ಅನ್ನ, ಅನ್ನ, ಅನ್ನ, ವಿಜಯಲಕ್ಷ್ಮಿ ಮನೆಯ ಅನ್ನದ ಅಗಳಿನ ಮೇಲಿಲ್ಲ ದರ್ಶನ್ ಹೆಸರು..!
ದರ್ಶನ್ ಜೈಲು ಪಾಲಾಗಿ ಒಂದಲ್ಲ, ಎರಡು ತಿಂಗ್ಳಾಗಿವೆ. ಈ ಎರಡು ತಿಂಗಳಿನಲ್ಲಿ ಅವರನ್ನು ಹೊರ ತರುವ ಅನೇಕ ಪ್ರಯತ್ನಗಳಾಗಿವೆ. ಆದರೆ, ಫಲಿತಾಂಶ ಶೂನ್ಯ. ಜೈಲಾಚೆ ಕರೆತರುವುದು ಇರಲಿ ದರ್ಶನ್ ಗೆ ಮನೆಯ ರುಚಿ ಮತ್ತು ಶುಚಿಯಾದ ಊಟ ತಿನ್ನುವ ಸೌಭಾಗ್ಯ ಕೂಡ ಸಿಕ್ತಿಲ್ಲ. ಇದರಿಂದ ಮನ ನೊಂದು ದರ್ಶನ್, ಮನೆಯ ಅನ್ನಕ್ಕೆ ಅರ್ಜಿ ಸಲ್ಲಿಸುತ್ತಾನೇ ಇದ್ದಾರೆ. ಆದರೆ ವಿಜಯಲಕ್ಷ್ಮೀ ದರ್ಶನ್ ಮನೆಯ ಅನ್ನದ ಅಗಳಿನ ಮೇಲೆ ದರ್ಶನ್ ಹೆಸರು ಇದ್ದಂತೆ ಇಲ್ಲ. ಇದಕ್ಕೆ ಪೂರಕವಾಗಿ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಾನೇ ಇದೆ
ಹೌದು, ಮನೆಯ ಅನ್ನಕ್ಕೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು. ಈ ಸಮಯದಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಸಮ್ಮುಖದಲ್ಲಿ ದರ್ಶನ್ ಪರ ವಕೀಲ ಪ್ರಭುಲಿಂಗ ನಾವದಗಿ ಮತ್ತು ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಇದ್ದರು. ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಕೂಡ ಇದ್ದರು.

ಈ ಸಮಯದಲ್ಲಿ ವೈದ್ಯಾಧಿಕಾರಿಗಳು ದರ್ಶನ್ ಅವರಿಗೆ ಮನೆ ಊಟ ನಿರಾಕರಿಸಿದ್ದಾರೆ ಎಂದು ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಹೇಳಿದರು. ಇದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿರುವುದಾಗಿ ಹೇಳಿದರು. ಇದಕ್ಕೆ ದರ್ಶನ್ ಪರ ವಕೀಲರಾದ ಸಂಜೀವಿನಿ ನಾವದಗಿ ಅವರು ವೈದ್ಯಾಧಿಕಾರಿಗಳ ವರದಿ ನೋಡಿ ವಾದಮಂಡನೆಗೆ ಸಮಯ ಬೇಕಾಗುತ್ತೆ ಎಂದರು. ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ಮನವಿಯನ್ನೂ ಮಾಡಿಕೊಂಡರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ಎಂ.ನಾಗಪ್ರಸನ್ನ ವಿಚಾರಣೆಯನ್ನು ಸೆಪ್ಟೆಂಬರ್ 5ರಂದು ಮುಂದೂಡಿದರು.
ಅಂದ್ಹಾಗೇ ಈ ಹಿಂದೆ ದರ್ಶನ್ ಪರ ಸಿವಿ ನಾಗೇಶ್ ವಾದ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇಂದು ಸಂಜೀವಿನಿ ನಾವದಗಿ ದರ್ಶನ್ ಪರ ವಾದ ಮಂಡಿಸಿದರು. ಇನ್ನೂ ದರ್ಶನ್ ಪರ ವಕಲಾತ್ತು ವಹಿಸಲು ಸಿ.ವಿ.ನಾಗೇಶ್ ಹಿಂದೇಟು ಹಾಕಿದ್ಧಾರೆ ಎಂಬ ಸುದ್ದಿ ಇಂದು ಬೆಳ್ಳಿಗ್ಗೆಯಿಂದ ಚಾಲ್ತಿಯಲ್ಲಿದೆ. ಪತಿಯನ್ನು ಶತಾಯು ಗತಾಯು ಹೊರ ಕರೆತರಬೇಕೆಂದು ಶಪಥ ಮಾಡಿರುವ ವಿಜಯಲಕ್ಷ್ಮಿ ಸಿ.ಎಚ್.ಹನುಮಂತರಾಯಪ್ಪ ಅವರನ್ನು ಸಂಪರ್ಕ ಮಾಡಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ. ಇದೆಲ್ಲದಕ್ಕೆ ಪೂರಕವಾಗಿ ಇಂದು ಸಂಜೀವಿನಿ ನಾವದಗಿ ವಾಧ ಮಂಡಿಸಿದ್ಧಾರೆ. ಈ ಹಿನ್ನೆಲೆ ದರ್ಶನ್ ಪರ ವಾದ ಮಾಡುವವರು ಯಾರು ಎನ್ನುವ ಗೊಂದಲ ಈಗ ಅನೇಕರನ್ನು ಕಾಡುತ್ತಿದೆ.

ಉಳಿದಂತೆ ದರ್ಶನ್ ನ್ಯಾಯಾಂಗ ಬಂಧನವನ್ನು ಆಗಸ್ಟ್ 28ರವರೆಗೆ ವಿಸ್ತರಿಸಲಾಗಿದೆ. ಕಳೆದ ವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿದೆ. ಈಗ ಮನೆಯ ಊಟದ ಅರ್ಜಿ ವಿಚಾರಣೆ ಸೆಪ್ಟೆಂಬರ್ 05ಕ್ಕೆ ಮುಂದೂಡಲಾಗಿದೆ. ಈ ಮೂಲಕ ಇನ್ನೆರಡು ವಾರ ದರ್ಶನ್‌ಗೆ ಜೈಲೂಟವೇ ಗತಿಯಾಗಿದೆ. ಇನ್ನೂ ಇದೆಲ್ಲದರ ನಡುವೆ ಈ ಕಡೆ ಪವಿತ್ರಾ ಗೌಡ ಪರ ವಕೀಲರು ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದು, ವಿಚಾರಣೆ ಶೀಘ್ರದಲ್ಲಿಯೇ ನಡೆಯುವ ನಿರೀಕ್ಷೆ ಇದೆ.


Click it and Unblock the Notifications











