡುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇದರಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಕೂಡ ರಾಘವೇಂದ್ರ ಅವರು ವಾದ ಮಂಡಿಸಿದ್ದಾರೆ.
ಇನ್ನೂ ಪೊಲೀಸರ ಪರ ವಾದ ಮಂಡಿಸಿದ ವಕೀಲರಾದ ಎಸ್ಪಿಪಿ ಪ್ರಸನ್ನ ಕುಮಾರ್ ಆಹಾರ ಅಜೀರ್ಣವಾಗುತ್ತಿದೆ. ಪುಡ್ ಪಾಯಿಸನ್ ಆಗಿದೆ, ಭೇದಿ ಆಗುತ್ತಿದೆ ಎಂದು ಮೆಡಿಕಲ್ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಆದರೆ ಒಂದು ಒಂದು ಬಾರಿಯೂ ಭೇದಿ ಆಗಿದೆ ಎಂದು ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆದಿಲ್ಲ ಎಂದಿದ್ದಾರೆ. ಇನ್ನೂ.. ದರ್ಶನ್ ಅವರು ಮುರಿದಿರುವ ಕೈ ಬಗ್ಗೆ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಅವರಿಗೆ ಈಗ ವೈರಲ್ ಫೀವರ್ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲಿ ದರ್ಶನ್ ಅವರಿಗೆ ಮೂರು ತಿಂಗಳ ಹಿಂದೆ ಆರ್ಥೋ ಅಪರೇಷನ್ ಆಗಿತ್ತು. ಜೈಲಿನಲ್ಲಿ ಬಂದಾಗ ಅದರ ನೋವು ಪ್ರಾರಂಭವಾಗಿದ್ದು ಇದಕ್ಕೆ ಎಕ್ಸ್ ರೇ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ ಪ್ರಸನ್ನ ಕುಮಾರ್.

ಜೈಲಿನ ನಿಯಮಗಳ ಪ್ರಕಾರ ಮನೆಯ ಊಟ ಎನ್ನುವುದರ ಬಗ್ಗೆ ಉಲ್ಲೇಖ ಇಲ್ಲ. ಅನಾರೋಗ್ಯದ ಸಮಯದಲ್ಲಿ ಮಾತ್ರ ವಿಶೇಷ ಊಟ ನೀಡಬಹುದು ಹೊರತು ಮನೆಯ ಊಟವನ್ನೇ ನೀಡಬೇಕು ಎಂದು ಎಲ್ಲೂ ಉಲ್ಲೇಖ ಮಾಡಿಲ್ಲ. ಅನಾರೋಗ್ಯದ ವೇಳೆ ವಿಶೇಷ ಕಾಳಜಿ ಆಹಾರ ನೀಡಬೇಕು. ವಾರದಲ್ಲಿ ಒಮ್ಮೆ ಮಾತ್ರ ಮಾಂಸಾಹಾರದ ಊಟ ಕೊಡಬಹುದು. ಅದನ್ನು ಬಿಟ್ಟು ಪ್ರತಿ ದಿನ ಬಿರಿಯಾನಿ ತಿನ್ನಬೇಕು ಎಂದರೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಊಟವನ್ನು ನೀಡುವಂತೆ ಇಲ್ಲ ಎಂದು ಪ್ರತಿವಾದ ಮಂಡಿಸಿದ್ದಾರೆ. ಆರೋಪಿಗೆ ಭೇದಿ ಆಗುತ್ತಿದ್ದರೆ ಉಪ್ಪು ಖಾರ ಇಲ್ಲದ ಸಾತ್ವಿಕ ಆಹಾರ ನೀಡಬೇಕು. ಕುಡಿಯಲು ಬಿಸಿ ನೀರು ಬೇಕು ಅಂದರೆ ಜ್ವರ ಇದ್ದಾಗ ಮಾತ್ರ ನೀಡ್ತಾರೆ. ಅದನ್ನ ಬಿಟ್ಟು ಪ್ರತಿ ದಿನ ಸ್ನಾನ ಮಾಡಲು ಬಿಸಿ ನೀರು ಕೊಡಲು ಸಾಧ್ಯವಿಲ್ಲ. ಅನಾರೋಗ್ಯ ಇದ್ದರೆ 15 ದಿನ ಮಾತ್ರ ವಿಶೇಷವಾಗಿ ಅವಕಾಶ ನೀಡಬಹುದು ಎಂದಿದ್ದಾರೆ
ಜೈಲು ಕೈಪಿಡಿಯಲ್ಲಿ ಮನೆ ಊಟಕ್ಕೆ ಅವಕಾಶವಿಲ್ಲ. ಬಡವ, ಶ್ರೀಮಂತ, ಹೀರೋ, ಸ್ಟಾರ್ ಎಲ್ಲರೂ ಸಮಾನರೇ. ಸಿನಿಮಾ ಸ್ಟಾರ್ ಎಂದು ತಾರತಮ್ಯ ಮಾಡುವಂತಿಲ್ಲ. ಜೈಲಿನಲ್ಲಿ ಐದು ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಹೀಗಾಗಿ ಈ ಕೇಸಿನಲ್ಲಿ ಯಾವುದೇ ವಿಶೇಷ ವಿನಾಯಿತಿ ನೀಡದಂತೆ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ. ಹೀಗೆ ಎರಡು ಕಡೆಯ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ವಿಶ್ವನಾಥ್.ಸಿ. ಗೌಡರ್ ಎರಡು ಕಡೆಯ ವಾದ-ಪ್ರತಿವಾದವನ್ನು ಆಲಿಸಿ ಜುಲೈ 25 ಕ್ಕೆ ಆದೇಶ ಕಾಯ್ದಿರಿಸಿದ್ದಾರೆ.ಈ ಹಿನ್ನೆಲೆ ಅಲ್ಲಿಯವರೆಗೆ ದರ್ಶನ್ ಮುಂದೆ ಆಯ್ಕೆ ಇಲ್ಲ. ಜೈಲೂಟ ತಿನ್ನದೇ ಬೇರೆ ವಿಧಿಯಿಲ್ಲ.


Click it and Unblock the Notifications











