ಕೊಡಗಿನಲ್ಲಿ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಅದ್ಧೂರಿ ರಿಸೆಪ್ಷನ್ ; ತವರು ಮನೆಯಲ್ಲಿ ಸಂಭ್ರಮ,ಸಡಗರ, ಭರ್ಜರಿ ಆತಿಥ್ಯ
ಹೆಣ್ಣುಮಕ್ಕಳ ಪಾಲಿಗೆ ತವರು ಎನ್ನುವುದು ಕೇವಲ ಹುಟ್ಟಿದ ಮನೆಯಲ್ಲ, ಅದು ಅವಳ ಅಸ್ತಿತ್ವದ ಬೇರು. ಮದುವೆಯಾಗಿ ಹೊಸ ಬದುಕಿಗೆ ಮುನ್ನುಡಿ ಬರೆದ ನಂತರ ಆ ಬೇರಿನ ಮೇಲಿನ ಮಮಕಾರ ಮತ್ತಷ್ಟು ಗಾಢವಾಗುತ್ತೆ. ತವರಿನಿಂದ ದೈಹಿಕವಾಗಿ ದೂರವಾಗಿದ್ದರೂ ಕೂಡ ಮನಸ್ಸು ಮಾತ್ರ ತನ್ನ ತವರನ್ನು ನೆನೆಯುತ್ತಿರುತ್ತೆ.
ಗಂಡನ ಮನೆ ಜವಾಬ್ಧಾರಿಗಳ ನಡುವೆ ಮನದ ಮೂಲೆಯಲ್ಲಿ ತವರೂರಿನ ಹಸಿರು, ಅಮ್ಮನ ಕೈತುತ್ತು, ಅಪ್ಪನ ಮಮಕಾರ ನೆನಪಾಗುತ್ತಲೇ ಇರುತ್ತೆ. ಸದ್ಯ ಈ ನೆನಪುಗಳ ಬೆನ್ನತ್ತಿ ರಶ್ಮಿಕಾ ಮಂದಣ್ಣ ಮದುವೆಯ ನಂತರ ಮೊದಲ ಬಾರಿ ತನ್ನ ತವರೂರಿಗೆ ಬಂದಿದ್ದಾರೆ. ತನ್ನ ಜನರ ನಡುವೆ ಸಂಭ್ರಮಿಸಿದ್ಧಾರೆ. ಹಿರಿಯರ ಆಶೀರ್ವಾದ ಪಡೆದಿದ್ಧಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ಫೆಬ್ರವರಿ 26ರಂದು ಅದ್ಧೂರಿಯಾಗಿ ಮದುವೆಯಾದರು. ಉದಯಪುರ ಇವರ ಭವ್ಯ ಮದುವೆಗೆ ಸಾಕ್ಷಿಯಾಗಿತ್ತು. ಮದುವೆಯಾಗಿ ಒಂದೂವರೆ ತಿಂಗಳಾಗಿದೆ. ಆದರೆ ಸಂಭ್ರಮದ ವಾತಾವರಣ ಇನ್ನೂ ಹಾಗೇ ಇದೆ.
ಮದುವೆಯಾದ ನಂತರ ದೇವರಕೊಂಡ ಜನ್ಮಸ್ಥಾನ ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ತುಮ್ಮನಪೇಟೆಯಲ್ಲಿ ಸಂಭ್ರಮಾಚರಣೆ ಮಾಡಿದ್ದ ಈ ಜೋಡಿ 2000ಕ್ಕೂ ಅಧಿಕ ಜನರಿಗೆ ನಾನ್ ವೆಜ್ ಊಟ ಬಡಿಸಿತ್ತು.
ಆ ನಂತರ ಮಾರ್ಚ್ 4ರಂದು ಚಿತ್ರರಂಗದ ಸ್ನೇಹಿತರಿಗಾಗಿ ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದಾದ ನಂತರ ಥಾಯ್ಲೆಂಡ್‌ನಲ್ಲಿ ಬಡ್ಡಿಮೂನ್ (ಹನಿಮೂನ್ ) ಮುಗಿಸಿಕೊಂಡು ಕೆಲಸಕ್ಕೆ ವಿರೋಷ್ ಜೋಡಿ ಮರಳಿತ್ತು. ''ರಣಬಾಲಿ'' ಚಿತ್ರದ ಚಿತ್ರೀಕರಣಕ್ಕೆ ಪುನಃ ಚಾಲನೆ ನೀಡಿತ್ತು.
ಇನ್ನು ಮೊನ್ನೆ ಮೊನ್ನೆಯಷ್ಟೇ (ಏಪ್ರಿಲ್ 5 ) ರಶ್ಮಿಕಾ ಬರ್ತ್‌ಡೇಯನ್ನು ವಿಜಯ್ ದೇವರಕೊಂಡ ಅದ್ಧೂರಿಯಾಗಿ ಆಚರಿಸಿದ್ದರು. ಈಗ ಮದುವೆಯಾದ ಒಂದೂವರೆ ತಿಂಗಳ ನಂತರ ರಶ್ಮಿಕಾ ಮಂದಣ್ಣ ತಮ್ಮ ತವರು ಮನೆಗೆ ಗಂಡನ ಜೊತೆ ಬಂದಿದ್ದಾರೆ.
