ದರ್ಶನ್ ಹುಟ್ಟಿದ ಹಬ್ಬಕ್ಕೆ ಬಿಡುಗಡೆಯಾಗುತ್ತಾ ಡೆವಿಲ್ ಫಸ್ಟ್ ಲುಕ್ ? ಸರ್ಪ್ರೈಸ್ ಕೊಡ್ತಾರಾ ಪ್ರೇಮ್ ?
ಕರ್ನಾಟದಲ್ಲಿ ಅತೀ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅಭಿಮಾನಿಗಳ ಪಾಲಿಗೆ ಅವರ ಪ್ರತೀ ಸಿನಿಮಾಗಳೂ ಹಬ್ಬವೇ. ಆದರೆ ದರ್ಶನ್ ಹುಟ್ಟುಹಬ್ಬ ಅಂದರೆ ಸಂಭ್ರಮ ಮುಗಿಲು ಮುಟ್ಟಿರುತ್ತೆ. ಇದಕ್ಕೆ ಎಲ್ಲರೂ ತಿಂಗಳಿಗೆ ಮುಂಚಿತವಾಗಿಯೇ ರೆಡಿಯಾಗುತ್ತಾ ಅದನ್ನೊಂದು ಉತ್ಸವದಂತೆಯೇ ನಡೆಸೋ ಪರಿಪಾಠ ನಡೆದುಕೊಂಡು ಬಂದಿದೆ.
ಇನ್ನೂ ಸಾಮಾನ್ಯಕ್ಕೆ ಸೂಪರ್ ಸ್ಟಾರ್ ಗಳ ಹುಟ್ಟುಹಬ್ಬದ ಪ್ರಯುಕ್ತ, ಅವರ ಅಭಿಮಾನಿಗಳಿಗೆ ಥರೇವಾರಿ ಉಡುಗೊರೆಯನ್ನ ನೀಡುವ ಸಂಪ್ರದಾಯವೂ ಇದೆ. ಈ ಕಾರಣಕ್ಕೆ ದರ್ಶನ್ ಅವರ ಅಗಣಿತ ಅಭಿಮಾನಿಗಳಿಗೆ ಈ ಬಾರಿ ಯಾವೆಲ್ಲ ಗಿಫ್ಟುಗಳು ಸಿಗಲಿವೆ ಎಂಬ ಕುತೂಹಲ ಕೂಡ ಇದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿನಯದ ಮುಂದಿನ ಸಿನಿಮಾ ಡೆವಿಲ್ ಕುರಿತು ಪ್ರಶ್ನೆ ಕಾಣ್ತಿವೆ. ಡೆವಿಲ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುವ ನಿರೀಕ್ಷೆ ಕೂಡ ಅಭಿಮಾನಿಗಳಲ್ಲಿದೆ.

ಇನ್ನೂ ಡೆವಿಲ್ ಚಿತ್ರದ ನಾಯಕಿಯ ಬಗ್ಗೆ ಈಗಾಗ್ಲೇ ಅನೇಕ ಚರ್ಚೆಗಳಾಗಿವೆ. ಕರಾವಳಿಯ ಬೆಡಗಿ ರಚನಾ ರೈ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಡೆವಿಲ್ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ರಚನಾ ರೈ ಅವರ ಹಿಂಬಾಲಕರ ಸಂಖ್ಯೆಯನ್ನೂ ಹೆಚ್ಚಿಸಿದೆ. ಆದರೆ ನಾಯಕಿ ಆಯ್ಕೆಯಾದ ವಿಚಾರ ನಿರ್ದೇಶಕ ಮಿಲನಾ ಪ್ರಕಾಶ್ ತಳ್ಳಿ ಹಾಕಿದ್ದಾರೆ. ಹೀಗಾಗಿ ಫೆಬ್ರವರಿ 16ಕ್ಕೆ ನಾಯಕಿಯ ಹೆಸರು ಕೂಡ ಅಧಿಕೃತವಾಗಿ ಹೊರಬೀಳುವ ಸಾಧ್ಯತೆ ಇದೆ.
ಡೆವಿಲ್ ಚಿತ್ರವನ್ನ ಹೊರತು ಪಡಿಸಿದರೆ, ದರ್ಶನ್, ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿಯೂ ಕೂಡ ನಟಿಸಲಿದ್ದಾರೆ. ಹೀಗಾಗಿ ಪ್ರೇಮ್ ಅವರ ಮೇಲೆ ಕೂಡ ಅನೇಕ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಪ್ರೇಮ್ ಯಾವುದಾದರೊಂದು ಸರ್ಪ್ರೈಸ್ ನೀಡಬಹುದು ಎಂದು ಆಸೆಗಣ್ಣಿನಿಂದ ಕಾದು ಕುಳಿತಿದ್ದಾರೆ.

