ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್, ಮತ್ತಿಬ್ಬರು ಅರೆಸ್ಟ್ - ಯಾರು, ಎಲ್ಲಿಯವರು ?
ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗಾಗುತ್ತಿರುವ ಹಿಂಸೆಗಳು ಒಂದೆರಡಲ್ಲ. ಹೆಸರೇ ಗೊತ್ತಾಗದಂತೆ ಅಶ್ಲೀಲವಾದ ಮೆಸೇಜ್‌ಗಳನ್ನು ಮಾಡುವ ಅನೇಕರು ಹೆಣ್ಣು ಮಕ್ಕಳಿಗೆ ಇಲ್ಲಿ ಥರ ಥರದಲ್ಲಿ ಕಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಪ್ರೊಫೈಲ್ ಫೋಟೊಗಳನ್ನೂ ಬೇರೆ ಯಾವದ್ದೋ ಖಾತೆಯಲ್ಲಿ ಹಂಚಿಕೊಂಡು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತು ಅನೇಕರು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪ್ರಯತ್ನ...
ಮಾಡಿದರು ಕೂಡ ಇದಕ್ಕೆಲ್ಲ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಇನ್ನು ಚಿತ್ರರಂಗದವರ ಕಷ್ಟ ಹೇಳಲು ಅಸಾಧ್ಯ. ಹಲವು ನಾಯಕಿಯರು ಈ ಆನ್ ಲೈನ್ ಕಿರುಕುಳದಿಂದ ಬೇಸತ್ತಿದ್ದಾರೆ. ರಮ್ಯಾ ಅವರನ್ನೊಳಗೊಂಡು ಕೆಲವರು ಸಮರವನ್ನು ಕೂಡ ಸಾರಿದ್ದಾರೆ. ಆ ಪೈಕಿ ವಿಜಯಲಕ್ಷ್ಮಿ ದರ್ಶನ್ ಕೂಡ ಒಬ್ಬರು.

ಹೌದು, ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದವರ ವಿರುದ್ಧ ಕಿಡಿ ಕಾರಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ನಮ್ಮ ದೇಶದ ಕಾನೂನು ಮತ್ತು ವ್ಯವಸ್ಥೆ ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈಗಿನ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿಗೆ ಒಂದು ನ್ಯಾಯನಾ ಎಂಬರ್ಥದಲ್ಲಿ ಬರಹವನ್ನು ಹಂಚಿಕೊಂಡಿದ್ದರು.
ನನ್ನ ವಕೀಲರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಪ್ರಶ್ನೆ ಕೇಳಿದ ನಂತರವೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿರುವ ವಿಜಯಲಕ್ಷ್ಮಿ, ಈ ಹಿನ್ನೆಲೆ ನಾನೇ ವ್ಯೆಯಕ್ತಿಕವಾಗಿ ಹೋಗಿ ಅವರಿಗೆ ನೆನಪಿಸಬೇಕಾಯ್ತು ಎಂದು ಹೇಳಿದ್ದರು. ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಈ ವಿಳಂಬದ ಹಿಂದಿನ ಕಾರಣವಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ ಎಂದು ಕೂಡ ಹೇಳಿದ್ದ ವಿಜಯಲಕ್ಷ್ಮಿ, ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ನ್ಯಾಯವು ಅವಲಂಬಿತವಾಗಿರಬಾರದು ಎಂದು ಹೇಳಿದ್ದರು. ನಾನು ಇನ್ನೂ ಕಾಯುತ್ತಿದ್ದೇನೆ. ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಮ್ಮ ಆಕ್ರೋಶ -ಅಸಮಾಧಾನವನ್ನು ಹೊರ ಹಾಕಿದ್ದರು.

ಹೀಗೆ ವಿಜಯಲಕ್ಷ್ಮಿ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಪೊಲೀಸರು ಐಪಿ ಅಡ್ರೆಸ್ ಮೂಲಕ ವಿಜಯಲಕ್ಷ್ಮಿ ಅವರನ್ನು ಕಾಡಿದ ಕಿಡಿಗೇಡಿಗಳ ಪತ್ತೆ ಹಚ್ಚಿದ್ದರು. ಚಿಕ್ಕಬಾಣಾವರದ ಆಟೋ ಡ್ರೈವರ್ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಅವರನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಮತ್ತೆ ಇಬ್ಬರ ಬಂಧನವಾಗಿದೆ.
ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ನಾಗರಾಜ್ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು ಧಾರವಾಡದಲ್ಲಿ ಆಡಿಟರ್ ಆಗಿರುವ ಪ್ರಶಾಂತ್ ತಳವಾರ ಅವರನ್ನು ಕೂಡ ಅರೆಸ್ಟ್ ಮಾಡಿದ್ದಾರೆ. ಇವರಿಬ್ಬರ ಬಂಧನದಿಂದ ಈಗ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
ಸದ್ಯ ಪೊಲೀಸರ ಈ ಕಾರ್ಯಾಚರಣೆಯಿಂದ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ, ನಿಂದಿಸಿದ್ದವರಿಗೆ ನಡುಕು ಶುರುವಾದಂತಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಈ ಪ್ರಕರಣದಲ್ಲಿ ಮುಂಬರುವ ದಿನಗಳಲ್ಲಿ ಇನ್ನು ಕೆಲವರ ಬಂಧನವಾಗುವ ಸಾಧ್ಯತೆ ಇದೆ. ನಾಲ್ಕು ಜನರನ್ನು ಪೊಲೀಸರು ಬಂಧಿಸಿರುವ ಕುರಿತು ವಿಜಯಲಕ್ಷ್ಮಿ ದರ್ಶನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ದಿನಗಳಲ್ಲಿ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನುಳಿದಂತೆ ಈ ಹಿಂದೆ ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ನೀಡಿದ್ದ ದೂರಿನ ಮೇರೆಗೆ ಕೂಡ ಹಲವರನ್ನು ಬಂಧಿಸಲಾಗಿತ್ತು. ಹಲವು ದಿನಗಳವರೆಗೆ ಜಾಮೀನು ಸಿಗದೇ ಕಿಡಿಗೇಡಿಗಳು ಒದ್ದಾಡಿದ್ದರು.


Click it and Unblock the Notifications











