ಅವತ್ತು ಭಾರತಿ ಅಮ್ಮ ಕಣ್ಣೀರು ಹಾಕಿದ್ರು, ಈಗ ಜಾಗ ತಗೊಳ್ತೀವಿ ಅಂತಾರೆ; ಸುದೀಪ್‌ಗೆ ಟಾಂಗ್ ಕೊಟ್ರಾ ಅನಿರುದ್ಧ್?
ಕನ್ನಡದ ಮೇರು ನಾಯಕ ಡಾ.ವಿಷ್ಣುವರ್ಧನ್. ಆದರೂ ಅವರು ದುರಂತ ನಾಯಕನಾಗಿದ್ದು ಮಾತ್ರ ಈ ನೆಲದ ಬಹುದೊಡ್ಡ ದುರಂತ. ಹೇಳದೇ.. ಕೇಳದೇ.. ಅಸಂಖ್ಯಾತ.. ಅಗಣಿತ ಅಭಿಮಾನಿಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ, ಬೆಲೆ ಕೊಡದೇ..ಅಭಿಮಾನದ ಪ್ರತೀಕದಂತೆ ಇದ್ದ ''ಅಭಿಮಾನ್ ಸ್ಟುಡಿಯೋ''ದಲ್ಲಿನ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಿ ಇಂದಿಗೆ (ಆಗಸ್ಟ್ 17) ಒಂಭತ್ತು ದಿನಗಳಾಗಿವೆ. ಈ ಒಂಭತ್ತು ದಿನದಲ್ಲಿ ಸಾಹಸಸಿಂಹ ವಿಷ್ಣುವರ್ಧನ್..
ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಹಲವರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ವಿಷ್ಣುವರ್ಧನ್ ಅವರ ಭಕ್ತನಾದ ಕಿಚ್ಚ ಸುದೀಪ್ ಕೂಡ ಕೆರಳಿ ಕೆಂಡವಾಗಿದ್ದಾರೆ. ಜಾಗ ಖರೀದಿ ಮಾಡುವ ಮಾತುಗಳನ್ನೂ ಕೂಡ ಆಡಿದ್ದಾರೆ. ಸುದೀಪ್ ಅವರ ಈ ಮಾತುಗಳಿಗೆ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ದ್ ಈಗ ಪರೋಕ್ಷವಾಗಿ ತಿರುಗೇಟು ನೀಡಿದ್ದಾರಾ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ.

ಹೌದು, ಅಸಲಿಗೆ ವಿಷ್ಣುವರ್ಧನ್ ಅವರ ಅಭಿಮಾನಿಗಳನ್ನು ಉದ್ದೇಶಿಸಿ ಅನಿರುದ್ಧ್ ಇಂದು ಸಭೆ ಕರೆದಿದ್ದರು. ಈ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿರುವ ಅನಿರುದ್ಧ್ ''ಅಭಿಮಾನ್ ಸ್ಟುಡಿಯೋ''ದಲ್ಲಿ ಜಾಗ ತಗೊಂಡು ನಾವು ಸ್ಮಾರಕ ನಿರ್ಮಾಣ ಮಾಡ್ತೇವೆ ಎಂದು ಕೆಲವರು ಹೇಳ್ತಿದ್ದಾರೆ. ಅದು ಆದರೆ ತುಂಬಾ ಸಂತೋಷ. ಆದರೆ ಆರೂವರೆ ವರ್ಷ ನಾವೇ ಪ್ರಯತ್ನ ಮಾಡಿದ್ದೇವೆ. ನಮ್ಮ ಹಿಂದೆ ಅವತ್ತು ರಾಜ್ಯ ಸರ್ಕಾರ ನಿಂತಿತ್ತು. ಮಾನ್ಯ ಮುಖ್ಯಮಂತ್ರಿಗಳು ನಿಂತಿದ್ದರು ಆದರೂ ಕೂಡ ಅದು ಆಗಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಒಂದು ಸಲ ''ಕಂಠೀರವ ಸ್ಟುಡಿಯೋ''ದಲ್ಲಿ ಸಭೆ ನಡೆದಿತ್ತು. ಅಲ್ಲಿ ಬಾಲಣ್ಣನವರ ಕುಟುಂಬದವರು ಇದ್ದರು.ಕೆಲವು ಅಧಿಕಾರಿಗಳಿದ್ದರು. ಆಗ 'ನಮ್ಮ ಯಜಮಾನ್ರ ಸ್ಮಾರಕ ನಿರ್ಮಾಣಕ್ಕೆ ದಯವಿಟ್ಟು ಸಹಕರಿಸಿ ಎಂದು ಕೈ ಮುಗಿದು ಭಾರತಿ ಅಮ್ಮ ಕಣ್ಣೀರು ಹಾಕಿದ್ದರು' ಆದರೂ ಕೂಡ ಆಗಲಿಲ್ಲ ಎಂದು ಹೇಳಿದ್ದಾರೆ.

