ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದ 'ನಗ್ನ ಸತ್ಯ' ಬಯಲಾಗುತ್ತಾ ?
ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲಿ ಕೂಡ ಸಮಿತಿಯೊಂದನ್ನು ರಚನೆ ಮಾಡಿ ಎಂಬ ಮನವಿಯನ್ನು ಅನೇಕರು ಈ ಹಿಂದೆಯಿಂದ ಮಾಡುತ್ತಾ ಬಂದಿದ್ದರು. ಆದರೆ, ಅದಕ್ಕೆ ಬೆಲೆ ಸಿಕ್ಕಿರಲಿಲ್ಲ. ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂಬ ವಾದಕ್ಕೆ ಬಲ ಸಿಕ್ಕಿರಲಿಲ್ಲ. ಬದಲಿಗೆ ಫಿಲ್ಮ್ ಚೇಂಬರನ್‌ಲ್ಲಿ ನಡೆದ ಸಭೆಯಲ್ಲಿ ಯಾವ ಸಮಿತಿಯ ಅವಶ್ಯಕತೆ ಇಲ್ಲ, ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಯಾವ ಸಮಸ್ಯೆ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.
ಆದರೂ ಮಹಿಳಾ ಆಯೋಗ ಖಡಕ್ ಎಚ್ಚರಿಕೆಯನ್ನು ನೀಡಿದ್ದ ಹಿನ್ನೆಲೆ 15ದಿನದ ಕಾಲವಕಾಶವನ್ನು ವಾಣಿಜ್ಯ ಮಂಡಳಿ ಕೇಳಿತ್ತು. ಆದರೆ .. ತಿಂಗಳಾದರೂ ಆ ಕಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ತಲೆ ಹಾಕಿರಲಿಲ್ಲ. ಹೀಗಾಗಿಯೇ ಮೊನ್ನೆ ಕೆರಳಿ ಕೆಂಡವಾದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಹಿಳೆಯರ ಲೈಂಗಿಕ ದೌರ್ಜನ್ಯ ಕಾಯಿದೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಮಾಹಿತಿಯನ್ನು ಸೂಕ್ತವಾದ ಸಮಯಕ್ಕೆ ನೀಡದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆ ಎಚ್ಚೆತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಕೊನೆಗೂ ಪಾಶ್ ಕಮಿಟಿಯನ್ನು (Policy Against Se*ual Harassment) ರಚಿಸಿದೆ. ನಿರ್ದೇಶಕಿ, ನಿರ್ಮಾಪಕಿ ಕವಿತಾ ಲಂಕೇಶ್ ಅವರನ್ನು ಪಾಶ್ ಕಮಿಟಿಯ ಅಧ್ಯಕ್ಷೆಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದೆ. ಅವಕಾಶ ನೀಡುವ ನೆಪದಲ್ಲಿ, ಚಿತ್ರೀಕರಣದ ಸ್ಥಳದಲ್ಲಿ ನಡೆದಿರಬಹುದಾದ ಕಾಮಕಾಂಡವನ್ನು ಬಯಲಿಗೆಳೆಯಲು ಮುಂದಾಗಿದೆ.
ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ ರಚನೆಯಾದ ಈ ಸಮಿತಿಯಲ್ಲಿ ಹನ್ನೊಂದು ಸದಸ್ಯರಿದ್ದಾರೆ. ಆ ಪೈಕಿ ಆಯಾ ಅವಧಿಯ ಚುನಾಯಿತ ಅಧ್ಯಕ್ಷರು ಖಾಯಂ ಸದಸ್ಯರಾಗಿ ಈ ಸಮಿತಿಯಲ್ಲಿ ಇರಲಿದ್ದಾರೆ. ಇವರನ್ನು ಹೊರತು ಪಡಿಸಿದರೆ ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರಮೀಳಾ ಜೋಶಾಯ್, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ವಿಮಲಾ ಕೆ.ಎಸ್. ಹಿರಿಯ ವಕೀಲೆ ರಾಜಲಕ್ಷ್ಮಿ ಅಂಕಲಗಿ, ಟ್ರ್ಯಾನ್ಸ್‌ಜೆಂಟರ್ ಆಕ್ಟಿವಿಸ್ಟ್ ಮಲ್ಲು ಕುಂಬಾರ್, ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್, ಹಿರಿಯ ಪತ್ರಕರ್ತ ಮುರಳೀಧರ್ ಖಜಾನೆ, ರಂಗಕರ್ಮಿ ಶಶಿಕಾಂತ್ ಯಡಹಳ್ಳಿ ಮತ್ತು ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು ಈ ಪಾಶ್ ಕಮಿಟಿಯಲ್ಲಿ ಇದ್ದಾರೆ.

ಇನ್ನು, ಈ ವಿಚಾರಕ್ಕೆ ಸಂಬಂಧಿಸಿದಂತೆ 'ನಾನು ಗೌರಿ.ಕಾಮ್' ಗೆ ಪ್ರತಿಕ್ರಿಯೆ ನೀಡಿರುವ ಪಾಶ್ ಕಮಿಟಿಯ ಅಧ್ಯಕ್ಷೆ ಕವಿತಾ ಲಂಕೇಶ್, ಕಳೆದ ಐದು ವರ್ಷದ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ ಎಂದಿದ್ದಾರೆ. ಕಮಿಟಿ ಈಗಷ್ಟೇ ರಚನೆಯಾಗಿದೆ ಹಲವು ಕೆಲಸಗಳು ಇನ್ನೂ ಬಾಕಿ ಇವೆ ಎಂದಿರುವ ಕವಿತಾ ಲಂಕೇಶ್ ವಿವಿಧ ಕ್ಷೇತ್ರಗಳಿಂದ ಸದಸ್ಯರನ್ನು ಆಯ್ಕೆ ಮಾಡಿರುವುದು ಖುಷಿಯ ವಿಚಾರ ಎಂದಿದ್ದಾರೆ. ತಮ್ಮ ಮೇಲಾದ ದೌರ್ಜನ್ಯ, ಕಿರುಕುಳದ ಕುರಿತು ದೂರು ನೀಡಲು ಅನೇಕರು ಹಿಂಜರಿಯುತ್ತಾರೆ, ಮೊದಲಿಂದ ಈ ಸಮಸ್ಯೆ ಇದ್ದೇ ಇದೆ. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋದರು ಅಲ್ಲಿ ಹಿಂದೆ ನಿರ್ಲಕ್ಷ್ಯ ಮಾಡಲಾಗುತ್ತಿತ್ತು ಈ ಹಿನ್ನೆಲೆ ದೂರು ಬಂದರೆ ಏನು ಮಾಡಬಹುದು ಎಂದು ನಾವು ಆಲೋಚನೆ ಮಾಡಬೇಕಿದೆ ಎಂದಿದ್ದಾರೆ. ಹೆಲ್ಪ್‌ಲೈನ್ ಶುರು ಮಾಡುವ ಯೋಚನೆ ಇದೆ ಎಂದು ಹೇಳಿದ್ದಾರೆ.


Click it and Unblock the Notifications