ಇನ್ನೂ ಪ್ರೇಮ್ ನಿರ್ದೇಶನದಲ್ಲಿ ಸಿದ್ಧವಾಗ್ತಿರುವ ಕೆ.ಡಿ ಚಿತ್ರದ ಅಂಗಳದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸಂಜಯ್ ದತ್ ಭೇಟಿ ನಡೆದಿದೆ. ದರ್ಶನ್ ಹಾಗೂ ಪ್ರೇಮ್ ಜೋಡಿ ಮಾಡಲು ಹೊರಟಿರುವ ಚಿತ್ರದಲ್ಲಿ ಸಂಜಯ್ ದತ್ ಕೂಡ ಇರಲಿದ್ದಾರಾ ಎಂಬ ಕುತೂಹಲ ಕೂಡ ಗರಿಗೆದರಿದೆ. ಬರ್ತ್ ಡೇ ಹೊತ್ತಿಗೆ ಈ ವಿಚಾರದಲ್ಲಿಯೂ ಕೂಡ ಒಂದು ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ.
ಇನ್ನೂ ದರ್ಶನ್ ಅವರ ಕಾಲ್ ಶೀಟ್ ಗಾಗಿ ಯಾರೆಲ್ಲ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂಬ ವಿಚಾರದಲ್ಲಿ ಕೂಡ ಸುಳಿವು ಸಿಗುವ ನಿರೀಕ್ಷೆ ದರ್ಶನ್ ಅವರ ಅಭಿಮಾನಿಗಳಲ್ಲಿದೆ. ಮಿಲನಾ ಪ್ರಕಾಶ್ ಹಾಗೂ ಪ್ರೇಮ್ ಅವರನ್ನ ಹೊರತು ಪಡಿಸಿ ಭವಿಷ್ಯತ್ಕಾಲದಲ್ಲಿ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳುವ ನಿರ್ದೇಶಕರು ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಗುವ ಆಶಾಭಾವನೆ ದರ್ಶನ್ ಅವರ ಅಭಿಮಾನಿಗಳಲ್ಲಿ ಹಾಗೂ ಗಾಂಧಿನಗರಕ್ಕೆ ಇದೆ.

ಮಿಕ್ಕಂತೆ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಬಿಗ್ ಬಾಸ್ ಖ್ಯಾತಿಯ ಈಶಾನಿ ಹಾಡೊಂದನ್ನ ಉಡುಗೊರೆಯನ್ನಾಗಿ ನೀಡಲಿದ್ದಾರೆ. ಡಿಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಸಂಜು ಬಸಯ್ಯನವರು ಇದೇ ತಿಂಗಳು 11ರಂದು ವಿಶೇಷ ಹಾಡು ಬಿಡುಗಡೆ ಮಾಡಲಿದ್ದಾರೆ.
ಒಟ್ಟಿನಲ್ಲಿ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹತ್ತು ಹಲವು ಉಡುಗೊರೆಗಳು ಸಿಗುವ ನಿರೀಕ್ಷೆ ಇದೆ. ಅಭಿಮಾನಿಗಳು ಕೂಡ ವರ್ಷಕ್ಕೆ ಒಂದು ಸಲ ಹುಟ್ಟುಹಬ್ಬದ ನೆಪದಲ್ಲಿ ಸಿಗುವ ದರ್ಶನ್ ಅವರನ್ನ ಭೇಟಿಯಾಗಲು ಕಾದು ಕೂತಿದ್ದಾರೆ.


Click it and Unblock the Notifications











