ದರ್ಶನ್‌ಗೆ ಇಂದು ಮಹತ್ವದ ದಿನ, ಅಭಿಮಾನಿಗಳ ಜೊತೆ ಆಚರಿಸುತ್ತಾರಾ ದೀಪಾವಳಿ..?
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾಗಿರಲಿಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್ ಆಗಿತ್ತು. ಆದರೆ ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಜೈಲು ಪಾಲಾಗಿ ಒಂದಲ್ಲ, ಎರಡಲ್ಲ, ನಾಲ್ಕು ತಿಂಗಳಾಗಿವೆ. ಈ ನಾಲ್ಕು ತಿಂಗಳಿನಲ್ಲಿ ದರ್ಶನ್ ಅವರನ್ನು ಹೊರ ತರುವ ಪ್ರಯತ್ನಗಳು ಕೂಡ ನಡೆದಿವೆ. ಆದರೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. 57 ಸಿಸಿಎಚ್ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಜಾ ಆಗಿದೆ. ಈ ಹಿನ್ನೆಲೆ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇವತ್ತು ಜಾಮೀನು ಸಿಗುತ್ತೆ ಎನ್ನುವ ವಿಶ್ವಾಸದಲ್ಲಿ ಇದ್ದಾರೆ.
ಹೌದು, ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 22ರಂದು ನಡೆಸಿದ್ದ ಹೈಕೋರ್ಟ್‌ನ ನ್ಯಾಯ ಮೂರ್ತಿ ವಿಶ್ವಜಿತ್ ಶೆಟ್ಟಿ ಇಂದು ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದರು. ದರ್ಶನ್ ಅವರ ಆರೋಗ್ಯದ ಕುರಿತು ಮೆಡಿಕಲ್ ರಿಪೋರ್ಟ್ ಸಲ್ಲಿಸುವಂತೆ ಬಳ್ಳಾರಿ ಜೈಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು. ಈ ಹಿನ್ನೆಲೆ ದರ್ಶನ್ ಅವರ ವೈದ್ಯಕ್ಕೀಯ ಪರೀಕ್ಷೆಯನ್ನು ಬಳ್ಳಾರಿಯ ಬೀಮ್ಸ್ ವೈದ್ಯರು ಬುಧವಾರ ನಡೆಸಿದ್ದರು. ವೈದ್ಯರು ಕಾರಾಗೃಹದ ಅಧಿಕಾರಿಗಳಿಗೆ ಗುರುವಾರ ವೈದ್ಯಕೀಯ ವರದಿ ಸಲ್ಲಿಸಿದ್ದಾರೆ. ವರದಿ ಆಧಾರದ ಮೇಲೆ ದರ್ಶನ್ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಜೈಲಿನ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಜತೆಗೆ ಕೋರ್ಟ್‌ಗೂ ನಟನ ಆರೋಗ್ಯದ ಬಗ್ಗೆ ವರದಿ ನೀಡಿದ್ದಾರೆ.

ಇನ್ನೂ ದರ್ಶನ್‌ಗೆ ಬೆನ್ನು ನೋವು ಇರುವ ಹಿನ್ನೆಲೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ ಎಂಬ ವಿಚಾರವನ್ನು ಬೀಮ್ಸ್ ವೈದ್ಯರು ವರದಿಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ನ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಶಸ್ತ್ರ ಚಿಕಿತ್ಸೆಗೆ ಬೇಕಾದ ಅಗತ್ಯ ಸೌಲಭ್ಯ ಬಳ್ಳಾರಿಯ ಬೀಮ್ಸ್‌ನಲ್ಲಿರುವುದನ್ನು ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಇಂದು ದರ್ಶನ್ ಅವರ ಈ ಆರೋಗ್ಯ ವರದಿಯನ್ನು ಪರಿಶೀಲನೆ ಮಾಡಲಿರುವ ಹೈಕೋರ್ಟ್ ಆ ನಂತರ ದರ್ಶನ್ ಪರ ವಕೀಲರ ವಾದ ಆಲಿಸಲಿದೆ. ಒಂದು ವೇಳೆ ಚಿಕಿತ್ಸೆ ಪಡೆಯಲು ದರ್ಶನ್ ಗೆ ಜಾಮೀನು ನೀಡಬೇಕೆಂದು ನ್ಯಾಯಾಲಯಕ್ಕೆ ಅನಿಸಿದರೆ ಇಂದು ಜಾಮೀನು ಮಂಜೂರು ಆಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ಜೈಲಿನಲ್ಲಿಯೇ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದರು ನೀಡಬಹುದು.
ಇನ್ನೂ ಹೈಕೋರ್ಟ್‌ನ ಏಕಸದಸ್ಯ ಪೀಠ ಒಂದು ವೇಳೆ ದರ್ಶನ್‌ಗೆ ಇಂದು ಜಾಮೀನು ನೀಡದಿದ್ದರೆ ದರ್ಶನ್‌ಗೆ ದ್ವಿಸದಸ್ಯ ಅಥವಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ. ಇಲ್ಲಿಯೂ ಕೂಡ ಜಾಮೀನು ಸಿಗದಿದ್ದರೆ ದರ್ಶನ್ ತ್ರಿ ಸದಸ್ಯರ ಪೀಠದ ಮುಂದೆ ಕೂಡ ಹೋಗಬಹುದು. ಕೊನೆಯಲ್ಲಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಬಹುದು.
ಒಟ್ನಲ್ಲಿ ಇಂದು ದರ್ಶನ್ ಪಾಲಿಗೆ ನಿರ್ಣಾಯಕ ದಿನ. ಹೈಕೋರ್ಟ್‌ನಲ್ಲಿ ಇಂದು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ದರ್ಶನ್‌ಗೆ ಜೈಲಾ ಬೇಲಾ ಎನ್ನುವುದು ಕೂಡ ನಿರ್ಧಾರವಾಗಲಿದೆ. ತಮ್ಮ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ತಮ್ಮ ಜೊತೆ ದೀಪಾವಳಿ ಹಬ್ಬವನ್ನು ಆಚರಿಸುವಂತಾಗಲಿ ಎಂದು ದರ್ಶನ್ ಅವರ ಭಕ್ತಗಣ ಪ್ರಾರ್ಥನೆಯನ್ನು ಮಾಡುತ್ತಿದೆ. ಸಿಗುತ್ತಾ ಗುಡ್ ನ್ಯೂಸ್..? ಉತ್ತರ ಕೆಲವೇ ಹೊತ್ತಿನಲ್ಲಿ ಗೊತ್ತಾಗಲಿದೆ.


Click it and Unblock the Notifications