ಇಷ್ಟೊಂದು ಅವಮಾನಗಳನ್ನು ಸಹಿಸಿಕೊಂಡು ಪ್ರಯತ್ನಗಳನ್ನು ಮಾಡಿದರು ಕೂಡ 2016ರಲ್ಲಿ ಬಾಲಣ್ಣ ಅವರ ಮಗ ಗಣೇಶ್ ಒಂದು ವಾಹಿನಿಯಲ್ಲಿ ಕುಳಿತುಕೊಂಡು ಭಾರತಿ ಅಮ್ಮ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದರು. ಹೀಗಾಗಿಯೇ ಅವತ್ತೇ ಆ ಜಾಗಕ್ಕೆ ಕಾಲಿಡದಿರಲು ನಾವು ನಿರ್ಧಾರ ಮಾಡಿದೆವು ಎಂದು ಹೇಳಿರುವ ಅನಿರುದ್ದ್ ಅವತ್ತು ಅಮ್ಮ ಕೋಪ ಮಾಡಿಕೊಂಡು ನಾನು ಹೋಗಲ್ಲ ಆ ಮಂಟಪನು ಅಲ್ಲಿರಬಾರದು ಎಂದು ತೆಗೆಸಿ ಬಿಟ್ಟಿದ್ದರೆ ? ತೆಗೆಸಬಹುದಾಗಿತ್ತು ತಾನೆ ? ಯಾಕೆ ತೆಗೆದಿಲ್ಲ ? ಅಭಿಮಾನಿಗಳಿಗೋಸ್ಕರ ನಾವು ಅದನ್ನು ತೆಗೆದಿರಲಿಲ್ಲ ಎಂದು ಹೇಳಿದ್ದಾರೆ.
2016ರಿಂದ 2025 ಒಂಭತ್ತು ವರ್ಷ ಆಯ್ತು ಇದುವರೆಗೆ ಯಾಕೆ ಅದನ್ನು ಇನ್ನೂ ಯಾರು ಖರೀದಿ ಮಾಡಲಿಲ್ಲ ? ಆ ಜಾಗ ಕೊಂಡುಕೊಂಡು ಯಾಕೆ ಸ್ಮಾರಕ ನಿರ್ಮಾಣ ಮಾಡಲಿಲ್ಲ ? ಮೂರು ವರ್ಷದ ಹಿಂದೆ ಅಭಿಮಾನಿಗಳು ನ್ಯಾಯಾಲಯದ ಮೊರೆ ಹೋದರು ಆದರೆ ನಾವು ನ್ಯಾಯಾಲಯಕ್ಕೆ ಮನವಿಯನ್ನು ಮಾಡಲು ಆಗಲ್ಲ ಯಾಕೆಂದರೆ ಸರ್ಕಾರ ನಮಗೆ ಮೈಸೂರಿನಲ್ಲಿ ಆದ ನಂತರ ಮತ್ತೊಂದು ಜಾಗವನ್ನು ಕೇಳಬೇಡಿ ಎಂದು ಸೂಚನೆಯನ್ನು ನೀಡಿತ್ತು ಎಂದು ಹೇಳಿರುವ ಅನಿರುದ್ಧ್ ಯಾರಾದರೂ ಮಾಡ್ತೀನಿ ಅಂತ ಈಗ ಹೇಳಬಹುದೇನೋ ಆದರೆ ಅದು ರಾಜ್ಯ ಸಭೆಯಲ್ಲಿ ಪಾಸ್ ಆಗಬೇಕಲ್ಲ ವಿಧಾನ ಸಭೆಯಲ್ಲಿ ಪಾಸಾಗಬೇಕಲ್ಲ ? ಎಂದು ಪ್ರಶ್ನೆ ಮಾಡಿದ್ದಾರೆ. ಒಬ್ಬರಿಗೆ ಎರಡು ಜಾಗಾನಾ ? ಆಗಲ್ಲ ಅದು ಎಂದು ಹೇಳಿದ್ದಾರೆ.
ಒಂಭತ್ತು ವರ್ಷ ಸ್ಮಾರಕ ಕಟ್ಟಲಿಲ್ಲ ಸರಿ ಇನ್ಮುಂದೆ ಮಾಡೋ ತರ ಇದ್ದರೆ ನಮ್ಮ ಸಹಕಾರ ಇರುತ್ತೆ ಆದರೆ ನಾವು ಸರ್ಕಾರದ ಬಳಿ ಕೇಳಲು ಆಗಲ್ಲ ಎಂದಿರುವ ಅನಿರುದ್ಧ್ ನೀವು ಮಾಡಿದರೆ ನಮಗೆ ತುಂಬಾ ಸಂತೋಷ ಅದು ಆದರೆ ತುಂಬಾ ಸಂತೋಷ ಎಂದು ಹೇಳಿದ್ದಾರೆ.


Click it and Unblock the Notifications