ಇನ್ನೂ ಆಗಲೇ ಹೇಳಿದಂತೆ ರಶ್ಮಿಕಾ ಮತ್ತು ವಿಜಯ್ ಮದುವೆ ಉದಯಪುರದಲ್ಲಿ ನಡೆದಿತ್ತು. ಈ ಹಿನ್ನೆಲೆ ವಿವಾಹ ಮಹೋತ್ಸವಕ್ಕೆ ಕೊಡಗಿನ ಅನೇಕ ಸಂಬಂಧಿಕರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೊಡಗಿನಲ್ಲೂ ಸಾಂಪ್ರದಾಯಿಕವಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸದ್ಯ ಸಂಭ್ರಮಿಸಿದ್ದಾರೆ.
ಡಿನ್ನರ್ ಪಾರ್ಟಿ ಮಾಡಿದ್ಧಾರೆ.
ಅದ್ಧೂರಿಯಾಗಿ ನಡೆದ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಕಪ್ಪು ಬ್ಲೇಜರ್, ಬಿಳಿ ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದರೆ, ರಶ್ಮಿಕಾ ಮಂದಣ್ಣ ಪಿಂಕ್ ಮತ್ತು ಆಲಿವ್ ಗ್ರೀನ್ ಬಣ್ಣದ ರೇಷ್ಮೆ ಸೀರೆಯಲ್ಲಿ ಕೊಡವ ಶೈಲಿಯಲ್ಲಿ ಕಂಗೊಳಿಸಿದ್ದಾರೆ.
ಕೂರ್ಗ್‌ನ ವಿರಾಜಪೇಟೆದಲ್ಲಿರುವ ಸೆರೆನಿಟಿ ಕನ್ವೆನ್ಷನ್ ಹಾಲ್‌ನಲ್ಲಿ ಈ ಸಮಾರಂಭ ನಡೆದಿದ್ದು ಬಂಧು ಬಳಗ, ಆಪ್ತರನ್ನಷ್ಟೇ ಆಹ್ವಾನಿಸಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಔತಣಕೂಟ ಮುಗಿಸಿದ್ದಾರೆ.
ಇನ್ನುಳಿದಂತೆ ಮದುವೆ ಉಡುಗೊರೆಯಾಗಿ ರಶ್ಮಿಕಾಗೆ ತಂದೆ ಮದನ್ ಮಂದಣ್ಣ ತಮ್ಮ ''ಸೆರಿನಿಟಿ'' ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಹಾಗೂ ಪತ್ನಿ ಸುಮನ್ ಮಂದಣ್ಣ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 142/1 ಹಾಗೂ 142/2 ಐಷಾರಾಮಿ (ಸೆರಿನಿಟಿ) ಬಂಗಲೆಯನ್ನು ರಶ್ಮಿಕಾ ಹೆಸರಿಗೆ ಖಾತೆ ಬದಲಾಯಿಸಿ ಕೊಟ್ಟಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಇಬ್ಬರು ಸದ್ಯ ''ರಣಬಾಲಿ'' ಎಂಬ ಚಿತ್ರವನ್ನು ಜೊತೆಯಾಗಿ ಮಾಡುತ್ತಿದ್ದಾರೆ. ಸತತ ಸೋಲುಗಳಿಂದ ಹೈರಾಣಾದ ವಿಜಯ್ ದೇವರಕೊಂಡ ಈ ಚಿತ್ರದ ಮೂಲಕ ಮೈಕೊಡವಿ ಎದ್ದು ನಿಲ್ಲುವ ನಿರೀಕ್ಷೆ ಇದೆ. ರಾಹುಲ್ ಸಂಕೃತ್ಯನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮದುವೆಯ ನಂತರ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚೊಚ್ಚಲ ಚಿತ್ರ ಇದಾದ ಹಿನ್ನೆಲೆ ಇವರ ಅಭಿಮಾನಿಗಳಲ್ಲಿ ಕುತೂಹಲ ಇದೆ. 1854 ರಿಂದ 1878 ರ ನಡುವಿನ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದ ಕಥೆಯನ್ನು ಚಿತ್ರ ಆಧರಿಸಿದೆ. ಸೆಪ್ಟೆಂಬರ್ 11 ರಂದು ವಿಶ್ವಾದ್ಯಂತ ಬಿಡುಗಡೆ ಮಾಡುವ ಇರಾದೆ ಚಿತ್ರತಂಡದ್ದು. ಈ ಚಿತ್ರ ಹೊರತು ಪಡಿಸಿದರೆ ರಶ್ಮಿಕಾ ಮಂದಣ್ಣ ಹಿಂದಿಯ ''ಕಾಕ್‌ಟೈಲ್ 2'' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ಧಾರೆ.


Click it and Unblock the Notifications











